ನಾಗಮಂಗಲ:ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಸಮಾರಂಭದ ಪೂರ್ವಭಾವಿ ಸಭೆಗೆ ಹಾಜರಾಗದ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ಹಾಗೂ ತಹಶೀಲ್ದಾರ್ ಜಿ.ಆದರ್ಶ ತಿಳಿಸಿದರು.
ನಾಗಮಂಗಲ ಪಟ್ಟಣದ ತಾಲ್ಲೂಕು ಆಡಳಿತ ಸೌಧದ ತಾಲ್ಲೂಕು ಕಛೇರಿ ನ್ಯಾಯಾಲಯದ ಸಭಾಂಗಣದಲ್ಲಿ ಅಕ್ಟೋಬರ್ 17 ರಂದು ನಡೆಯಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವತಿಯಿಂದ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಪತ್ರದ ಮೂಲಕ ಖುದ್ದಾಗಿ ಸಭೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಲಾಗಿದ್ದರೂ ಕೂಡಾ ಕೆಲವು ಅಧಿಕಾರಿಗಳು ಈ ಪೂರ್ವಭಾವಿ ಸಭೆಗೆ ಹಾಜರಾಗಿರುವುದಿಲ್ಲ ಅಂತಹ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಹೇಳಿದರು.
ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಸಮಾರಂಭವನ್ನು ತಾಲ್ಲೂಕು ಆಡಳಿತದ ಸೌಧದಲ್ಲಿ ಆಚರಣೆ ಮಾಡುವುದರ ಜೊತೆಗೆ ನಾಯಕ ಸಮುದಾಯದಲ್ಲಿ ಉತ್ತಮ ಸಮಾಜ ಸೇವೆ ಮಾಡಿದ ವ್ಯಕ್ತಿಗಳನ್ನು ಈ ಸಮಾರಂಭದಲ್ಲಿ ಸನ್ಮಾನ ಮಾಡಲಾಗುವುದು.
ಆದ್ದರಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಸಮಾರಂಭಕ್ಕೆ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳ್ಳಿಸಬೇಕು ಎಂದು ತಹಶೀಲ್ದಾರ್ ಜಿ.ಆದರ್ಶ ಅವರು ಮನವಿ ಮಾಡಿದರು.
ಈ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ರಾಜೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್. ಸಿ.ಕೃಷ್ಣಮೂರ್ತಿ. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್ , ವಲಯ ಅರಣ್ಯ ಇಲಾಖೆ ಪ್ರಕಾಶ್, ಮಾಚನಾಯಕನಹಳ್ಳಿ ನಾಗರಾಜ್, ಬೆಳ್ಳೂರು ಮುತ್ತಣ್ಣ, ಲಾಳನಕೆರೆ ಚಂದ್ರಶೇಖರ್, ಹಡೇನಹಳ್ಳಿ ವಿಜಯಕುಮಾರ್. ವಾಲ್ಮೀಕಿ ಜನಾಂಗದ ಮಹಿಳಾ ಅಧ್ಯಕ್ಷೆ ನಾಯಕನಕೊಪ್ಪಲು ಸುನಂದಮ್ಮ, ಹೆಚ್.ಕ್ಯಾತನಹಳ್ಳಿ ಮಂಜುನಾಥ್ ಸೇರಿದಂತೆ ವಾಲ್ಮೀಕಿ ಜನಾಂಗದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
—————–ಬಿ.ಹೆಚ್ ರವಿ ನಾಗಮಂಗಲ