ಕೆ.ಆರ್.ಪೇಟೆ:ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಹಾಗು ಉನ್ನತ ಶಿಕ್ಷಣ ಅಭಿವೃದ್ಧಿಗೊಳಿಸುವ ದೃಷ್ಠಿಯಿಂದ ಕೆ.ಆರ್.ಪೇಟೆ ತಾಲೂಕಿನಲ್ಲಿ ಸರ್ಕಾರಿ ಶಾಲಾ -ಕಾಲೇಜುಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿರುವುದಾಗಿ ಶಾಸಕ ಹೆಚ್.ಟಿ ಮಂಜು ತಿಳಿಸಿದರು.
ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿವೇಕ ಯೋಜನೆಯಡಿ 70.15 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಅಕ್ಕಿಹೆಬ್ಬಾಳು ವಿಶೇಷ ಇತಿಹಾಸವುಳ್ಳ ಹಾಗೂ ರಾಜ್ಯ ಕಂಡ ಹಲವು ಮಹನೀಯರು ಜನಿಸಿರುವ ಗ್ರಾಮ.
ಹೋಬಳಿ ಕೇಂದ್ರವಾದರೂ ಹೆಚ್ಚು ಗ್ರಾಮೀಣ ಪ್ರದೇಶ ಹೊಂದಿರುವ ಕಾರಣಕ್ಕೆ ಸ್ಥಳೀಯ ವಿದ್ಯಾರ್ಥಿಗಳಿಗೆ ಇಲ್ಲಿಯೇ ಸೂಕ್ತ ಶಿಕ್ಷಣ ದೊರಕಲಿ ಎಂಬ ಉದ್ದೇಶದಿಂದ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ಮಾಡಲಾಗುತ್ತಿದೆ.ಮಕ್ಕಳು ಶಾಲೆಯಲ್ಲಿ ಮೂಲ ಸೌಕರ್ಯಗಳಿಂದ ವಂಚಿತರಾಗದಂತೆ ಸಮರ್ಪಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಪ್ರಸ್ತುತ ಸರ್ಕಾರದಲ್ಲಿ ಹಣವಿಲ್ಲದಿದ್ದರೂ ನನ್ನ ಕ್ಷೇತ್ರದ ಸಮಸ್ಯೆ ಇರುವುದನ್ನು ಮನವರಿಕೆ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತರುತ್ತಿದ್ದೇನೆ.
ಆ ನಿಟ್ಟಿನಲ್ಲಿ ಇಂದು ನೂತನ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದೇವೆ. ಗುತ್ತಿಗೆದಾರ ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡು ನಿಗದಿತ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಇತ್ತೀಚಿನ ಬೆಳವಣಿಗೆಯಲ್ಲಿ ಗ್ರಾಮೀಣ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವುದು ವಿರಳವಾಗಿದೆ.ಖಾಸಗಿ ಶಾಲಾ ಕಾಲೇಜುಗಳ ವ್ಯಾಮೋಹಕ್ಕೆ ಪಾಲಕರು ಮರಳಾಗುತ್ತಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿಗೆ ಬಂದಿದೆ.ಆದರೆ ಈ ಶಾಲೆ ಮತ್ತು ಕಾಲೇಜಿನಲ್ಲಿ ಒಟ್ಟು 250ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿರುವ ಮಾಹಿತಿ ತಿಳಿದು ಅರ್ಹ ಕಾಲೇಜಿಗೆ ಅನುದಾನ ನೀಡಿರುವ ತೃಪ್ತಿ ನನಗೆ ದೊರೆತಿದೆ ಎಂದು ಹೆಚ್ ಟಿ ಮಂಜು ಹೇಳಿದರು.
ಕಾರ್ಯಕ್ರಮ ಜೆಡಿಎಸ್ ಮುಖಂಡ ಎ.ಆರ್ ರಘು, ಅಕ್ಕಿಹೆಬ್ಬಾಳು ಹೋಬಳಿಯ ಜೆಡಿಎಸ್ ಅಧ್ಯಕ್ಷ ಬಸವಲಿಂಗಪ್ಪ,ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸು,ಸದಸ್ಯೆ ಪವಿತ್ರ,ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ,ಮುಖಂಡರಾದ ಎ.ಸಿ ಮಂಜೇಗೌಡ,ನಾರಾಯಣ್, ರಾಜೇಶ, ಮುದ್ಲಾಪುರ ರಾಮು, ಮಾಚಹೊಳಲು ಪದ್ದು , ವಿಠಲ್ ರಾವ್, ಲೋಕೇಶ್,ಗುತ್ತಿಗೆದಾರ ಆದರ್ಶ,ಉಪನ್ಯಾಸಕ ಚಿಕ್ಕಣ್ಣ, ಆಯಶ ಸಿದ್ದಕ್ಕಿ, ಅರುಣ್ ಕುಮಾರ್, ಶಂಕರ್, ನಾಗೇಶ್,ಪ್ರಿಯಾಂಕಾ ಸೇರಿದಂತೆ ಉಪಸ್ಥಿತರಿದ್ದರು.
—— ಮನು ಮಾಕವಳ್ಳಿ ಕೆ ಆರ್ ಪೇಟೆ