ಚಿಕ್ಕಮಗಳೂರು-ಗ್ರಾಮಪಂಚಾಯತಿಯ ಪಂಚನೌಕರರ ಬೇಡಿಕೆಗಳನ್ನು ಈಡೇರಿಸದೇ ರಾಜ್ಯಸರ್ಕಾರ ಸತಾಯಿಸುತ್ತಿದೆ.ಪಂಚಾಯಿತಿ ವ್ಯಾಪ್ತಿಯ ನೌಕರರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದು ಶೀಘ್ರದಲ್ಲೇ ಸರ್ಕಾರ ಇವರ ಬೇಡಿಕೆ ಈಡೇರಿಕೆಗೆ ಕ್ರಮ ವಹಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಆಗ್ರಹಿಸಿದರು.
ಗ್ರಾ.ಪಂ. ಪಂಚ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಆರ್.ಡಿ.ಪಿ.ಆರ್. ಕುಟುಂಬದ ವಿವಿಧ ನ್ಯಾಯಯುತ ಬೇಡಿಕೆಗಳು ಈಡೇರಿಕೆಗೆ ಆಗ್ರಹಿಸಿ ಪಂಚಾಯಿತಿ ಅಭಿವೃಧ್ದಿ ಅಧಿಕಾರಿ ಕ್ಷೇಮಾಭಿವೃಧ್ದಿ ಜಿಲ್ಲಾ ಸಂಘದಿoದ ಸೋಮವಾರ ಜಿ.ಪಂ. ಆವರಣದಲ್ಲಿ ನೌಕರರು ಬೃಹತ್ ಅನಿರ್ದಿಷ್ಟಾವಧಿ ಪ್ರತಿಭಟನೆ ಪ್ರಾರಂಭಿಸಲಾಯಿತು.
ಪ್ರತಿಭಟನಾ ಸ್ಥಳಕ್ಕೆ ತೆರಳಿ ನೌಕರರಿಗೆ ಬೆಂಬಲ ಸೂಚಿಸಿ ಸಿ ಟಿ ರವಿ ಮಾತನಾಡಿದರು.
ಗ್ರಾಮಪಂಚಾಯತಿ ನೌಕರರು ಸರಕಾರದ ಬಹಳಷ್ಟು ಮೂಲಭೂತ ಸೌಕರ್ಯದಂತಹ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.ಅವರು ತಮ್ಮ ಅಗತ್ಯ ಬೇಡಿಕೆಗಳ ಈಡೇರಿಕೆಗಾಗಿ ಬೀದಿಗಿಳಿದು ಪ್ರತಿಭಟಿಸುವ ಪ್ರಮೇಯ ಬಾರದಂತೆ ನೋಡಿಕೊಳ್ಳುವುದು ಆಯಾ ಕಾಲದ ಸರಕಾರಗಳ ಕರ್ತವ್ಯವಾಗಿದೆ.ಈ ಕೂಡಲೇ ರಾಜ್ಯ ಸರಕಾರ ಮದ್ಯ ಪ್ರವೇಶಿಸಿ ಗ್ರಾ.ಪಂ ನೌಕರರ ಎಲ್ಲ ಬೇಡಿಕೆಗಳ ಈಡೇರಿಕೆಗೆ ಮುಂದಾಗುವಂತೆ ಅವರು ಆಗ್ರಹ ಮಾಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್, ರಾಜ್ಯದಲ್ಲಿ ಜನರಿಗೆ ಸ್ಥಳೀಯ ಸಂಸ್ಥೆಯಾದ ಗ್ರಾಮ ಪಂಚಾಯಿತಿಗಳು ಶೇ.70 ರಷ್ಟು ಸೇವೆಗಳನ್ನು ಪ್ರಾಮಾಣಿ ಕವಾಗಿ ಒದಗಿಸುತ್ತಿವೆ.
ಈ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರಾ.ಪಂ. ಸದಸ್ಯರು, ಪಿ.ಡಿ.ಓ,ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಸಿಬ್ಬಂದಿಗಳು ವಿವಿಧ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಈ ನಡುವೆ ಎಲ್ಲಾ ಸಮಸ್ಯೆಗಳಿಗೆ ಪಿ.ಡಿ.ಓ ಹಾಗೂ ಸಿಬ್ಬಂದಿಗಳನ್ನು ನೇರ ಹೊಣೆಗಾರನ್ನಾಗಿಸುವ ಸರ್ಕಾರ ಮತ್ತು ಇಲಾಖೆ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಪoಚಾಯಿತಿ ಅಭಿವೃದ್ದಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತೀ ಕರಿಸುವುದು,ಜೇಷ್ಟತಾ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ,ಬಡ್ತಿ ನೀಡಲು ಕ್ರಮ ಕೈಗೊಳ್ಳಬೇಕು,ಇತರೆ ಇಲಾಖೆಯಲ್ಲಿರುವ ಸಮಾನಾಂತರ ಹುದ್ದೆಗಳಿಗೆ ನಿಯೋಜನೆ ಮೇಲೆ ಹೋಗಲು ಒಟ್ಟು ಮಂಜೂರಾದ ಹುದ್ದೆಗಳಲ್ಲಿ ಶೇ.25 ಹುದ್ದೆಗಳಿಗೆ ಅನುಮತಿ ನೀಡಬೇಕು ಎಂಬುವುಗಳು ನಮ್ಮ ಪ್ರಮುಖ ಬೇಡಿಕೆಗಳಾಗಿವೆ.
ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಡಿ.ಓಗಳನ್ನು ಬೇರೆ ತಾಲ್ಲೂಕಿಗೆ ವರ್ಗಾವಣೆ ನಿಯಮ ಕೈಬಿಡಬೇಕು. ಜಿಲ್ಲೆಯಲ್ಲಿ ಸ್ವಯಿಚ್ಛೆ ಇಲ್ಲದೇ ಸಾರ್ವಜನಿಕ ಹಿತಾಸಕ್ತಿ ಹಿತದೃಷ್ಟಿ ತೋರದೆ ಬದಲಾವಣೆ ಮಾಡಬಾರದು ಮತ್ತು ವರ್ಗಾವಣೆ ನಿಯಮಗಳಲ್ಲಿ ಯಾವುದೇ ಬದಲಾವಣೆಗೆ ಮುನ್ನ ಸಂಘದ ಸಲಹೆಯನ್ನು ಪಡೆಯಬೇಕು ಎಂದು ಒತ್ತಾಯಿಸಿದರು.
ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಜಗನ್ನಾಥ್ ಮಾತನಾಡಿ ಗ್ರಾ.ಪಂ.ಗಳು ಮೇಲ್ದರ್ಜೇಗೇರಿಸಿದ ವೇಳೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಅಲ್ಲಿನ ಸರ್ಕಾರಿ ನೌಕರರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ವಿಲೀನಗೊಳಿಸುವುದು ಹಾಗೂ ವಸತಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆ ಸೃಜನೆ ಮಾಡಿ ಪಿ.ಡಿ.ಓಗಳಿಗೆ ಪದೋನ್ನತಿ ನೀಡುವ ಮೂಲಕ ಭರ್ತಿಗೊಳಿಸಬೇಕು ಎಂದು ತಿಳಿಸಿದರು.
ಗ್ರಾ.ಪಂ.ನ ಪಂಚ ನೌಕರರುಗಳಿಗೆ ವೇತನ ಶ್ರೇಣಿ ಮತ್ತು ಸೇವಾಹಿರಿತನದ ವೇತನವನ್ನು ಜಾರಿಗೊಳಿಸಿ ಕಾರ್ಮಿಕ ಇಲಾಖೆಯ ವೇತನವನ್ನು ಹೊರತುಪಡಿಸಿ ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ವೇತನ ನಿಗಧಿಪಡಿಸಿ ನೇರ ನೌಕರರ ಖಾತೆಗೆ ಪಾವತಿಸಬೇಕು ಎಂದರು.
ಗ್ರಾ.ಪo. ಸಿಬ್ಬಂದಿಗಳಿಗೆ ಆರೋಗ್ಯವಿಮೆ 50 ಸಾವಿರವಿದೆ. ಇದರಿಂದ ನೌಕರರಿಗೆ ಪ್ರಯೋಜನವಾಗುತ್ತಿಲ್ಲ. ಹೀಗಾಗಿ 5 ಲಕ್ಷ ಆರೋಗ್ಯವಿಮೆ ಜಾರಿಮಾಡಬೇಕು. ಕರವಸೂಲಿಗಾರರು ಮತ್ತು ಕ್ಲಕ್ ಕಂ ಡಾಟಾ ಎಂಟ್ರಿ ಆಪರೇಟರ್ ವೃಂದದಿoದ ಸೇವೆ ಒಳಗಿನ ನೇಮಕಾತಿಗೆ ಎಸ್.ಡಿ.ಎ.ಎ. ವೃಂದಕ್ಕೆ ಪದೋನ್ನತಿ ಹೊoದಲು ಶೇ.75 ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಗ್ರೇಡ್-೧1 ಕಾರ್ಯದರ್ಶಿಗಳ ವೃಂದದ ಜೇಷ್ಟತಾ ಪಟ್ಟಿಯನ್ನು ತುರ್ತಾಗಿ ಪ್ರಕಟಣೆಗೊಳಿಸಿ ಪಿ.ಡಿ.ಓ ವೃಂದಕ್ಕೆ ಮುಂಬಡ್ತಿ ನೀಡುವ ಬಗ್ಗೆ ಆಯುಕ್ತರಿಗೆ ಸರ್ಕಾರದ ನಿರ್ದೇಶನವಿದ್ದರೂ ನಿರಾಸಕ್ತಿ ವಹಿಸುತ್ತಿರುವುದು ಸಾವಿರಕ್ಕೂ ಅಧಿಕ ವಿವಿಧ ವೃಂದದ ನೌಕರರು ಮುಂಬಡ್ತಿಯಿoದ ವಂಚಿತರಾಗಿದ್ದು ಕಾಲಮಿತಿ ಯೊಳಗೆ ಮುಂಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಗೆ ಬೆಂಬಲಿಸಿ ಸೂಚಿಸಿದ ಮಾತನಾಡಿದ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಪಂಚನೌಕ ರರನ್ನು ಬೇಡಿಕೆಗಳನ್ನು ಈಡೇರಿಸದೇ ರಾಜ್ಯಸರ್ಕಾರ ಸತಾಯಿಸುತ್ತಿದೆ. ಪಂಚಾಯಿತಿ ವ್ಯಾಪ್ತಿಯ ನೌಕರರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದು ಶೀಘ್ರದಲ್ಲೇ ಸರ್ಕಾರ ಪಂಚ ನೌಕರರ ಬೇಡಿಕೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕ್ಷೇಮಾಭೀವೃಧ್ದಿ ಸಂಘಧ ಉಪಾಧ್ಯಕ್ಷೆ ಎಂ.ಶಾoತಿ, ಪ್ರಧಾನ ಕಾರ್ಯದರ್ಶಿ ಜಿ.ಪಿ.ರಾಜ ವಿಜಯನ್, ಖಜಾಂಚಿ ಹೆಚ್.ಎನ್.ಶೇಖರ್, ತಾಲ್ಲೂಕು ಉಪಾಧ್ಯಕ್ಷ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ , ಖಜಾಂಚಿ ಸುಮಾ, ಅಜ್ಜಂಪುರ ಅಧ್ಯಕ್ಷ ಪ್ರಸನ್ನ ಕುಮಾರ್, ತರೀಕೆರೆ ಅಧ್ಯಕ್ಷ ಶಿವಮೂರ್ತಿ, ಮೂಡಿಗೆರೆ ಅಧ್ಯಕ್ಷ ಕೃಷ್ಣಪ್ಪ ನ.ರಾ.ಪುರ ಅಧ್ಯಕ್ಷ ಮನೀಶ್, ಕಡೂರು ಅಧ್ಯಕ್ಷ ಆದಿನಾಥ ಬೀಳಗಿ ಹಾಗೂ ನೌಕರರು ಉಪಸ್ಥಿತರಿದ್ದರು.
———––ಸುರೇಶ್