ಬೇಲೂರು-ತಹಶೀಲ್ದಾರ್ ಮಮತಾರವರಿಗೆ ‘ಶ್ರೀ ಲಕ್ಷ್ಮಿ ಮಂಗಳವಾಧ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್’ ವತಿಯಿಂದ ಪ್ರತಿಷ್ಠಿತ “ಸಮಾಜ ಸೇವಾ ರತ್ನ” ಪ್ರಶಸ್ತಿ ಪ್ರಧಾನ

ಬೇಲೂರು-ಸರ್ಕಾರಿ ಅಧಿಕಾರಿಗಳಲ್ಲಿ ಸಾಮಾನ್ಯ ಜನರಿಗೆ ಹತ್ತಿರವಾಗಿ ಕೆಲಸ ಮಾಡುವವರ ಸಂಖ್ಯೆ ತುಂಬಾ ವಿರಳ. ಅಂತಹವರ ಮಧ್ಯೆ ಸಾಮಾಜಿಕ ಕಳಕಳಿಯಿಂದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ನಮ್ಮ ಬೇಲೂರು ತಾಲೂಕಿನ ತಹಶೀಲ್ದಾರ್ ಮಮತಾ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶ್ರೀ ಲಕ್ಷ್ಮಿ ಮಂಗಳವಾಧ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ (ರಿ) ಅಧ್ಯಕ್ಷರಾದ ನರಸಿಂಹಸ್ವಾಮಿ ತಿಳಿಸಿದರು.

ತಾಲೂಕು ದಂಡಾಧಿಕಾರಿಗಳಾದ ಎಂ.ಮಮತಾ ಅವರಿಗೆ ಟ್ರಸ್ಟ್ ನ ವತಿಯಿಂದ ನೀಡಲಾಗುವ ಪ್ರತಿಷ್ಠಿತ “ಸಮಾಜ ಸೇವಾ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿ ಅವರು ಮಾತನಾಡಿದರು.

ಮಮತಾರವರು ಜನಸಾಮಾನ್ಯರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಸಾರ್ವಜನಿಕರಿಗೆ ಅತ್ಯುತ್ತಮ ಆಡಳಿತ ಸೇವೆ ನೀಡಿರುವುದು ಸಂತಸ ತಂದಿದೆ.ಇಂದು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜಯಂತಿ ಆಚರಣೆಯ ಸುಸಂದರ್ಭದಲ್ಲಿ ‘ಸಮಾಜ ಸೇವಾರತ್ನ’ಪ್ರಶಸ್ತಿ ನೀಡುವ ಮೂಲಕ ಅವರನ್ನು ಗೌರವಿಸುತ್ತಿರುವುದು ನಮ್ಮ ಶ್ರೀ ಲಕ್ಷ್ಮಿ ಮಂಗಳವಾಧ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ಗೆ ಒಂದು ಮೆರಗು ಸಿಕ್ಕಂತಾಗಿದೆ ಎಂದರು .

ಸಮಾಜ ಸೇವಕ ಸುಲೆಮಾನ್ ಮಾತನಾಡಿ,ಬೇಲೂರು ಇತಿಹಾಸದಲ್ಲಿ ಪ್ರಥಮ ಬಾರಿಗೆ ಒಬ್ಬ ದಂಡಾಧಿಕಾರಿ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳನ್ನು ಪರಿಹರಿಸಲು ತಾಲೂಕು ಆಡಳಿತವನ್ನೇ ಹಳ್ಳಿಗಳಿಗೆ ಕೊಂಡೊಯ್ದು ಕಾರ್ಯ ನಿರ್ವಹಿಸುತ್ತಿರುವ ಬಗೆ ಶ್ಲಾಘನೀಯವಾದದ್ದು.

ಇವರ ಕೆಲಸಗಳು ಇಡೀ ರಾಜ್ಯದ ಅಧಿಕಾರಿ ವರ್ಗಕ್ಕೆ ಮಾದರಿಯಾಗುವಂತಹವುಗಳು.ಮಮತಾರವರು ತಾವು ಕಾರ್ಯನಿರ್ವಹಿಸಿದ ಎಲ್ಲಾ ತಾಲೂಕುಗಳಲ್ಲೂ ಹೀಗೆಯೇ ದಿಟ್ಟತನದಿಂದ ಸೇವೆ ಸಲ್ಲಿಸಿ ಜನಮಾನಸದಲ್ಲಿ ಬೇರೂರಿದ್ದಾರೆ. ಬೇಲೂರು ಇವರನ್ನು ತಲೆ-ತಲೆಮಾರಿಗೂ ನೆನಪಿಡಲಿದೆ ಎಂದರು.

ಈ ವೇಳೆ ಬೇಲೂರು ತಾಲ್ಲೂಕು ಸವಿತಾ ಸಮಾಜದ ಮಹಿಳಾ ಸಂಘದ ಕಾರ್ಯದರ್ಶಿ ಗೀತಾ, ಶ್ರೀ ಲಕ್ಷ್ಮಿ ಮಂಗಳ ವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಅನೀಲ್ ಕುಮಾರ್, ನಿರ್ದೇಶಕರಾದ ಬಿ.ಕೆ ವಿಷ್ಣು ಪ್ರಸಾದ್, ಕೇಶವಮೂರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.

————ನೂರ್ ಅಹಮ್ಮದ್

Leave a Reply

Your email address will not be published. Required fields are marked *

× How can I help you?