ಅರಕಲಗೂಡು-ಇದೇ ತಿಂಗಳ ಇಪ್ಪತ್ತೈದನೇ ತಾರೀಕು ಪಟ್ಟಣ ಪಂಚಾಯತಿ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ನಡೆಸಲು ಅಧಿಕಾರಿಗಳು ನಿರ್ಧರಿಸಿ ಅದರ ಪೂರ್ವ ಪ್ರಕ್ರಿಯೆಗಳನ್ನು ಪೂರ್ಣ ಗೊಳಿಸಿದ್ದಾರೆ.ಸದ್ಯ ಆ ಹರಾಜು ಪ್ರಕ್ರಿಯೆಯನ್ನು ಮುಂದೂಡುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಂಸದರಿಗೆ ಕೆಲವರು ಒತ್ತಡ ಹಾಕಿದ್ದಾರೆಂಬ ಮಾಹಿತಿಗಳು ಲಭ್ಯವಾಗಿದ್ದು,ಒಂದು ವೇಳೆ ನಿಗದಿಪಡಿಸಿದ ದಿನ ಮಳಿಗೆಗಳ ಹರಾಜು ಕಾರ್ಯ ನಡೆಯದೆ ಹೋದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ರೈತ ಸಂಘದ ಕಾರ್ಯಾಧ್ಯಕ್ಷ ಭುವನೇಶ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾಘೋಷ್ಠಿ ನಡೆಸಿ ಮಾತನಾಡಿದ ಅವರು ಪಟ್ಟಣ ಪಂಚಾಯತಿಗೆ ಹತ್ತು ಲಕ್ಷಕ್ಕೂ ಹೆಚ್ಚು ಆದಾಯ ತಂದುಕೊಡಲಿರುವ 122ಮಳಿಗೆಗಳನ್ನು ಪಟ್ಟಭದ್ರ ಹಿತಾಶಕ್ತಿಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿವೆ.ಮೂರು ಕಾಸಿನ ಬಾಡಿಗೆಯನ್ನು ಪಟ್ಟಣ ಪಂಚಾಯತಿಗೆ ಪಾವತಿಸಿ ಅದೇ ಮಳಿಗೆಗಳನ್ನು ಬೇರೆಯವರಿಗೆ ಬಾಡಿಗೆ ನೀಡಿ 25 ರಿಂದ 30 ಸಾವಿರ ರೂಪಾಯಿಗಳ ಬಾಡಿಗೆಯನ್ನು ತಾವುಗಳು ಪಡೆದುಕೊಳ್ಳುತ್ತಿದ್ದಾರೆ.
ಬಿಟ್ಟಿ ಹಣ ಸಂಪಾದನೆಯ ರುಚಿ ಕಂಡಿರುವ ಅವರು ಹಿಂದಿನಿಂದಲೂ ಮಳಿಗೆಗಳ ಮರು ಹರಾಜು ನಡೆಯದಂತೆ ನೋಡಿಕೊಂಡಿದ್ದಾರೆ.ಈ ಮಳಿಗೆಗಳ ಹರಾಜು ವಿಷಯ ಮಾನ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನು ಏರಿ ಈಗ ಪಟ್ಟಣ ಪಂಚಾಯತಿಯ ಪರ ಆದೇಶವು ಅಲ್ಲಿಂದ ಹೊರ ಬಿದ್ದಿದೆ.
ಇದನ್ನೇ ಆಧಾರವನ್ನಾಗಿಟ್ಟುಕೊಂಡು ಮಳಿಗೆಗಳ ಹರಾಜು ನಡೆಸಲು ಪ.ಪಂ ಮುಂದಾಗಿದ್ದು ಅದಕ್ಕೆ ತಡೆ ಒಡ್ಡಲು ಹಿಂಬಾಗಿಲಿನ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಪ.ಪಂ ಬೊಕ್ಕಸಕ್ಕೆ ಮರು ಹರಾಜು ಪ್ರಕ್ರಿಯೆಯಿಂದ ಸಾಕಷ್ಟು ಹಣ ಹರಿದುಬರಲಿದ್ದು ಅದನ್ನು ಬಳಸಿ ನಗರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಿದೆ.
ಈ ಕಾರಣದಿಂದ ಅಧಿಕಾರಿಗಳು ಮತ್ತು ಸಂಸದರು ಈ ವಿಷಯದಲ್ಲಿ ಮೂಗು ತೂರಿ ಸಬಾರದು.ಎಲ್ಲ ಸಮುದಾಯದ ಜನರಿಗೂ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಒದಗಿಸಿಕೊಡಬೇಕು ಎಂದು ಭುವನೇಶ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಸಿರು ಕ್ರಾಂತಿಯ ಅಧ್ಯಕ್ಷ ದಿನೇಶ್, ರೈತ ಸಂಘದ ಹಿರಿಯ ಮುಖಂಡ ರಾಮೇಗೌಡ, ಅರಕಲಗೂಡು ಹಿತ ರಕ್ಷಣಾ ವೇದಿಕೆಯ ನಿರಂಜನ್, ಮುಂತಾದವರು ಇದ್ದರು.
————————-ಶಶಿಕುಮಾರ್ ಕೆಲ್ಲೂರು