ಚಿಕ್ಕಮಗಳೂರು-ಸರ್ಕಾರಿ ಶಾಲೆಗಳಲ್ಲಿ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿ ಪೋಷಕರಲ್ಲಿರುವ ಸರ್ಕಾರಿ ಶಾಲೆಗಳ ಮೇಲಿನ ಕೀಳು ಭಾವನೆಯನ್ನು ಹೋಗಲಾಡಿಸಿ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ ಹಾಗೂ ಶಾಲೆಗಳ ಮುಚ್ಚುವಿಕೆಗೆ ಕಾರಣಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಸರ್ಕಾರವು ರಾಜ್ಯದ 6 ರಿಂದ 14 ವರ್ಷ ವಯಸ್ಸಿನ ಎಲ್ಲಾ ವರ್ಗದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಲು ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಮವಸ್ತ್ರ, ಪಠ್ಯ ಪುಸ್ತಕ, ಮಧ್ಯಾಹ್ನದ ಬಿಸಿ ಊಟ ಸೇರಿದಂತೆ ಪೌಷ್ಠಿಕ ಆಹಾರ ಮತ್ತು ವಿವಿಧ ಸೌಲಭ್ಯಗಳೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಯಾರೊಬ್ಬರು ಶಿಕ್ಷಣದಿಂದ ವಂಚಿತರಾಗದಂತೆ ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ ನೀಡುತ್ತಿದೆ ಎಂದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಅನೇಕ ಶಾಲೆಗಳು ಮುಚ್ಚುವ ಹಂತದಲ್ಲಿದೆ. ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಉತ್ತಮ ಆಹಾರ, ಶಾಲಾ ಕೈತೋಟ, ಗುಣಮಟ್ಟದ ಶಿಕ್ಷಣ, ಆಟದ ಜೊತೆಗೆ ವಿದ್ಯಾರ್ಥಿಗಳನ್ನು ವಿಶೇಷ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸಬೇಕು. ಶಾಲೆಗಳ ಅಭಿವೃದ್ಧಿ ಸೂಚ್ಯಾಂಕಗಳ ಪರಿಶೀಲನೆಗೆ ನೇಮಕವಾಗಿರುವ ಸಿ ಆರ್ ಪಿ, ಬಿ ಆರ್ ಸಿ, ಇ ಸಿ ಬಿ, ಅಧಿಕಾರಿಗಳು ಆಗಾಗ್ಗೆ ಭೇಟಿ ನೀಡಿ ಶಾಲೆಗಳಲ್ಲಿನ ಚಟುವಟಿಕೆಗಳು ಮಕ್ಕಳ ಶೈಕ್ಷಣಿಕ ಬೆಳವಣಿಗೆ ಹಾಗೂ ಶಾಲೆಯ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿ ಶಾಲೆಗಳಲ್ಲಿ ಉತ್ತಮ ಕಲಿಕೆಯ ವಾತಾವರಣ ನಿರ್ಮಿಸಿ ಕೊಡಲು ಕ್ರಮ ವಹಿಸಬೇಕು ಎಂದು ಹೇಳಿದರು.
ಶಾಲೆಗಳಲ್ಲಿ ಶಿಕ್ಷಕರ ಕೊರತೆಯಾಗದಂತೆ ಶಿಕ್ಷಕರ ಸಂಖ್ಯೆ ಕಡಿಮೆ ಇದ್ದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿ ಮಕ್ಕಳ ಕಲಿಕೆಗೆ ಯಾವುದೇ ಅಡೆಚಣೆಯಾಗದಂತೆ ಕ್ರಮ ವಹಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಪಡೆದು ಅವರನ್ನು ಶಾಲೆಗೆ ಕರೆ ತರಬೇಕು. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕೆಗೆ ಅವಕಾಶಗಳ ಬಗ್ಗೆ ಪೋಷಕರಲ್ಲಿ ಮಾಹಿತಿ ನೀಡಿ ಪೋಷಕರನ್ನು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಮನವೊಲಿಸಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ತಾರನಾಥ್ ಮಾತನಾಡಿ ಅನೇಕ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಶಿಕ್ಷಣ, ಆಟ, ಪಾಠ, ಮೂಲಭೂತ ಸೌಕರ್ಯಗಳಿಂದ ಕಲಿಕೆಗೆ ಉತ್ತಮ ವಾತಾವರಣವನ್ನು ನಿರ್ಮಿಸಿ ಇತರೆ ಶಾಲೆಗಳಿಗೆ ಮಾದರಿಯಾಗಿದ್ದು, ಮಕ್ಕಳು ಕೂಡ ಕಲಿಕೆಯಲ್ಲಿ ಮುಂದಿದ್ದಾರೆ. ಆ ಶಾಲೆಗಳ ಕಾರ್ಯ ವೈಖರಿಗಳ ಬಗ್ಗೆ ಮಾಹಿತಿ ಪಡೆದು ಶಾಲೆಗಳನ್ನು ಮಾದರಿಯಾಗಿಸಿಕೊಂಡು ತಮ್ಮ ಶಾಲೆಗಳಿಗೆ ಚಟುವಟಿಕೆಗಳನ್ನು ವಿಶೇಷವಾಗಿ ಮಕ್ಕಳ ಕಲಿಕೆಗೆ ಸಹಕಾರಿಯಾಗುವಂತೆ ಕ್ರಮವಹಿಸಿ ಎಂದು ಹೇಳಿದರು.
ಸಭೆಯಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್, ಶಿಕ್ಷಣ ಇಲಾಖೆಯ ಸಿ ಆರ್ ಪಿ, ಬಿ ಆರ್ ಸಿ, ಇ ಸಿ ಬಿ, ಅಧಿಕಾರಿಗಳು ಹಾಜರಿದ್ದರು.
—————ಪ್ರಕಾಶ್ ಕೋಟಿಗನಹಳ್ಳಿ
.