ನಾಗಮಂಗಲ:’ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನದ ಅಂಗವಾಗಿ ಕರ್ನಾಟಕ ಜ್ಯೋತಿ ರಥಯಾತ್ರೆ ನಾಗಮಂಗಲ ತಾಲ್ಲೂಕಿನಲ್ಲಿ ಸಂಚರಿಸುವುದರಿಂದ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸ ಬೇಕು ಎಂದು ತಹಶೀಲ್ದಾರ್ ಜಿ.ಎಂ.ಸೋಮಶೇಖರ್ ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ನಾಗಮಂಗಲ ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ನಡೆದ ಕರ್ನಾಟಕ ಜ್ಯೋತಿ ರಥ ಯಾತ್ರೆ ನಾಗಮಂಗಲ ತಾಲ್ಲೂಕಿನ ಸಂಚರಿಸುವ ಸಂಬಂಧಿಸಿದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ತಹಶೀಲ್ದಾರ್ ಜಿ.ಎಂ.ಸೋಮಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮದ್ದೂರು ತಾಲ್ಲೂಕಿನಿಂದ ಕರ್ನಾಟಕ ಜ್ಯೋತಿ ರಥ ಯಾತ್ರೆ ಆಗಸ್ಟ್ 19 ರಂದು ಬೆಳಿಗ್ಗೆ ನಾಗಮಂಗಲ ತಾಲ್ಲೂಕಿನ ಗಡಿ ಭಾಗದ ದೇವಲಾಪುರ ಹೋಬಳಿಯ ಕುಡುಗುಬಾಳು ಗ್ರಾಮಕ್ಕೆ ಆಗಮಿಸಲಿದೆ.ಆದ್ದರಿಂದ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,ಶಿಕ್ಷಕರು,ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರುಗಳು,ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಪೂರ್ಣ ಕುಂಭದೊಂದಿಗೆ ಕರ್ನಾಟಕ ಜ್ಯೋತಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಬೇಕು ಎಂದರು.
ರಥಯಾತ್ರೆಯು ಪ್ರಥಮವಾಗಿ ನಾಗಮಂಗಲ ತಾಲ್ಲೂಕಿನ ಕುಡುಗುಬಾಳಿಂದ ದೇವಲಾಪುರ ತಟ್ಟಹಳ್ಳಿ ದೇವಲಾಪುರ ಹ್ಯಾಂಡ್ ಪೋಸ್ಟ್, ನಾಗಮಂಗಲ ಪಟ್ಟಣದ ರಾಜಬೀದಿಯಲ್ಲಿ ಮೆರವಣಿಗೆ ಮೂಲಕ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಸಂಭ್ರಮ 50ರ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಸಿದ ನಂತರ ಬೋಗಾದಿ ಗ್ರಾಮಕ್ಕೆ ತೆರಳಿ ಮಂಗಳವಾರ ಬೆಳಿಗ್ಗೆ ತಾಲ್ಲೂಕಿನ ಕೆಸುವಿನಕಟ್ಟೆ ಯಿಂದ ರಥಯಾತ್ರೆಯನ್ನು ಕೆ.ಆರ್ ಪೇಟೆ ತಾಲ್ಲೂಕು ಆಡಳಿತದವರು ಸ್ವಾಗತಿಸುತ್ತಾರೆ ಎಂದು ಹೇಳಿದರು
ಈ ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್. ಸಿ.ಕೃಷ್ಣಮೂರ್ತಿ,ತಾಲ್ಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ರಮೇಶ್, ಬೋಗಾದಿ ಗ್ರಾಮ ಪಂಚಾಯಿತಿ ಅಧಿಕಾರಿ ಕೃಷ್ಣಮೂರ್ತಿ,ಅಗ್ನಿ ಶಾಮಕ ದಳದ ಠಾಣಾಧಿಕಾರಿ ಮಂಜುನಾಥ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.