ಚಿಕ್ಕಮಗಳೂರು-ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ಶೋಷಣೆ-ದೌರ್ಜನ್ಯ ಹಿಮ್ಮೆಟ್ಟಿಸಲು ಕಾನೂನಿನ ಸಾಕ್ಷರತೆ ಅಗತ್ಯ-ವಿ. ಹನುಮಂತಪ್ಪ

ಚಿಕ್ಕಮಗಳೂರು-ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುವ ಶೋಷಣೆ ದೌರ್ಜನ್ಯ ಮತ್ತು ಕಿರುಕುಳಗಳನ್ನು ಹಿಮ್ಮೆಟ್ಟಿಸಲು ಮಹಿಳೆಯರಿಗೆ ಕಾನೂನಿನ ಸಾಕ್ಷರತೆ ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ತಿಳಿಸಿದರು.

ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ನವದೆಹಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಜಿಲ್ಲಾ ವಕೀಲರ ಸಂಘ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಚಿಕ್ಕಮಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ನಗರದ ತಾಲ್ಲೂಕು ಪಂಚಾಯಿತಿ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಧಾನ್ ಸೇ ಸಮಾಧಾನ್ ಮಹಿಳೆಯರಿಗೆ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಧ ಕ್ಷೇತ್ರಗಳ ಪ್ರತಿನಿಧಿಗಳಾಗಿ ಬಂದಿರುವ ಮಹಿಳೆಯರು-ಮಹಿಳೆಯರಿಗಾಗಿ ಜಾರಿಗೆ ತಂದಿರುವ ಕಾನೂನಿನ ಬಗ್ಗೆ ತಿಳಿದು ಇತರರಿಗೂ ಅದನ್ನು ತಿಳಿಸುವ ಕೆಲಸ ಮಾಡಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಕಾನೂನಿನ ಕುರಿತು ಮಾಹಿತಿ ಹೊಂದಬೇಕೆಂದು ಹೇಳಿದರು.

ಸ್ವಾತಂತ್ರ್ಯ ನಂತರ ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಕಾನೂನು ಜಾರಿಗೆ ತಂದರೂ ಅದರ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಹೆಚ್ಚಾಗಿ ಮೂಡಿಲ್ಲ. ಗ್ರಾಮೀಣ ಭಾಗದಲ್ಲಿ ಇಂದಿಗೂ ಮಹಿಳೆಯರ ಮೇಲೆ ಮೌಢ್ಯ, ಅನಕ್ಷರತೆ ಹಾಗೂ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ಮಹಿಳೆಯರು ಇವುಗಳಿಂದ ಹೊರ ಬಂದು ಸಾಕ್ಷರತೆ ತುಂಬಾ ಅವಶ್ಯ. ಕಾನೂನು ಸೇವೆಗಳ ಪ್ರಾಧಿಕಾರ ಮಹಿಳೆಯರಿಗಾಗಿಯೇ ಉಚಿತ ಸೇವೆ ನೀಡುತ್ತಿದೆ. ಮಹಿಳೆಯರು ಅವುಗಳನ್ನು ಬಳಕೆ ಮಾಡಿಕೊಳ್ಳುವುದು ಮುಖ್ಯ. ಇದಕ್ಕೆ ಮಹಿಳೆಯರ ಮನಸ್ಥಿತಿಯೂ ಮುಖ್ಯ. ಸ್ವಯಂ ಆಲೋಚನೆಯಿಂದ ಹಕ್ಕುಗಳನ್ನು ಪಡೆಯಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿ. ಮಹಿಳೆಯರಿಗೆ ವಿವಿಧ ಸ್ಥಾನಮಾನಗಳನ್ನು ನೀಡಿದ್ದರೂ ಸಹ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ದೌರ್ಜನ್ಯಗಳಾಗದಂತೆ ತಡೆದಾಗ ಮಾತ್ರ ಸಾಮಾಜಿಕ ಸಮಾನತೆ ಸಾಧ್ಯ ಎಂದ ಅವರು ಜಿಲ್ಲಾ ಪಂಚಾಯಿತಿಯಿಂದ ಅಬಲೆಯರಿಗೆ, ನೊಂದ ಹೆಣ್ಣು ಮಕ್ಕಳಿಗೆ ಮತ್ತು ಒಂಟಿಯಾಗಿ ಜೀವನ ನಿರ್ವಹಿಸುತ್ತಿರುವ ಮಹಿಳೆಯರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಕುಟುಂಬದಿಂದ ನೊಂದು ಒಂಟಿಯಾಗಿ ಜೀವನ ನಿರ್ವಹಿಸುತ್ತಿರುವ ಮಹಿಳೆಯರಿಗೆ ಸಂಜೀವಿನಿ ಯೋಜನೆಯಂತಹ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಬದುಕನ್ನು ಕಟ್ಟಿ ಕೊಂಡು ಉತ್ತಮ ರೀತಿಯಲ್ಲಿ ಜೀವಿಸುವಂತೆ ಸರ್ಕಾರ ಮಹಿಳೆಯರಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ ಅದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಬಿ. ಸುಜೇಂದ್ರ, ವಕೀಲರಾದ ಡಿ.ಎಸ್. ಮಮತಾ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹಂತೇಶ್ ಭಜಂತ್ರಿ, ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ವೀರಭದ್ರಯ್ಯ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ ಸಿ.,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸಂತೋಷ್, ಜಿಲ್ಲಾ ಮಕ್ಕಳ ರಚನಾ ಘಟಕದ ಅಧಿಕಾರಿ ಲೋಕೇಶಪ್ಪ,ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

———————–ಪ್ರಕಾಶ್ ಕೆ ಕೋಟಿಗನಹಳ್ಳಿ

Leave a Reply

Your email address will not be published. Required fields are marked *

× How can I help you?