ಶ್ರವಣಬೆಳಗೊಳ:ಪ್ರತಿಯೊಬ್ಬರಿಗೂ ಆರೋಗ್ಯದ ಕಾಳಜಿ ಬಹಳ ಮುಖ್ಯವಾಗಿದ್ದು, ಶುದ್ಧವಾದ ನೀರಿನಿಂದ ಉತ್ತಮ ಆರೋಗ್ಯ, ಆರೋಗ್ಯವಂತ ವ್ಯಕ್ತಿಯಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಇದರಿಂದ ಬಲಿಷ್ಠ ಭಾರತದ ಕನಸು ಸಾಕಾರಗೊಳ್ಳುತ್ತದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಬಿ.ಆರ್.ಯುವರಾಜ್ ಹೇಳಿದರು.
ಪಟ್ಟಣದ ವಿದ್ಯಾನಂದ ನಿಲಯದ ಆವರಣದಲ್ಲಿ ಮಂಗಳವಾರ ಶ್ರೀ ದಿಗಂಬರ ಜೈನ ಮಹಾ ಸಂಸ್ಥಾನ ಮಠದ ವತಿಯಿಂದ ವೋಲ್ವೋ ಗ್ರೂಪ್ ಆಫ್ ಸಿ.ಎಸ್.ಆರ್. ಸಂಸ್ಥೆ ಸಹಯೋಗದೊಂದಿಗೆ ನೂತನವಾಗಿ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜೀವಜಲ ಬಹಳ ಮುಖ್ಯವಾಗಿದ್ದು, ಇತ್ತೀಚೆಗೆ ಫ್ಲೋರೈಡ್ ಯುಕ್ತ ನೀರಿನಿಂದ ಮನುಷ್ಯ ಹಲವಾರು ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.ಶುದ್ಧ ಕುಡಿಯುವ ನೀರನ್ನು ಜನರಿಗೆ ಒದಗಿಸಬೇಕೆಂಬುದು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಕನಸಾಗಿತ್ತು. ಈಗ ಶ್ರೀಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿಯವರು ಸಾಕಾರಗೊಳಿಸಿದ್ದಾರೆ.
ಪರಮಪೂಜ್ಯ ಶ್ರೀಗಳವರ ದೂರದೃಷ್ಟಿಯಿಂದ 2006ರಲ್ಲಿ ಕೇವಲ 5 ಹಾಸಿಗೆಗಳಿದ್ದ ಆಸ್ಪತ್ರೆಯನ್ನು 30 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ. ಅಲ್ಲದೆ ಗ್ರಾಮೀಣ ಭಾಗದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಬಾಹುಬಲಿ ಮಕ್ಕಳ ಆಸ್ಪತ್ರೆಯನ್ನು ಪ್ರಾರಂಭಿಸಿ ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ಅಂದಿನ ರಾಷ್ಟ್ರಪತಿಗಳಾದ ಡಾ. ಎಪಿಜೆ ಅಬ್ದುಲ್ ಕಲಾಂ ರವರಿಂದ ಉದ್ಘಾಟನೆಗೊಂಡಿದ್ದು ವಿಶೇಷವಾಗಿತ್ತು. ಅಲ್ಲದೆ ಸಾಮಾಜಿಕ ಕಳಕಳಿಯೊಂದಿಗೆ ಗ್ರಾಮೀಣ ಭಾಗದ ಜನರ ಆರೋಗ್ಯದ ದೃಷ್ಟಿಯಿಂದ ಜನ ಕಲ್ಯಾಣ ಯೋಜನೆ ಅಡಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ, ಉಚಿತವಾಗಿ ಚಿಕಿತ್ಸೆ ಕೊಡಿಸಿದ್ದನ್ನು ಸ್ಮರಿಸಿದರು.
ನೂತನ ಶ್ರೀಗಳು ಶ್ರವಣಬೆಳಗೊಳದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿದ್ದು, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಮನುಷ್ಯ ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸಲು ಆರೋಗ್ಯ, ಶಿಕ್ಷಣ ಮತ್ತು ಧಾರ್ಮಿಕ ಸಂಸ್ಕಾರ ಬಹಳ ಮುಖ್ಯವಾಗಿದ್ದು, ಇದನ್ನು ಮನಗಂಡ ಪೂಜ್ಯಶ್ರೀಗಳು ಹಲವಾರು ಯೋಜನೆಗಳನ್ನು ರೂಪಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ತಿಳಿಸಿದರು.
ವೋಲ್ವೋ ಗ್ರೂಪ್ ಆಫ್ ಸಿ.ಎಸ್.ಆರ್. ಸಂಸ್ಥೆಯ ನಿರ್ದೇಶಕ ಜಿ.ವಿ.ರಾವ್ ಮಾತನಾಡಿ, ಅಂತರ್ಜಲದ ಮಟ್ಟ ಕುಸಿದಿರುವ ಕಾರಣ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿದ್ದು, ಇದರಿಂದ ಮನುಷ್ಯ ಹಲವಾರು ಬಗೆಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನಮ್ಮ ಜವಾಬ್ದಾರಿಯನ್ನು ಅರಿತು ಸಾಮಾಜಿಕವಾಗಿ ಕಾರ್ಯನಿರ್ವಹಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಪ್ರತಿನಿತ್ಯ ಸಾವಿರಾರು ಯತ್ರಾರ್ತಿಗಳು ಆಗಮಿಸುವ ವಿಶ್ವವಿಖ್ಯಾತ ಶ್ರವಣಬೆಳಗೊಳದಲ್ಲಿ ಪೂಜ್ಯಶ್ರೀಗಳವರ ಆಶಯದಂತೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿರುವುದು ಸಂತಸ ತಂದಿದೆ.
ಪಕ್ಕದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಬಸ್ ನಿಲ್ದಾಣ ಹಾಗೂ ವಸತಿ ನಿಲಯಗಳು ಇದ್ದು, ಪ್ರತಿನಿತ್ಯ ನೂರಾರು ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಫ್ತಾಬ್ ಪಾಷಾ, ಮಾಜಿ ಅಧ್ಯಕ್ಷ ಎಸ್.ಆರ್.ಲೋಕೇಶ್, ಎಸ್.ಡಿ.ಜೆ.ಎಂ.ಐ.ಎಂ.ಸಿ.ಟ್ರಸ್ಟ್ ಕಾರ್ಯಾಧ್ಯಕ್ಷ ಹೆಚ್.ಪಿ.ಅಶೋಕ್ ಕುಮಾರ್, ಕಾರ್ಯದರ್ಶಿ ಎಸ್.ಪಿ.ಮಹೇಶ್, ಹೆಚ್ಚುವರಿ ಕಾರ್ಯದರ್ಶಿ ಜಿ.ಡಿ.ಪಾಶ್ವಥ್, ಎಸ್.ಎಸ್.ಡಿ.ಜೆ.ಪಿ ಸಂಘದ ಕಾರ್ಯದರ್ಶಿ ಬಬನ್ ಪಿ. ದತವಾಡೆ, ವಸತಿ ವಿಭಾಗದ ವ್ಯವಸ್ಥಾಪಕ ಆನಂದ್ ಮುಂತಾದವರಿದ್ದರು.