ಕೆ.ಆರ್.ಪೇಟೆ-ಸ್ಪರ್ಧಾತ್ಮಕ ಪರಿಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ ಸಮಯ ಪ್ರಜ್ಞೆ ಅಳವಡಿಸಿಕೊಂಡಾಗ ಮಾತ್ರ ಸಾಧ್ಯ- ಡಾ.ಶಿವಕುಮಾರ್

ಕೆ.ಆರ್.ಪೇಟೆ-ಸ್ಪರ್ಧಾತ್ಮಕ ಪರಿಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ ಸಮಯ ಪ್ರಜ್ಞೆ ಅಳವಡಿಸಿಕೊಂಡಾಗ ಮಾತ್ರ ಸಾಧ್ಯವೆಂದು ಬೆಂಗಳೂರಿನ ಅಕ್ಕ ಐ.ಎ.ಎಸ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ಡಾ.ಶಿವಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಶಿಕ್ಷಕರ ಭವನದಲ್ಲಿ ‘ದ ಸಿಟಿಜನ್ಸ್ ಆಫ್ ಇಂಡಿಯಾ ಕ್ವಾಲಿಟಿ ಎಜುಕೇಷನ್ ಟ್ರಸ್ಟ್’ , ‘ಪ್ರಬುದ್ದ ಕರ್ನಾಟಕ ಸೇವಾಟ್ರಸ್ಟ್’ ಮತ್ತು ‘ಕಲ್ಪತರು ಪ್ರಥಮದರ್ಜೆ ಕಾಲೇಜು’ ಸಹಯೋಗದಲ್ಲಿ ಪಿಯುಸಿ -ಪದವಿ ನಂತರ ಮುಂದೇನು ? ಎಂಬ ವಿಚಾರ ಸಂಕಿರಣದಲ್ಲಿ ಪ್ರದಾನ ಭಾಷಣ ಮಾಡಿ ಮಾತನಾಡಿದರು.

ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬೇಕಾದರೆ ಪ್ರತಿದಿನ 5 ಗಂಟೆಗಳ ಸತತ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು.ಪ್ರಚಲಿತ ವಿದ್ಯಮಾನಗಳೊಂದಿಗೆ ದೇಶ,ವಿದೇಶ ಗಳ ಸ್ಥಿತಿಗತಿ ಇತಿಹಾಸ, ಅಲ್ಲಿನ ರಾಜ್ಯಾಡಳಿತ, ಆರ್ಥಿಕ ಮತ್ತು ಸಾಮಾಜಿಕ ಪರಿಸರದ ಬಗ್ಗೆ ತಿಳಿದುಕೊಳ್ಳುವದರೊಂದಿಗೆ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು.ಇಲ್ಲದಿದ್ದರೆ ನಾಗರೀಕ ಸೇವೆಯ ಉನ್ನತ ಹುದ್ದೆಗಳಾದ ಐಎಎಸ್ ,ಐಪಿಎಸ್ ಪರಿಕ್ಷೆಗಳನ್ನು ಎದುರಿಸುವುದು ಕಷ್ಟ ಸಾಧ್ಯವಾಗುತ್ತದೆ.ಏಕೆಂದರೆ ಯು.ಪಿ.ಎಸ್. ಸಿ ನಡೆಸುವ ಈ ಪರಿಕ್ಷೆಗಳು ಜಗತ್ತಿನಲ್ಲೇ ಹೆಸರಾಗಿದೆ ಎಂದು ಅಭಿಪ್ರಾಯಪಟ್ಟ ಅವರು ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಸವಾಲಾಗಿ ತೆಗೆದುಕೊಂಡು ವ್ಯಾಸಂಗ ಮಾಡಿದ್ದೇ ಆದರೆ ನಾಗರೀಕ ಸೇವಾ ಪರಿಕ್ಷೆಗಳು ಸುಲಭವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಲ್ಪತರು ಕಾಲೇಜಿನ ಅಧ್ಯಕ್ಷ ವಿಠಪಲಾಪುರ ಜಯರಾಂ ಮಾತನಾಡಿ,ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯಶಸ್ಸು ನಮ್ಮದಾಗಬೇಕಾದರೆ ಸಾಕಷ್ಟು ಪರಿಶ್ರಮ ಆತ್ಮವಿಶ್ವಾಸ,ಮುಖ್ಯವಾಗುತ್ತದೆ ನಮ್ಮ ಮನಸ್ಸಿನೊಳಗಿನ ತುಡಿತ ನಮ್ಮ ಎಲ್ಲಾ ಯಶಸ್ಸಿನ ಮೂಲವಾಗುತ್ತದೆ.ಸಿದ್ದವಿದ್ದು ಅಕ್ಕ ಐಎಎಸ್ ಅಕಾಡೆಮಿ ನೆರವು ನೀಡಿದರೆ ಸಹಯೋಗದಲ್ಲಿ ಪಟ್ಟಣದಲ್ಲಿ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ತರಭೇತಿ ನೀಡುವ ಕೇಂದ್ರ ತೆರೆಯಲು ಸಿದ್ದವಿರುವದಾಗಿ ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಮಾತನಾಡಿ,ನಮ್ಮ ಯಶಸ್ಸಿಗೆ ನಾವೇ ಕಾರಣಿಕರ್ತರಾಗಿರುತ್ತೇವೆ.ಪರಿಸ್ಥಿತಿ ಮತ್ತು ಸಮಯ ಎಲ್ಲಾ ಕಾಲದಲ್ಲಿಯೂ ನಮ್ಮ ಪರವಾಗಿಯೇ ಇರುತ್ತದೆಂದು ನಂಬಿಕೊಳ್ಳಬಾರದು.ಆಯಾಯ ಸಂದರ್ಭದ ಕಾರ್ಯಗಳನ್ನು ಅಂದೇ ಮುಗಿಸುವ ಯೋಜನೆ ವಿದ್ಯಾರ್ಥಿಗಳಲ್ಲಿರಬೇಕು. ಆದ್ದರಿಂದ ಓದಿ ಎನ್ನುವ ಸಮಯದಲ್ಲಿ ಓದದಿದ್ದರೆ ಮುಂದೆ ಪಡುವ ಪಶ್ಚತ್ತಾಪಕ್ಕೆ ಯಾವ ನ್ಯಾಯವೂ ಸಿಗಲಾರದು ಎಂದರು.

ಜೀವನಕೌಶಲ ತರಭೇತುದಾರ ಮಂಜುನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಆನಂದ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪ್ರಾಂಶುಪಾಲ ಧನಂಜಯ ರಾಮಚಂದ್ರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಸ್ಕಾಲರ‍್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಮಂಜುನಾಥ್, ಪ್ರಬುದ್ದ ಕರ್ನಾಟಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಎಚ್. ಜೆ. ಕಾಂತರಾಜು , ದಿ ಸಿಟಿಜನ್ಸ್ ಆಫ್ ಇಂಡಿಯಾ ಕ್ವಾಲಿಟಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಎಚ್. ಡಿ. ಪ್ರಿಯಾಂಕ. ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಸಂವಾದಲ್ಲಿ ಕಲ್ಪತರು ಕಾಲೇಜು, ಸ್ಕಾಲರ‍್ಸ್ ಕಾಲೇಜಿನ ಮಕ್ಕಳು ,ಪೋಷಕರು , ಉಪನ್ಯಾಸಕರು ಮತ್ತು ಶಿಕ್ಷಕರು ಭಾಗವಹಿಸಿದ್ದರು.

———-ಶ್ರೀನಿವಾಸ್ ಕೆ.ಆರ್ ಪೇಟೆ

Leave a Reply

Your email address will not be published. Required fields are marked *

× How can I help you?