ಹಾಸನ:ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆ ಜನರಿಗಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿ ರುವುದರಿ0ದ ಅದು ಜನ ಮಾನಸದಲ್ಲಿ ಯಾವಾಗಲೂ ಉಳಿಯುತ್ತದೆಂದು ಪಡುವಲಹಿಪ್ಪೆ ಹೆಚ್.ಡಿ.ದೇವೇಗೌಡ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಹೇಳಿದರು.
ನಗರದ ಮಹಾವೀರ ಭವನದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಶಾಂತಿಗ್ರಾಮ ಘಟಕದಿಂದ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ನಾವು ಪ್ರಪಂಚವನ್ನ ಒಂದಲ್ಲ ಒಂದು ದಿನ ಬಿಟ್ಟು ಹೋಗುತ್ತೇವೆ. ಆದರೆ ಜಗತ್ತು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲಸ ಮಾಡಬೇಕು. ಸಂಘ ಪ್ರಬಲವಾಗಿ ಬೆಳೆಯಬೇಕೆಂದರೆ ಹೊಂದಾಣಿಕೆ ಮುಖ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸತೀಶ್ ಹೊನ್ನವಳ್ಳಿ ಮಾತನಾಡಿ, ಉಳಿತಾಯ ಜೀವನದಲ್ಲಿ ತುಂಬಾ ಮುಖ್ಯ. ಮಹಾತ್ಮ ಗಾಂಧೀಜಿ ಅವರ ಕನಸಿನಂತೆ ಧರ್ಮಸ್ಥಳ ಸಂಘ ಕೆಲಸ ಮಾಡುತ್ತಿದೆ ಎಂದರು. ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸಿದ್ದಾರೆ. ಧರ್ಮಸ್ಥಳ ದೇಗುಲದಿಂದ ಯಾರಿಗೂ ಸಾಲ ನೀಡುತ್ತಿಲ್ಲ. ಜನರ ದುಡ್ಡನ್ನ ಜನರಿಗೆ ಕೊಡುವ ಕೆಲಸ ಮಾಡುತ್ತಿದೆ. ಬ್ಯಾಂಕ್ಗಳಿ0ದ ಸ್ವಸಹಾಯ ಸಂಘಗಳ ಮೂಲಕ ಸಾಲ ನೀಡಲಾಗುತ್ತಿದೆ. ದೇವಸ್ಥಾನದ ಪಾತ್ರ ಎಳ್ಳಷ್ಟೂ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಇತ್ತೀಚೆಗೆ ಮೈಕ್ರೋ ಪೈನಾನ್ಸ್ ಸಾಲ ನೀಡಲು ಮನೆ ಬಾಗಿಲಿಗೆ ಬರುತ್ತವೆ ಎಂದು ಸಾಲ ಪಡೆದು ಮೋಸ ಹೋಗಬಾರದು ಎಂದು ಕಿವಿಮಾತು ಹೇಳಿದರು.
ಶಾಂತಿಗ್ರಾಮ ಕ್ಷೇತ್ರ ಯೋಜನಾಧಿಕಾರಿ ನವೀನ್ ಕುಮಾರ್ ಮಾತನಾಡಿ, 3 ವರ್ಷದಿಂದ ಶಾಂತಿಗ್ರಾಮ ಯೋಜನಾ ಕಚೇರಿ ಕರ್ತವ್ಯ ನಿರ್ವಹಿಸುತ್ತಿದೆ. 20ಜನ ಕಾಯಂ, 40 ಸೇವಾ ಪ್ರತಿನಿಧಿಗಳು, 25 ಗ್ರಾಮ ಮಟ್ಟದ ಸೇವಾಗಾರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2162 ೬ ಸ್ವಸಹಾಯ ಸಂಘಗಳಿದ್ದು, 16 ಸಾವಿರ ಸದಸ್ಯರಿದ್ದಾರೆ. ಇಲ್ಲಿವರೆಗೆ 11.15 ಕೋಟಿ ಉಳಿತಾಯವಾಗಿದೆ.214ಕೋಟಿ ಪ್ರಗತಿ ನಿಧಿಯನ್ನು ಕರ್ನಾಟಕ ಬ್ಯಾಂಕ್ ಮೂಲಕ ನೀಡಿದ್ದೇವೆ. 84 ಕೋಟಿ ಹೊರ ಬಾಕಿಯಿದೆ ಎಂದರು. ಪ್ರಗತಿ ರಕ್ಷಾ ಕವಚದಡಿ 3.22 ಕೋಟಿ ಸೌಲಭ್ಯ ಪಡೆಯಲಾಗಿದೆ. ಸಂಪೂರ್ಣ ಸುರಕ್ಷಾ-ಆರೋಗ್ಯ ರಕ್ಷಾ ಕಾರ್ಯಕ್ರಮಕ್ಕೆ 30 ಲಕ್ಷ ನೀಡಲಾಗಿದೆ. 44ಜನಕ್ಕೆ ಪ್ರತಿ ತಿಂಗಳು ಸಾವಿರ ರೂ. ಮಾಸಾಶನ ನೀಡಲಾಗುತ್ತಿದೆ. ಅನ್ನದಾತರಿಗೆ ಅನುಕೂಲವಾಗಲಿ ಅಂತ 395ಕಾರ್ಯಕ್ರಮ ಹಮ್ಮಿಕೊಂಡಿದ್ದು, ತರಬೇತಿಗಾಗಿ 8 ಲಕ್ಷ ಖರ್ಚು ಮಾಡಲಾಗಿದೆ ಎಂದರು. ತಾಲ್ಲೂಕಿನ 32 ದೇವಸ್ಥಾನ ಪುನರುತ್ಥಾನಕ್ಕೆ ಅನುದಾನ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬೊಮ್ಮೇಗೌಡ ಮಾತನಾಡಿ,ಯೋಜನೆ ಒಂದು ಸರ್ಕಾರ ನಿರ್ವಹಿಸುವಂತಹ ಸಾಕಷ್ಟು ಕೆಲಸ ಮಾಡುತ್ತಿದೆ. ಯೋಜನೆಯ ಶಿಸ್ತಿನಿಂದ ಕಾರ್ಯಕ್ರಮಗಳ ಲಾಭ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆ. ಇನ್ನೂ ಹಲವು ಕಾರ್ಯಕ್ರಮ ಸಮಾಜಕ್ಕೆ ದೊರೆಯಲಿ ಎಂದು ಆಶಿಸಿದರು.
ಜನಜಾಗೃತಿ ವೇದಿಕೆ ಪದಾಧಿಕಾರಿಗಳಾದ ಎಂ.ಆರ್.ಗೌಡಪ್ಪ, ದಿನೇಶ್, ಶಿವಾನಂದ, ತೌಷತ್ಕುಮಾರ್, ಕರ್ನಾಟಕ ಬ್ಯಾಂಕ್ ಕೃಷಿ ವಿಭಾಗದ ಅಧಿಕಾರಿ ಶಿರಿಷಾ, ತಾಲೂಕು ಯೋಜನಾಧಿಕಾರಿ ನವೀನ್, ಜ್ಞಾನ ವಿಕಾಸ ಯೋಜನೆ ಸಮನ್ವಯಾಧಿಕಾರಿ ಹಂಸವೇಣಿ ಇದ್ದರು.