ಮೂಡಿಗೆರೆ:ಪ್ರಸಕ್ತ ನಿಷ್ಟೆ ಮತ್ತು ಪ್ರಾಮಾಣಿಕವಾಗಿ ಸಾಮಾಜಿಕ ಕೆಲಸ ಮಾಡುವವರಿಗೆ ತುಂಬಾ ಕಠಿಣದ ದಿನಗಳಾಗಿ ತೋರುತ್ತಿರುವುದು ಕಂಡು ಬರುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋಥ್ಥಾನ ಟ್ರಸ್ಟಿನ ಟ್ರಸ್ಟಿ ಪ್ರಶಾಂತ್ ಚಿಪ್ರಗುತ್ತಿ ಹೇಳಿದರು.
ಅವರು ಶುಕ್ರವಾರ ಸಂಜೆ ಶ್ರೀಕ್ಷೇತ್ರ ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪಟ್ಟಣದ ಪ್ರೀತಮ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿದರು.
ಕೆಲವು ಸಂಘ ಸಂಸ್ಥೆಗಳು, ರಾಜಕಾರಣಿಗಳು, ಸಮಾಜದಲ್ಲಿ ಪ್ರಾಮಾಣಿಕವಾಗಿ ಎಷ್ಟೇ ಉತ್ತಮ ಕಾರ್ಯ ಮಾಡಿದರೂ ಸಮಾಜದ ಕೆಲವು ದುಷ್ಟ ಶಕ್ತಿಗಳು ಅವರನ್ನು ಅನಗತ್ಯವಾಗಿ ದೂಷಿಸಿ ನಿಂದನೆಮಾಡುವ ಕೆಲಸ ನಡೆಯುತ್ತಿದೆ. ಇದರಿಂದ ಪ್ರಾಮಾಣಿಕರ ಆತ್ಮಸ್ಥೈರ್ಯ ಕುಗ್ಗಿ ಹೋಗುವ ಜೊತೆಗೆ ತಮ್ಮ ಗೌರವಕ್ಕೆ ಧಕ್ಕೆಯುಂಟಾಗುವ ಅಂಜಿಕೆಯಿoದಾಗಿ ಸಮಾಜದ ಕೆಲಸದಿಂದ ದೂರ ಸರಿಯುವ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಈಗಿನ ಕಾಲದಲ್ಲಿ ಮುಖ್ಯ ವಾಹಿನಿಯಲ್ಲಿರುವ ದುಷ್ಟರು,ಭ್ರಷ್ಟರ ಆರ್ಭಟವೇ ಹೆಚ್ಚಾಗಿದೆ. ನಮ್ಮ ಸಂಸ್ಥೆಯ ಕಾರ್ಯಕರ್ತರು ಇಂತಹ ದುಷ್ಟ ಭ್ರಷ್ಟರ ಅಟ್ಟಹಾಸಕ್ಕೆ ತಲೆಕಡಿಸಿಕೊಳ್ಳದೆ ಸಮಾಜದ ಹಿತಕ್ಕಾಗಿ ಉತ್ತಮ ಕೆಲಸಗಳನ್ನು
ಮಾಡಲು ಶ್ರಮಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಅವರು ಯೋಜನೆಯ ಸವಲತ್ತುಗಳ ಬಗ್ಗೆ ವಿವರಣೆ ನೀಡಿದರು. ಯೋಜನಾಧಿಕಾರಿ ಶಿವಾನಂದ್, ಶೌರ್ಯ ತಂಡದ ಪ್ರವೀಣ್ ಪೂಜಾರಿ ಮತ್ತಿತರರಿದ್ದರು.
………….ವರದಿ: ವಿಜಯಕುಮಾರ್, ಮೂಡಿಗೆರೆ