ಕೊಟ್ಟಿಗೆಹಾರ:ಉತ್ತಮ ಸಮಾಜ ನಿರ್ಮಾಣ ಮಾಡಲು ಶಿಕ್ಷಕರ ಪಾತ್ರ ಅಪಾರ ಎಂದು ಬಣಕಲ್ ಕಸಾಪ ಘಟಕದ ಅಧ್ಯಕ್ಷ ಬಿ.ಕೆ.ಲೋಕೇಶ್ ಹೇಳಿದರು.
ಕೊಟ್ಟಿಗೆಹಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಸಾಪ ವತಿಯಿಂದ ನಡೆದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ತಂದೆ,ತಾಯಿ,ಗುರುವಿಗೆ ಸಮಾಜದಲ್ಲಿ ಉತ್ತಮ ಸ್ಥಾನವಿದೆ.ಕರ್ನಾಟಕ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಬಣಕಲ್ ಹೋಬಳಿಯಲ್ಲಿ ನವೆಂಬರ್ ತಿಂಗಳಿನಲ್ಲಿ ವಿವಿಧ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯ ನಡೆಯಲಿದೆ’ಎಂದರು.
ಜಿಲ್ಲಾ ಕಸಾಪದ ಪ್ರಧಾನ ಸಂಚಾಲಕ ಮಗ್ಗಲಮಕ್ಕಿ ಗಣೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ’ ಕನ್ನಡ ಬೆಳೆಯಬೇಕಾದರೆ ನಾವು ನಿತ್ಯ ಭಾಷೆ ಬಳಸುವ ಮೂಲಕ ಭಾಷಾಭಿವೃದ್ದಿ ಸಾಧ್ಯ’ಎಂದರು.
ಜಿಲ್ಲಾ ಕಸಾಪದ ಸಂಘಟನಾ ಕಾರ್ಯದರ್ಶಿ ಬಕ್ಕಿ ಮಂಜುನಾಥ್ ಮಾತನಾಡಿ’ ಕೊಟ್ಟಿಗೆಹಾರ ಪ್ರೌಢಶಾಲೆಯ ಶಿಕ್ಷಕರಾದ ಶಿವರಾಮೇಗೌಡ, ಅಶ್ವಿನಿ ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಶಾಲೆಗೆ ಉತ್ತಮ ಫಲಿತಾಂಶ ನೀಡಿರುವುದರಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಅರಸಿ ಬಂದಿದೆ.ಮುಂದೆಯೂ ಕಲಿಸುವ ಶಾಲೆಗೆ ಉತ್ತಮ ಫಲಿತಾಂಶ ನೀಡುವಂತಾಗಲಿ’ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಶಿವರಾಮೇಗೌಡ ಶಿಕ್ಷಕರಿಗೆ ಪ್ರಶಸ್ತಿ ಬರುವುದು ಮಕ್ಕಳು ಶಾಲೆಗೆ ಉತ್ತಮ ಫಲಿತಾಂಶ ಕೊಟ್ಟಾಗ ಮಾತ್ರ ಸಾಧ್ಯ.ಪ್ರಶಸ್ತಿಯಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ’ಎಂದರು.
ಶಿಕ್ಷಕಿ ಅಶ್ವಿನಿ ಮಾತನಾಡಿ’ ಉತ್ತಮ ಗುರುಗಳಿಂದ ಶಿಕ್ಷಣದ ಜೊತೆಗೆ ಭರತನಾಟ್ಯ,ಜನಪದ ನೃತ್ಯ ಕಲಿತಿದ್ದೇನೆ.ಕಲಿತ ವಿದ್ಯೆಯನ್ನು ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದೇನೆ.ಪ್ರಶಸ್ತಿ ಬಂದಿರುವುದು ಖುಶಿ ತಂದಿದೆ’ಎಂದರು.
ಪ್ರೌಢಶಾಲಾ ಸಮಿತಿ ಮಾಜಿ ಅಧ್ಯಕ್ಷ ಸಂಜಯ್ ಗೌಡ ಶಾಲಾ ಅಭಿವೃದ್ದಿ ಕುರಿತಾಗಿ ಮಾತನಾಡಿದರು.
ಸಮಾರಂಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿವರಾಮೇಗೌಡ ಹಾಗೂ ಹೊಸಕೆರೆ ಶಾಲಾ ಶಿಕ್ಷಕಿ ಅಶ್ವಿನಿಯವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ಪದಾಧಿಕಾರಿಗಳಾದ ರಾಮಚಂದ್ರ,ಪರೀಕ್ಷಿತ್ ಜಾವಳಿ,ಸುಪ್ರೀತ್,ವಸಂತ್ ಕುಮಾರ್, ಭಕ್ತೇಶ್ ,ಶಿಕ್ಷಕರಾದ ಕಿರಣ್ ಕುಮಾರ್,ಸತೀಶ್, ಶಿಕ್ಷಕಿಯರಾದ ಶೈನಿ ತಂಬಿ, ಮೇಘನಾ,ನೌಶಿಭಾ, ಪಿಡಿಒ ಮಹೇಶ್ ಮತ್ತಿತರರು ಇದ್ದರು.ಶಿಕ್ಷಕ ವಸಂತ್ ಹಾರ್ಗೋಡು ಸ್ವಾಗತಿಸಿದರು.ಶಿಕ್ಷಕ ಭಕ್ತೇಶ್ ಕಾರ್ಯಕ್ರಮ ನಿರೂಪಿಸಿದರು.