ಕೆ.ಆರ್.ಪೇಟೆ-ಮನೆಯ ಬಳಿ ಹಾದು ಹೋಗಿರುವ ವಿದ್ಯುತ್ ಟಿ.ಸಿ ಇರುವ ಕಂಬದಿಂದ ವಿದ್ಯುತ್ ಸ್ಪರ್ಷ ಉಂಟಾಗಿ ರೈತ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಸುಮಾರು 12ಗಂಟೆ ಸಮಯದಲ್ಲಿ ನಡೆದಿದೆ.
ಮುದುಗೆರೆ ಗ್ರಾಮದ ರೈತ ಮೋಹನ್ ಅವರ ಧರ್ಮಪತ್ನಿ ನೇತ್ರಾವತಿಮೋಹನ್ (47) ಮೃತ ರೈತ ಮಹಿಳೆ ಎಂದು ತಿಳಿದು ಬಂದಿದೆ.
ಘಟನೆ ವಿವರ
ವಿದ್ಯುತ್ ಕಂಬದ ಹಾಗೂ ವಿದ್ಯುತ್ ತಂತಿಗಳ ಮೇಲೆ ಗಿಡಗಂಟಿಗಳು ಬೆಳೆದು ನಿಂತಿದ್ದು, ಅನುಪಯುಕ್ತ ಗಿಡಗಳನ್ನು ತೆರವು ಮಾಡುವಂತೆ ಚೆ.ಸ್ಕಾಂ ಅಧಿಕಾರಿಗಳಿಗೆ ಹಲವು ಭಾರಿ ಮನವಿ ಸಲ್ಲಿಸಿದರೂ ಸಹ ಚೆ.ಸ್ಕಾಂ ಇಂಜಿನಿಯರ್ ನಿರ್ಲಕ್ಷ್ಯ ವಹಿಸಿದ್ದ ಕಾರಣ ಅನುಪಯುಕ್ತ ಗಿಡದ ಕಾಂಡ ಮತ್ತು ವಿದ್ಯುತ್ ತಂತಿ ಪರಸ್ಪರ ಸ್ಪರ್ಷಗೊಂಡು ವಿದ್ಯುತ್ ಪ್ರವಹಿಸಿ ಮನೆಯಿಂದ ಹೊರ ಬಂದ ರೈತ ಮಹಿಳೆ ನೇತ್ರಾವತಿ ಅವರಿಗೆ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಘಟನೆಯಿಂದ ಗ್ರಾಮದಲ್ಲಿ ಉದ್ರಿಕ್ತ ಪರಿಸ್ಥಿತಿ ಉಂಟಾಗಿತ್ತು. ಚೆ.ಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿದರು.
ವಿಷಯ ತಿಳಿದ ಕೂಡಲೇ ಗ್ರಾಮಕ್ಕೆ ದೌಡಾಯಿಸಿದ ಶಾಸಕ ಹೆಚ್.ಟಿ.ಮಂಜು ಅವರು ಗ್ರಾಮಸ್ಥರನ್ನು ಸಮಾಧಾನ ಪಡಿಸಿ, ಚೆ.ಸ್ಕಾಂ ಅಧಿಕಾರಿಗಳಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಹಿಂದೆ ವಿದ್ಯುತ್ ಸ್ಪರ್ಷದಿಂದ 3ಸಾವು
ಚೆ.ಸ್ಕಾಂ ಅಧಿಕಾರಿಗಳ ಕರ್ತವ್ಯ ಲೋಪದಿಂದ ಈ ವಿದ್ಯುತ್ ಅವಗಡ ಸಂಭವಿಸಿರುವ ಮುದುಗೆರೆ ಗ್ರಾಮದ ಇದೇ ಜಾಗದಲ್ಲಿ ವಿದ್ಯುತ್ ಕಂಬಕ್ಕೆ ಗಿಡಗೆಂಟೆಗಳು ಬೆಳೆದುಕೊಂಡಿದ್ದ ಕಾರಣ ಈ ಹಿಂದೆಯೂ ವಿದ್ಯುತ್ ಸ್ಪರ್ಷದಿಂದ ಗ್ರಾಮದ ಸತೀಶ್, ಬಸವೇಗೌಡ, ರವಿ ಎಂಬ ಮೂವರು ಒಂದೇ ದಿನ ಮೃತಪಟ್ಟಿದ್ದರು.
ಆದರೂ ಎಚ್ಚೆತ್ತುಕೊಳ್ಳದೇ ಇರುವ ಚೆ.ಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾರಣದಿಂದ ಮತ್ತೊಂದು ಜೀವಹಾನಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ಎಲ್ಲೆಲ್ಲಿ ವಿದ್ಯುತ್ ಕಂಬಗಳ ಮೇಲೆ ಗಿಡಗೆಂಟೆಗಳು ಬೆಳೆದುಕೊಂಡಿವೆಯೋ ಅದನ್ನೆಲ್ಲೆ ಕಿತ್ತು ಸ್ವಚ್ಚಗೊಳಿಸಬೇಕು ಮುಂದೆ ಜೀವಹಾನಿಯಾಗದಂತೆ ನೋಡಿಕೊಳ್ಳಬೇಕು. ಮೃತ ರೈತ ಮಹಿಳೆ ನೇತ್ರಾವತಿ ಮೋಹನ್ ಕುಟುಂಬಕ್ಕೆ ಕನಿಷ್ಠ 50ಲಕ್ಷ ಪರಿಹಾರ ನೀಡಬೇಕು. ಹಾಗೂ ಮೃತ ಮಹಿಳೆಯ ಕುಟುಂಬಕ್ಕೆ ಚೆ.ಸ್ಕಾಂನಲ್ಲಿ ಉದ್ಯೋಗ ನೀಡಬೇಕು ಎಂದು ಮುದುಗೆರೆ ಗ್ರಾಮಸ್ಥರು ಶಾಸಕರು ಮತ್ತು ಸ್ಥಳದಲ್ಲಿ ಹಾಜರಿದ್ದ ಚೆ.ಸ್ಕಾಂ ಅಧಿಕಾರಿಗಳನ್ನು ಒತ್ತಾಯ ಮಾಡಿದರು.
ಮೃತ ಮಹಿಳೆಯ ವೈದ್ಯಕೀಯ ಪರೀಕ್ಷೆಗಾಗಿ ಮಂಡ್ಯ ಮಿಮ್ಸ್ಗೆ ಸಾಗಿಸಲಾಯಿತು.ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
——————--ಶ್ರೀನಿವಾಸ್ ಕೆ.ಆರ್.ಪೇಟೆ