ನಾಗಮಂಗಲ;ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿರುವ ಗುರುಗಳಿಂದ ಮಾತ್ರ ಸಮಾಜದ ಪರಿವರ್ತನೆ ಮಾಡಲು ಸಾಧ್ಯ-ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯ

ನಾಗಮಂಗಲ;ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿರುವ ಗುರುಗಳಿಂದ ಮಾತ್ರ ಸಮಾಜದ ಪರಿವರ್ತನೆ ಮಾಡಲು ಸಾಧ್ಯ. ಶಿಕ್ಷಕರು ಮಕ್ಕಳಿಗೆ ಜವಾಬ್ದಾರಿ, ಮುಂದಿನ ಜೀವನ ಮತ್ತು ದೇಶದ ಇತಿಹಾಸದ ಬಗ್ಗೆ ಎಷ್ಟರ ಮಟ್ಟಿಗೆ ಅರಿವು ಮೂಡಿಸುತ್ತೀರೋ ಅದು ಮುಂದಿನ ದಿನಗಳಲ್ಲಿ ಈ ದೇಶದ ಬದಲಾವಣೆಗೆ ಬುನಾದಿಯಗುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ಟಿ.ಬಿ.ಬಡಾವಣೆಯಲ್ಲಿರುವ ಎಂ.ಆರ್‌.ಪಿ ಶ್ರೀ ನಂಜುoಡೇಶ್ವರ ಪ್ಯಾಲೇಸ್‌ನಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶಿಕ್ಷಕರ ದಿನಾಚರಣೆ ಸಮಿತಿಯ ಸಹಭಾಗಿತ್ವದಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಸರಿಯಾದ ರೀತಿಯಲ್ಲಿ ತಿದ್ದುವ ಅವಕಾಶವಿರುವುದು ಪೋಷರನ್ನು ಬಿಟ್ಟರೆ ಶಿಕ್ಷಕರಿಗೆ ಮಾತ್ರ. ಶಿಕ್ಷಕರೆಂದರೆ ಕೇವಲ ಮಕ್ಕಳಿಗೆ ಪಾಠ ಮಾಡಿ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಷ್ಟೇ ಅಲ್ಲ. ಸಮಾಜದ ಬದಲಾವಣೆಗೆ ಜನರನ್ನು ಪರಿವರ್ತನೆ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಮಕ್ಕಳಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿ ಜವಾಬ್ದಾರಿ ಮತ್ತು ದೇಶದ ಬಗ್ಗೆ ಅಭಿಮಾನದ ಅರಿವು ಮೂಡಿಸದಿದ್ದರೆ ಮುಂದಿನ ದಿನಗಳಲ್ಲಿ ಅಂತಹ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಉದ್ಯೋಗ ಪಡೆದರೂ ಸಹ ಸಮಾಜದಲ್ಲಿ ಅನೇಕ ವ್ಯತ್ಯಾಸಗಳಾಗುತ್ತವೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಬದ್ಧತೆ ಬೆಳೆಯಬೇಕು. ದೇಶದ ಬಗ್ಗೆ ಗೌರವ ಪ್ರೀತಿಯ ಜೊತೆಗೆ ದೇಶ ಎಂದರೆ ಜನ ಜನ ಎಂದರೆ ದೇಶ ಎನ್ನುವ ಭಾವನೆ ಬರಬೇಕು. ಇದನ್ನೆಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿಯೇ ಶಿಕ್ಷಕರು ಮಕ್ಕಳಿಗೆ ಕಲಿಸಬೇಕು. ಇಲ್ಲದಿದ್ದರೆ ಐ.ಎ.ಎಸ್, ಐ.ಪಿ.ಎಸ್ ಶಿಕ್ಷಣ ಪಡೆದು ಬರುವ ಅನೇಕರು ಆಡಳಿತದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿರುತ್ತದೆ. ಹಲವು ಮಂದಿ ತಂದೆ ತಾಯಂದಿರಿಗೆ ಊಟ ಹಾಕುವುದಿಲ್ಲ, ಅಣ್ಣ ತಮ್ಮಂದಿರಿಂದ ದೂರ ಇರುತ್ತಾರೆ. ಇಂತಹ ಅನೇಕ ಬದಲಾವಣೆ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಹಾಗಾಗಿ ಶಿಕ್ಷಕರು ಹೆಚ್ಚು ಜವಾಬ್ದಾರಿ ವಹಿಸಿ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಬೇಕು ಎಂದರು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಗ್ರಾಮೀಣ ಪ್ರದೇಶದ ಮಕ್ಕಳು ಐ.ಎ.ಎಸ್, ಐ.ಪಿ.ಎಸ್ ಸೇರಿದಂತೆ ಉನ್ನತ ಮಟ್ಟದ ಅಧಿಕಾರಗಳಾಗುವಂತೆ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಶಿಕ್ಷಕರ ಸಮಸ್ಯೆ ಮತ್ತು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧವಾಗಿ ನಿಮ್ಮ ಜೊತೆ ನಿಂತಾಗ ಶಿಕ್ಷಕರಾದ ನೀವು ಸಮಾಜ ಮತ್ತು ಸಮುದಾಯಕ್ಕೆ ನಾವು ಯಾವ ರೀತಿ ಕೊಡುಗೆ ನೀಡಬೇಕೆಂಬುದನ್ನು ಬಹು ಮುಖ್ಯವಾಗಿ ಯೋಚಿಸಬೇಕಿದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಸರಿಯಾದ ವಿದ್ಯಾಭ್ಯಾಸ ಸಿಗುವುದಿಲ್ಲವೆಂದು ಪೋಷಕರು ನಗರ ಪ್ರದೇಶದ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇದರಿಂದಾಗಿ ಪೋಷಕರಿಗೆ ಆರ್ಥಿಕವಾಗಿ ಬಹಳಷ್ಟು ಹೊರೆ ಬೀಳುತ್ತಿದೆ. ಹಿಂದೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಅನೇಕರು ವಿಜ್ಞಾನಿಗಳೂ ಸೇರಿದಂತೆ ಅತ್ಯುನ್ನತ ಸ್ಥಾನದಲ್ಲಿದ್ದುಕೊಂಡು ದೇಶ ಸೇವೆ ಮಾಡುತ್ತಿದ್ದಾರೆ. ಇಂದಿನ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಪೋಷಕರಲ್ಲಿ ಭರವಸೆ ಮೂಡಿಸಿದರೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೋಷಕರು ಸಾಲ ಮಾಡುವ ಪ್ರಮೇಯವೇ ಬರುವುದಿಲ್ಲ. ಹಾಗಾಗಿ ಎಲ್ಲ ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ಮನವಿ ಮಾಡಿಕೊಂಡರು.

———————ರವಿ ಬಿ ಹೆಚ್

Leave a Reply

Your email address will not be published. Required fields are marked *

× How can I help you?