ಬೇಲೂರು-ಶಿಕ್ಷಕರಾದ ಟಿ ಸಿ ಸಂಪತ್ ಮತ್ತು ನಾವು ಹಲವಾರು ವರ್ಷಗಳು ಶಾಲೆಯಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಿದ್ದೇವೆ, ಆಗಲೇ ಸಂಪತ್ ರವರ ಪ್ರಾಮಾಣಿಕತೆ ಕಾರ್ಯ ಚಟುವಟಿಕೆ ಹಾಗೂ ಸೇವಾ ಗುಣದ ಬಗ್ಗೆ ಅರಿವಿತ್ತು.ಅವರಿಗೆ ಪ್ರತಿಷ್ಠಿತ “ಸಾಲುಮರದ ತಿಮ್ಮಕ್ಕ ಗೌರವ” ಪ್ರಶಸ್ತಿ ಬಂದಿರುವುದು ವೈಯಕ್ತಿಕವಾಗಿ ನನಗೆ ಖುಷಿ ತಂದಿದೆ ಎಂದು ಎಸ್ ಸಿ-ಎಸ್ ಟಿ ನೌಕರರ ಜಾಗೃತಿ ವೇದಿಕೆಯ ಅಧ್ಯಕ್ಷ ಐ.ಇ ಮಂಜಯ್ಯ ಹೇಳಿದರು.
ನಗರದ ಪ್ರಾರ್ಥನಾ ಅಕಾಡೆಮಿಯಲ್ಲಿ ರಾಜ್ಯಮಟ್ಟದ “ಸಾಲುಮರದ ತಿಮ್ಮಕ್ಕ ಗೌರವ” ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಸಂಪತ್ ಟಿ.ಸಿ ಯವರಿಗೆ ಬೇಲೂರು ತಾಲೂಕು ಎಸ್. ಸಿ-ಎಸ್. ಟಿ ನೌಕರರ ಜಾಗೃತಿ ವೇದಿಕೆಯಿಂದ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಪತ್ ಟಿ ಸಿ ರವರು ಬೇಲೂರು ತಾಲೂಕಿನ 24*7 ಸಮಾಜ ಸೇವಾ ತಂಡದ ಜೊತೆ ಸಕ್ರೀಯವಾಗಿ ಭಾಗವಹಿಸಿ ದಿನದ 24 ಗಂಟೆಗಳಲ್ಲಿ ಯಾವಾಗಲೂ ಸಮಾಜದ ಸೇವೆಗೆ ಸಿದ್ದರಾಗಿರುತ್ತಾರೆ.ಅವರ ಈ ಸೇವೆಯನ್ನು ಕಂಡು ನಮಗೆ ತುಂಬಾ ಆಶ್ಚರ್ಯ ಮತ್ತು ಸಂತೋಷ ಎರಡು ಇದೆ. ಒಬ್ಬ ವ್ಯಕ್ತಿ ಅದರಲ್ಲೂ ಸರ್ಕಾರಿ ನೌಕರರು ತಾವು ತಮ್ಮ ಕುಟುಂಬ ಎಂದು ಸ್ವಾರ್ಥದಲ್ಲಿ ಜೀವನ ನಡೆಸುತ್ತಿರುವಾಗ ಶಿಕ್ಷಕ ಸಂಪತ್ ರಂತಹ ವ್ಯಕ್ತಿಗಳು ಸಮಾಜವನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಂಪತ್ ರವರ ಸೇವೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪುತ್ತಿದ್ದು ಇದು ಸಮಾಜವನ್ನು ಸದೃಢ ಮಾಡುವ ಕಾಯಕವಾಗಿದೆ ಹಾಗಾಗಿ ಇವರಿಗೆ ಸಂದಿರುವ ಪ್ರಶಸ್ತಿ ಖುಷಿ ಕೊಟ್ಟಿದೆ.
ಮುಂದಿನ ದಿನಗಳಲ್ಲಿ ಇವರ ಸೇವೆಯನ್ನು ಗೌರವಿಸಿ ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಇನ್ನಷ್ಟು ಪ್ರಶಸ್ತಿಗಳನ್ನು ನೀಡಿ ಜವಾಬ್ದಾರಿಯನ್ನು ಹೆಚ್ಚಿಸಬೇಕಿದೆ. ನಮ್ಮ ಸಂಘದ ವತಿಯಿಂದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಮಾಡೋಣ ಎಂದಾಗ ನಮ್ಮ ಸಂಘದ ಸದಸ್ಯರೆಲ್ಲರೂ ಒಮ್ಮತದಿಂದ ನಮ್ಮೊಂದಿಗೆ ಸಹಕರಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ವಂದಿಸುತ್ತಾ ಈ ಸಂದರ್ಭದಲ್ಲಿ ಶಿಕ್ಷಕ ಸಂಪತ್ ರವರಿಗೆ ಅಭಿನಂದಿಸುತ್ತಿದ್ದೇನೆ ಎಂದರು.
ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಸಂಪತ್ ಟಿಸಿ ರವರು “ನಾನು ಎಂದಿಗೂ ಪ್ರಶಸ್ತಿಗಳ ಬೆನ್ನು ಬಿದ್ದವನಲ್ಲ.ಚಿಕ್ಕವಯಸ್ಸಿನಿಂದಲೂ ಬಡತನ ಹಾಗೂ ಸಾಮಾಜಿಕ ಸ್ತರ ವಿನ್ಯಾಸದ ವಿರುದ್ಧ ಹೋರಾಟ ಮಾಡಿಕೊಂಡು ಶಿಕ್ಷಣ ಪಡೆದು ನೌಕರನಾಗಿದ್ದೇನೆ.
ನನ್ನ ಜೀವನದ ಪ್ರತಿ ಹಂತದಲ್ಲೂ ಸಮಾಜದ ಕೆಟ್ಟ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿಕೊಂಡು ನನ್ನ ಕೈಲಾದ ಮಟ್ಟಿಗೆ ಶೋಷಿತರು ದಮನಿತರು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಅಭಿವೃದ್ಧಿಗೆ ಶ್ರಮಿಸಿರುತ್ತೇನೆ. ಕೋವಿಡ್ ಸಮಯದಲ್ಲಿ ಇಡೀ ಪ್ರಪಂಚವೇ ಸ್ತಬ್ಧವಾಗಿದ್ದಾಗಲೂ ನಾನು ಜನರ ಸೇವೆಯಲ್ಲಿ ನಿರತನಾಗಿದ್ದೆ. ಇದಕ್ಕೆ ನನಗೆ ಶಕ್ತಿಯಾಗಿ ನಿಂತಿದ್ದು ನನ್ನ ಧರ್ಮಪತ್ನಿಯವರು. ಈ ಸಂದರ್ಭದಲ್ಲಿ ಅವರಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದು ಹೇಳಿದರು.
ಸಮಾಜದ ಪ್ರತಿಯೊಬ್ಬರು ಈ ಸಮಾಜದಿಂದ ಪಡೆದ ಉತ್ತಮ ಫಲವನ್ನು ಮತ್ತೆ ಸಮಾಜಕ್ಕೆ ವಿವಿಧ ರೀತಿಯಲ್ಲಿ ಹಿಂದಿರುಗಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ನಾನು ಕಾರ್ಯಪ್ರವೃತ್ತನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ನಾನು ಎಂದಿಗೂ ಪ್ರಶಸ್ತಿಗಾಗಿ ಕೆಲಸ ಮಾಡಿಲ್ಲ. ಆದರೆ ನನ್ನ ಸೇವೆಯನ್ನು ಗುರುತಿಸಿ ಸಾಲುಮರದ ತಿಮ್ಮಕ್ಕ ಗೌರವ ಪ್ರಶಸ್ತಿಯನ್ನು ನೀಡಿರುವುದಕ್ಕೆ ಸಂಘಟಕರಿಗೆ ಧನ್ಯವಾದಗಳು. ಈ ಪ್ರಶಸ್ತಿಗಳು ನನ್ನನ್ನು ಇನ್ನಷ್ಟು ಸಮಾಜಮುಖಿ ಕೆಲಸ ಮಾಡಲು ಪ್ರೇರೇಪಿಸುತ್ತವೆ. ಈ ಸಂದರ್ಭದಲ್ಲಿ ನನ್ನನ್ನು ಸನ್ಮಾನಿಸಿದ ಬೇಲೂರು ತಾಲೂಕು ಎಸ್.ಸಿ-ಎಸ್.ಟಿ ನೌಕರರ ಜಾಗೃತ ವೇದಿಕೆಯ ಅಧ್ಯಕ್ಷರಾದ ಐ.ಇ ಮಂಜಯ್ಯನವರಿಗೂ ಹಾಗೂ ಎಲ್ಲಾ ಪದಾಧಿಕಾರಿಗಳಿಗೂ ನನ್ನ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.
ಈ ಕಾರ್ಯಕ್ರಮವನ್ನು ಶಿಕ್ಷಕರಾದ ಲಕ್ಷ್ಮಣ್ ನಿರೂಪಣೆ ಮಾಡಿದರೆ ಶಿಕ್ಷಕರಾದ ರವಿನಾಯ್ಕ್ ರವರು ವಂದನಾರ್ಪಣೆ ಮಾಡಿದರು .
ಈ ಕಾರ್ಯಕ್ರಮದಲ್ಲಿ ಜಿ.ಪಿ.ಟಿ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಸಂದೀಪ್ ,ಮಹಿಳಾ ಉಪಾಧ್ಯಕ್ಷರಾದ ರಾಧಾಮಣಿ, ಸಂಘದ ಸಹಕಾರ್ಯದರ್ಶಿಯಾದ ಜಲಜಾಕ್ಷಿ, ಪ್ರಾರ್ಥನಾ ಅಕಾಡೆಮಿಯ ಮುಖ್ಯಸ್ಥರಾದ ರಾಜು ಬಸವಯ್ಯ,ಹುಣ್ಸೆಕೆರೆ ಮಂಜು, ಲಕ್ಷ್ಮೀನಾರಾಯಣ್, ಪತ್ರಕರ್ತರಾದ ಸುನಿಲ್, ಭೀಮ್ ಆರ್ಮಿ ತಾಲೂಕ ಅಧ್ಯಕ್ಷರಾದ ಕೀರ್ತಿ ಮುಂತಾದವರು ಹಾಜರಿದ್ದರು.
————————ನೂರ್ ಅಹಮ್ಮದ್