ತುಮಕೂರು-ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳಿದ್ದು ಅಲ್ಲಿಗೇ ಮಕ್ಕಳನ್ನು ಕಳಿಸುವ ಮೂಲಕ ಅವರಲ್ಲಿ ಭಾರತೀಯ ಮೌಲ್ಯಗಳು ಅಳವಡುವಂತೆ ಮಾಡಬೇಕು- ಬಿ.ಸುರೇಶ್‌ ಗೌಡ

ತುಮಕೂರು –ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳೂ ಇದ್ದು ಅಲ್ಲಿಗೇ ಮಕ್ಕಳನ್ನು ಕಳಿಸುವ ಮೂಲಕ ಅವರಲ್ಲಿ ಭಾರತೀಯ ಮೌಲ್ಯಗಳು ಅಳವಡುವಂತೆ ಮಾಡಬೇಕು ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ ಗೌಡರು ಬುಧವಾರ ಕರೆ ನೀಡಿದರು.

ಸರ್ಕಾರಿ ಶಾಲೆಯ ಮಕ್ಕಳಿಗೆ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ವತಿಯಿಂದ ವಾರದಲ್ಲಿ ಆರು ದಿನ ಮೊಟ್ಟೆ, ಚಿಕ್ಕಿ ಮತ್ತು ಬಾಳೆ ಹಣ್ಣು ನೀಡುವ ಕಾರ್ಯಕ್ರಮವನ್ನು ನಾಗವಲ್ಲಿ ಮತ್ತು ಬೆಳ್ಳಾವೆ ಸರ್ಕಾರಿ ಶಾಲೆಗಳಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಯ ಮಕ್ಕಳಿಗೆ ಅವರೇ ಆಹಾರ ಬಡಿಸಿ ಮಕ್ಕಳು ಮತ್ತು ಶಿಕ್ಷಕರ ಜತೆಗೆ ಸಂವಾದ ನಡೆಸಿದರು.

ʻಸರ್ಕಾರಿ ಶಾಲೆಗಳ ಮಕ್ಕಳಿಗೆ ಸರ್ಕಾರದ ವತಿಯಿಂದ ಸಮವಸ್ತ್ರ,ಷೂ, ಮಧ್ಯಾಹ್ನದ ಊಟ ಮಾತ್ರವಲ್ಲದೇ ಇದೀಗ ಮೊಟ್ಟೆಯಂಥ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮ ಆರಂಭವಾಗಿದೆ. ಸರ್ಕಾರದ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರು ಇರುತ್ತಾರೆ.ಈ ಶಾಲೆಗಳಲ್ಲಿ ಓದಿದವರೇ ಜೀವನದಲ್ಲಿ ದೊಡ್ಡ ಹುದ್ದೆಗಳಿಗೆ ಹೋಗಿ ತಲುಪಿದ್ದಾರೆ.ನಾನು ಕೂಡ ಇಂಥ ಸರ್ಕಾರಿ ಶಾಲೆಯಲ್ಲಿಯೇ ಓದಿ ಸಾರ್ವಜನಿಕ ಜೀವನಕ್ಕೆ ಬಂದೆʼ ಎಂದು ಅವರು ಹೇಳಿದರು.

ʻಕಾನ್ವೆಂಟ್‌ಗಳಿಗೆ ಮಕ್ಕಳನ್ನು ಕಳಿಸಿದರೆ ಅವರು ಬುದ್ಧಿವಂತರಾಗುತ್ತಾರೆ ಎಂಬ ಅಭಿಪ್ರಾಯವೂ ಇದೆ.ಆದರೆ,ಅನೇಕ ಕಾನ್ವೆಂಟ್‌ಗಳಲ್ಲಿ ಸೂಕ್ತ ಸೌಲಭ್ಯಗಳು ಇರುವುದಿಲ್ಲ.ಅಲ್ಲಿ ಸರ್ಕಾರಿ ಶಾಲೆಗಳಲ್ಲಿ ಇರುವ ಇಂಥ ಯಾವ ಸೌಕರ್ಯಗಳೂ ಇರುವುದಿಲ್ಲʼ ಎಂದು ಅವರು ತಿಳಿಸಿದರು.

ಸರ್ಕಾರಿ ಶಾಲೆಯ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ವಿತರಿಸಲು ದಾನ ಮಾಡಿದ ಅಜೀಂ ಪ್ರೇಮ್‌ಜಿ ಅವರ ಕೊಡುಗೈ ಗುಣವನ್ನು ಅವರು ಶ್ಲಾಘಿಸಿದರು ಎಲ್ಲ ಶ್ರೀಮಂತರು,ಉದ್ಯಮಿಗಳು ಹೀಗೆ ಸರ್ಕಾರದ ಶಾಲೆಗಳ ಬೆಂಬಲಕ್ಕೆ ಬಂದು ನಿಲ್ಲಬೇಕು.ತಮ್ಮ ಸಿಎಸ್‌ಆರ್‌ ನಿಧಿಯನ್ನು ಇದಕ್ಕೆ ಬಳಸಬೇಕು ಎಂದು ಅವರು ಕರೆ ಕೊಟ್ಟರು.

ತಾವು ಕೂಡ ತಮ್ಮ ಹಿಂದಿನ ಅವಧಿಯಲ್ಲಿ ತಮ್ಮ ಕ್ಷೇತ್ರದಾದ್ಯಂತ ಹತ್ತಾರು ಸರ್ಕಾರಿ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದ್ದುದನ್ನು ಅವರು ನೆನಪಿಸಿಕೊಂಡು ಸರ್ಕಾರದ ಶಾಲೆಗಳ ರಕ್ಷಣೆಗೆ ಮತ್ತು ಅಭಿವೃದ್ಧಿಗೆ ತಾವು ನಿರಂತರವಾಗಿ ಪ್ರಯತ್ನ ಮಾಡುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಬಿಇಒ ಹನುಮಂತಪ್ಪ, ಎಸ್ ಡಿ ಎಂ ಸಿ ಸದಸ್ಯರಾದ ನಾಗಣ್ಣ, ಮಂಗಳಮ್ಮ, ಮೂಡಲಗಿರಿಯಪ್ಪ ನಾಗರತ್ನಮ್ಮ, ಪಾಪಣ್ಣ, ಮುಖ್ಯೋಪಾಧ್ಯಾಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?