ಬಣಕಲ್:ಇಂದಿನ ಕಾಲಘಟ್ಟದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಹಿತ ದೃಷ್ಥಿಯಿಂದ ಸೇವೆ ಮಾಡುತ್ತಿದ್ದು ಸದಾ ಅವರ ರಕ್ಷಣೆಯಲ್ಲಿ ತೊಡಗಿ ಅಪರಾಧ ಪ್ರಕರಣಗಳನ್ನು ಹತ್ತಿಕ್ಕುವಲ್ಲಿ ರಾತ್ರಿ ಹಗಲು ಕಾರ್ಯ ನಿರ್ವಹಿಸುತ್ತಿದೆ. ಜೊತೆಗೆ ಸಮಾಜದ ಹಿತ ದೃಷ್ಟಿಯಿಂದ ಅಧಿಕಾರಿಗಳು ಜನಸ್ನೇಹಿಯಾಗಿ ಇರುತ್ತಿದ್ದು ಇದರಿಂದ ಜನರ ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಬಾಂಧವ್ಯ ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಬಣಕಲ್ ಠಾಣೆಯ ಪಿ ಎಸ್ ಐ ರೇಣುಕಾ ಹೇಳಿದರು.
ಪೊಲೀಸ್ ಇಲಾಖೆಯಿಂದ ಕೊಟ್ಟಿಗೆಹಾರದ ತರುವೆ ಏಕಲವ್ಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ‘ತೆರೆದ ಮನೆ’ ಎಂಬ ವಿನೂತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಮಹಿಳೆ ಮತ್ತು ವಿಧ್ಯಾರ್ಥಿಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು ಅವರ ರಕ್ಷಣೆಗಾಗಿ ಅನೇಕ ಕಾನೂನು ರೂಪಿಸಿದ್ದು ಹೆಣ್ಣು ಮಕ್ಕಳ ರಕ್ಷಣೆಗೆಂದು ವಿಶೇಷವಾಗಿ ಪೋಕ್ಸೋ ಕಾಯಿದೆ ತಂದಿದ್ದು ಇದು ಅವರಿಗೆ ವರದಾನವಾಗಿದೆ. ನಾವುಗಳು ಸದಾ ನಿಮ್ಮ ರಕ್ಷಣೆಗೆ ಬದ್ದರಾಗಿದ್ದೇವೆ.ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆ ಎಂದರೆ ಭಯ ಬೇಡ ನಿರ್ಭಯವಾಗಿ ನೀವು ದೂರು ನೀಡಿ, ನಿಮ್ಮ ರಕ್ಷಣೆಗಾಗಿ ನಾವು ರಾತ್ರಿ ಹಗಲು ಸೇವೆಯಲ್ಲಿ ಇರುತ್ತೇವೆ ಎಂದರು.
ಹೆಣ್ಣು ಮಕ್ಕಳು ಶಾಲೆಗೆ ಬರುವ ವೇಳೆಯಲ್ಲಿ ಕಿಡಿಗೇಡಿಗಳಿಂದ ತೊಂದರೆಗೆ ಒಳಗಾದರೆ ಭಯ ಪಡದೆ ಇಲಾಖೆಯ ಉಚಿತ ಸಹಾಯವಾಣಿ 112 ನಂಬರ್ ಕರೆ ಮಾಡಿ್ದರೆ ತಕ್ಷಣ ನಾವು ನಿಮ್ಮ ಸಹಾಯಕ್ಕೆ ಬರುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸಂತೋಷ್. ಅಭಿಷೇಕ್ ಸತೀಶ್ ನಾಗಪ್ಪತುಕ್ಕಣ್ಣವರ ಹಾಜರಿದ್ದರು.
—————ಸೂರಿ ಬಣಕಲ್