ಚಿಕ್ಕಮಗಳೂರು-ಪಂಚಾಯಿತಿ ವ್ಯಾಪ್ತಿಯಲ್ಲಿ ಶ್ರಮಿಕರಂತೆ ದುಡಿಯುವ ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳನ್ನು ನ್ಯಾಯಯುತವಾಗಿ ಈಡೇರಿಸುವುದು ಸರ್ಕಾರದ ಮೂಲ ಕರ್ತವ್ಯ ಎಂದು ಎ.ಐ.ಟಿ.ಯು.ಸಿ ರಾಜ್ಯ ಕಾರ್ಯದರ್ಶಿ ಎಸ್.ವಿಜಯ್‌ಕುಮಾರ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಗ್ರಾ.ಪಂ.ನ ಪಿ.ಡಿ.ಓ,ಕಾರ್ಯದರ್ಶಿ,ಅಧ್ಯಕ್ಷರು, ಸದಸ್ಯರು ಹಾಗೂ ನೌಕರರ ಪ್ರತಿಭಟನೆಗೆ ಬುಧವಾರ ಬೆಂಬಲಿಸಿ ಅವರು ಮಾತನಾಡಿದರು.
ಪ್ರತಿಯೊಂದು ಗ್ರಾಮ ಪಂಚಾಯಿತಿ ಭಾಗದಲ್ಲಿ ಗ್ರಾಮಸ್ಥರ ಸೇವೆಗೆ ಕಾರ್ಯಪ್ರವೃತ್ತರಾಗುವ ಪಂಚ ನೌಕರರಿಗೆ ಸರ್ಕಾರವು ಸಮರ್ಪಕ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಕೆಲವೊಮ್ಮೆ ರಜೆಯನ್ನು ಲೆಕ್ಕಿಸದೇ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲು ಸರ್ಕಾರದ ಕೆಲಸವನ್ನು ಚಾಚುತಪ್ಪದೇ ಮಾಡುತ್ತಿದ್ದಾರೆ ಎಂದು ಹೇಳಿದರು.
ಗ್ರಾ.ಪಂ. ಪಂಚ ನೌಕರರ ಬುದ್ದಿ ಹಾಗೂ ದೈಹಿಕ ಶಕ್ತಿಯಿಂದ ಸರ್ಕಾರಕ್ಕೆ ಅನುದಾನ ಕ್ರೂಢೀಕರಣವಾಗುತ್ತಿದೆ. ಈ ಕರ್ತವ್ಯ ನಿರ್ವಹಿಸುತ್ತಿರುವ ಶ್ರಮ ಉನ್ನತ ಅಧಿಕಾರಿಗಳು ತಿಳಿಯದಾಗಿದೆ. ಹೀಗಾಗಿ ನೌಕರರು ಭಿನ್ನಾಭಿಪ್ರಾಯ ಸಡಿಲಿಸಿ ಐಕ್ಯತೆಯಿಂದ ಹೋರಾಟ ರೂಪಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ನೌಕರರು ಆಕಸ್ಮಿಕ ಸಾವು ಸಂಭವಿಸಿದರೆ ಕುಟುಂಬ ನಿರ್ವಹಣೆಗಾಗಿ ಸರ್ಕಾರ ಅನುಕಂಪದ ಆಧಾರದಲ್ಲಿ ಕುಟುಂಬದ ಅರ್ಹತೆ ಹೊಂದಿರುವ ವ್ಯಕ್ತಿಗೆ ಕೆಲಸ ನೀಡುತ್ತಿಲ್ಲ. ಬಿಪಿಎಲ್ ಕಾರ್ಡ್ನಿಂದಲೂ ವಂಚಿತವಾಗಿವೆ. ಇದರಿಂದ ಸಿಬ್ಬಂದಿಗಳ ಬದುಕು ಅತ್ಯಂತ ದುಸ್ತರವಾಗಿದೆ ಎಂದು ಹೇಳಿದರು.
ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಜೇಷ್ಟತಾ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ ಬಡ್ತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳುವುದು ಅವಶ್ಯಕ ಎಂದ ಅವರು ಎಲ್ಲಾ ಪಂಚಾಯಿತಿ ಅಧಿಕಾರಿಗಳ ಹುದ್ದೆ ಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತೀಕರಿಸುವುದು ಮುಖ್ಯವಾಗುತ್ತದೆ ಎಂದು ಹೇಳಿದರು.
ಅರ್.ಡಿ.ಪಿ.ಆರ್. ಕುಟುಂಬದ ಬೇಡಿಕೆಗಳ ಸಂಬoಧ ಸರ್ಕಾರ ಮತ್ತು ಇಲಾಖೆಗೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಯಾವುದೇ ಮನವಿಗಳಿಗೂ ಸ್ಪಂದಿಸದಿದೇ ಯಾವುದೇ ಸಮಸ್ಯೆಗಳಿಗೆ ಪಿಡಿಓ ಹಾಗೂ ಸಿಬ್ಬಂದಿಗಳನ್ನು ಹೊಣೆಗಾರರಾಗಿಸುವುದು ನ್ಯಾಯಬದ್ಧವಲ್ಲ ಎಂದು ತಿಳಿಸಿದರು.
—————--ಸುರೇಶ್