ತುಮಕೂರು-ತುಮಕೂರು ವಿಶ್ವವಿದ್ಯಾಲಯವು ಒಂದೆರಡು ದಿನದಲ್ಲಿ ನೂತನ ಬಿದರಕಟ್ಟೆ ಕ್ಯಾಂಪಸ್ನ ವಿಶಾಲ 350 ಎಕರೆ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿದ್ದು ನೂತನ ಕ್ಯಾಂಪಸ್ಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಬಸ್ ಸಂಚಾರಕ್ಕೆ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡರು ಬುಧವಾರ ಚಾಲನೆ ನೀಡಿದರು.
ತುಮಕೂರು ನಗರದ ವಿಶ್ವವಿದ್ಯಾಲಯದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿಶ್ವವಿದ್ಯಾಲಯದ ವಿವಿಧ ಇಲಾಖೆಗಳನ್ನು ಬಿದರಕಟ್ಟೆಯ ನೂತನ ಕ್ಯಾಂಪಸ್ಗೆ ಸ್ಥಳಾಂತರ ಮಾಡಲಾಗುತ್ತಿದೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೃದಯ ಭಾಗದಲ್ಲಿ ಇರುವ ಈ ಕ್ಯಾಂಪಸ್ಗೆ ಜಾಗ ಒದಗಿಸಲು ತಾವು ಶ್ರಮಿಸಿದ್ದನ್ನು ಈ ಸಂದರ್ಭದಲ್ಲಿ ಶಾಸಕರು ನೆನಪಿಸಿಕೊಂಡರು. ಇದೇ 14ರಂದು ನೂತನ ಕ್ಯಾಂಪಸ್ ಉದ್ಘಾಟನೆಗೊಳ್ಳಲಿದೆ ಎಂದು ಅವರು ತಿಳಿಸಿದರು.
ಹಿಂದಿನ ಕಾಂಗ್ರೆಸ್ ಸರಕಾರವು ತುಮಕೂರಿಗೆ ಕೇವಲ ವಿಶ್ವವಿದ್ಯಾಲಯವನ್ನು ಮಂಜೂರು ಮಾಡಿತ್ತು. ಅದಕ್ಕೆ ಅಗತ್ಯವಾದ ಜಮೀನು ಅಥವಾ ಯಾವುದೇ ಮೂಲ ಸೌಲಭ್ಯಗಳನ್ನು ಒದಗಿಸಿರಲಿಲ್ಲ. ತಮ್ಮ ಸರಕಾರ ಬಂದ ಮೇಲೆ ನಿರಂತರ ಪ್ರಯತ್ನದ ನಂತರ ಬಿದರಕಟ್ಟೆಯಲ್ಲಿ ಜಮೀನು ಮಂಜೂರಾಯಿತು ಎಂದು ಅವರು ತಿಳಿಸಿದರು.
ಈ ವಿಶಾಲ ಕ್ಯಾಂಪಸ್ಗೆ ಬುಧವಾರದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳನ್ನು ಗಂಟೆಗೆ ಒಮ್ಮೆಯಂತೆ ಓಡಿಸಲಾಗವುದು. ಅದರಿಂದ ವಿಶ್ವವಿದ್ಯಾಲಯಕ್ಕೆ ಹೋಗುವ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ನಾಗವಲ್ಲಿ, ಹೆಬ್ಬೂರು, ಗೂಳೂರು, ಬಳ್ಳಗೆರೆ, ಗಂಗೋನಹಳ್ಳಿ, ಸಿರಿವರ, ಕಣಕುಪ್ಪೆ, ಅರಿಯೂರು ಭಾಗಗಳಿಗೆ ಈ ಬಸ್ ಸಂಚಾರದಿಂದ ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದರು.
ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಿದ. ಕ ರಾ ರ ಸಾ ನಿಗಮ/ಸಂಸ್ಥೆಯ ಅಧಿಕಾರಿಗಳಿಗೆ ಶಾಸಕರು ತಮ್ಮ ಅಭಿನಂದನೆಗಳನ್ನು ತಿಳಿಸಿದರು.
ಉದ್ಘಾಟನಾ ಬಸ್ನಲ್ಲಿ ಶಾಸಕರು, ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮತ್ತು ವಿದ್ಯಾರ್ಥಿಗಳು ನೂತನ ಕ್ಯಾಂಪಸ್ಗೆ ಪಯಣಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಂಕರ ಬಿಜೆಪಿ ಮುಖಂಡ ಪ್ರಭಾಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.