ಚಿಕ್ಕಮಗಳೂರು-ಮದ್ಯವರ್ಜನ ಶಿಬಿರ-ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರು ಮದ್ಯಮುಕ್ತ ಸಮಾಜದ ಕಲ್ಪನೆಗೆ ಒತ್ತು ಕೊಟ್ಟಿದ್ದಾರೆ-ಮರುಳಸಿದ್ಧ ಸ್ವಾಮೀಜಿ

ಚಿಕ್ಕಮಗಳೂರು-ಮದ್ಯವರ್ಜನ ಶಿಬಿರದಿಂದಾಗಿ ಹಲವಾರು ಮಂದಿಯ ಬದುಕಿನ ಕತ್ತಲೆ ದೂರವಾಗಿದೆ.ಗಾಂಧೀಜಿಯವರ ತತ್ವಾದರ್ಶದಂತೆ ನಡೆದುಕೊಳ್ಳುತ್ತಿರುವ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರು ಮದ್ಯಮುಕ್ತ ಸಮಾಜದ ಕಲ್ಪನೆಗೆ ಒತ್ತು ಕೊಟ್ಟಿದ್ದಾರೆ ಎಂದು ಬಸವತತ್ವ ಪೀಠದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ನಗರದ ರಾಮನಹಳ್ಳಿ ಸಮೀಪ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್, ಜನಜಾಗೃತಿ ವೇದಿಕೆ ಟ್ರಸ್ಟ್ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ಧ ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಆರ್ಶೀವಚನ ನೀಡಿದರು.

ಕುಡಿತ ಎಂಬುದು ಎಲ್ಲಾ ಕೆಡುಕುಗಳಿಗೆ ಕಾರಣ.ಅದರಿಂದಾಗುವ ಆರ್ಥಿಕ ನಷ್ಟಕ್ಕಿಂತ, ನೈತಿಕ ನಷ್ಟ ಬಹಳ ಅಪಾಯಕಾರಿ. ರೋಗದಿಂದ ವ್ಯಕ್ತಿ ಮಾತ್ರ ನೋವು ಅನುಭವಿಸಿದರೆ ಮದ್ಯಪಾನದಂತ ವ್ಯಸನದಿಂದ ಆತನ ಇಡೀ ಕುಟುಂಬ ಮತ್ತು ಸಮಾಜ ನೋವು ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.

ಒಳ್ಳೆಯ ಕೆಲಸಕ್ಕೆ ನಾಳೆ ಎಂದೆನ್ನದೇ ಇವತ್ತಿನಿಂದಲೇ ಪ್ರಾರಂಭಿಸೋಣ. ನಮ್ಮಲ್ಲಿ ಹಗೆತನ ಇಲ್ಲದೆ ಶಾಂತಿ ನೆಲೆಸಬೇಕು.ಅದಕ್ಕಾಗಿ ದುಶ್ಚಟಮುಕ್ತ ಸಮಾಜ ನಿರ್ಮಾಣ ಆಗಬೇಕು. ನಾವು ನವಜೀವನ ಆರಂಭಿಸಬೇಕಾದರೆ ಮೊದಲು ನಮ್ಮ ತಪ್ಪಿನ ಅರಿವು ನಮಗೆ ಆಗಬೇಕು ಎಂದರು.

ಗ್ರಾಮಾಭಿವೃದ್ದಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ,ಧರ್ಮಸ್ಥಳದ ಕಾರ್ಯ ಸಮಾಜಮುಖಿ ದುಶ್ಚಟಗಳಿಂದ ನರಳುತ್ತಿರುವ ವ್ಯಸನಿಗಳು ಸಮಾಜದಲ್ಲಿ ಸಾತ್ವಿಕ ಜೀವನ ನಡೆಸಲು ಮದ್ಯ ವರ್ಜನ ಶಿಬಿರದಲ್ಲಿ ಪಾಲ್ಗೊಂಡರೆ ಮಾತ್ರ ನಾಗರೀಕ ಸಮಾಜದಲ್ಲಿ ಸತ್ಪ್ರಜೆಯಾಗಿ ಬದುಕಿ ಮಾದರಿ ಜೀವನ ನಡೆಸಬಹುದು ಎಂದು ತಿಳಿಸಿದರು.

ಬಸವನಹಳ್ಳಿ ಠಾಣೆ ಸಬ್‌ಇನ್ಸ್ಪೆಕ್ಟರ್ ಕೀರ್ತಿಕುಮಾರ್ ಮಾತನಾಡಿ ದೇಶವನ್ನು ಶತ್ರುಗಳಿಂದ ಯೋಧರು ಕಾಪಾಡುತ್ತಾರೆ.ದುಶ್ಚಟಗಳಿಂದ ಬಲಿಯಾಗುವ ವ್ಯಸನಿಗಳನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಧರ್ಮಸ್ಥಳ ಧರ್ಮಾಧಿಕಾರಿಗಳು ವಿಶೇಷ ಶಿಬಿರಗಳನ್ನು ಆಯೋಜಿಸಿ ಕಾಪಾಡುತ್ತಿರುವುದಕ್ಕೆ ಚಿರಋಣಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ಇಂದಿನ ಸಮಾಜದಲ್ಲಿ ವ್ಯಸನ ಮುಕ್ತರಾಗಲು ಎಲ್ಲರೂ ದೃಢ ಸಂಕಲ್ಪ ಮಾಡಬೇಕು. ನಶೆ ಪದಾರ್ಥಗಳನ್ನು ಸ್ವೀಕರಿಸುವ ಮುನ್ನ ಅದರ ಬಗ್ಗೆ ಯೋಚಿಸಬೇಕು. ಒಂದು ಉತ್ತಮವಾದ ಸಮಾಜ ನಿರ್ಮಾಣ ಆಗಬೇಕಾದರೆ ಈ ನಶೆ ಪದಾರ್ಥದಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಹಿರೇಕೊಳಲೆ ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯ ಅಣ್ಣಾನಾಯ್ಕ್, ಜಿಲ್ಲಾ ಜನಜಾಗೃತಿ ಸದಸ್ಯರಾದ ನಾಗರಾಜ್‌ರಾವ್ ಕಲ್ಕಟ್ಟೆ, ಸಚ್ಚಿದಾನಂದ ನಾಯಕ್, ಜಯಚಂದ್ರ, ನಜ್ಮಾ ಆಲಿ, ಷಡಕ್ಷರಿ, ಅರವಿಂದ್ ದೀಕ್ಷಿತ್, ಮಂಜುನಾಥ್, ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿ ನಾಗರಾಜ್ ಕುಲಾಲ್, ತಾಲ್ಲೂಕು ಯೋಜನಾಧಿಕಾರಿಗಳಾದ ಕೊರಗಪ್ಪ ಪೂಜಾರಿ, ರಮೇಶ್ ನಾಯ್ಕ , ಮೇಲ್ವಿಚಾರಕ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

——–-ಸುರೇಶ್

Leave a Reply

Your email address will not be published. Required fields are marked *

× How can I help you?