ಕೆ.ಆರ್.ಪೇಟೆ:ಕಳಪೆ ಕಾಮಗಾರಿ-ಬೂಕನಕೆರೆ ಸಮುದಾಯ ಆರೋಗ್ಯ ಕೇಂದ್ರದ ಗುತ್ತಿಗೆದಾರನ ವಿರುದ್ಧ ಶಾಸಕ ಹೆಚ್.ಟಿ ಮಂಜು ಆಕ್ರೋಶ-ಕಪ್ಪುಪಟ್ಟಿಗೆ ಸೇರಿಸಲು ಸೂಚನೆ

ಕೆ.ಆರ್.ಪೇಟೆ:6.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬೂಕನಕೆರೆಯ ಸಮುದಾಯ ಆರೋಗ್ಯ ಕೇಂದ್ರದ ಕಾಮಗಾರಿ ಕಳಪೆಯಾಗಿದ್ದು ಗುತ್ತಿಗೆದಾರರನನ್ನು ಕಪ್ಪು ಪಟ್ಟಿಗೆ ಸೇರಿಸಿ ತನಿಖೆ ನಡೆಸುವಂತೆ ಶಾಸಕ ಹೆಚ್ ಟಿ ಮಂಜು ಮುಖ್ಯ ಇಂಜೀನಿಯರ್ ಗೆ ಸೂಚಿಸಿದರು.

ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಅವರು ಅದೇ ಸಮಯದಲ್ಲಿ ಆರೋಗ್ಯ ಕೇಂದ್ರವನ್ನು ವೀಕ್ಷಿಸಿ ಮಾತನಾಡಿದರು.

ಆಸ್ಪತ್ರೆಯ ಕಟ್ಟಡ ಕಾಮಗಾರಿ ಅತ್ಯಂತ ಕಳಪೆಯಿಂದ ಕೂಡಿದೆ.ಒಂದು ಕೆಲಸವನ್ನು ಗುತ್ತಿಗೆದಾರ ಗುಣಮಟ್ಟದಿಂದ ನಡೆಸಿಲ್ಲ.ಜನರ ತೆರಿಗೆ ಹಣದಿಂದ ಜನರಿಗಾಗಿ ನಿರ್ಮಿಸುವ ಕಟ್ಟಡಗಳನ್ನು ತಮ್ಮ ಹಣದ ಮೋಹಕ್ಕೆ ಕಳಪೆಯಾಗಿ ಕಟ್ಟುವುದು ಎಷ್ಟು ಸರಿ.ಗುತ್ತಿಗೆದಾರನ ವಿರುದ್ಧ ಸೂಕ್ತ ಕಾನೂನು ಕ್ರಮ ಆಗುವವರೆಗೂ ನಾನು ಸುಮ್ಮನಿರುವುದಿಲ್ಲ ಎಂದು ತಿಳಿಸಿದರು.

ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ಸಮುದಾಯ ಆರೋಗ್ಯ ಕೇಂದ್ರಗಳು ಚಿಕಿತ್ಸೆಗೆ ಬರುವ ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ಸೇವೆ ಒದಗಿಸುವ ಮೂಲಕ ಜನರ ಹೃದಯ ಗೆಲ್ಲುವಂತಿರಬೇಕು.ರಕ್ಷಾ ಸಮಿತಿಯವರು ಇಲ್ಲಿನ ಕೊರತೆಗಳನ್ನು ನೀಗಿಸುವಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಆಸ್ಪತ್ರೆ ಹಾಗೂ ಸಮಾಜದ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸಿ ಸ್ಥಳೀಯ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಆರೋಗ್ಯಕ್ಕೆ ಸಂಬಂಧಿಸಿದಂತೆ ಶಿಬಿರಗಳನ್ನು ಮಾಡಿ ಜನರಿಗೆ ಸೇವೆ ನೀಡಬೇಕು ಎಂದು ಸೂಚಿಸಿದರು.

ಈ ಆಸ್ಪತ್ರೆಗೆ ಬರುವ ರೋಗಿಗಳು ಗ್ರಾಮೀಣ ಪ್ರದೇಶದ ಬಡ ಜನರು ಆಗಿದ್ದು ಇವರಿಗೆ ಸೂಕ್ತ ಚಿಕಿತ್ಸೆ ಮತ್ತು ಸ್ಪಂದನೆ ಮಾಡುವುದು ವೈದ್ಯರು ಮತ್ತು ಸಿಬ್ಬಂದಿಗಳ ಮೂಲ ಕರ್ತವ್ಯ.ಆಸ್ಪತ್ರೆಗೆ ಬರುವ ರೋಗಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ ಮತ್ತು ಔಷಧಿಗಳ ಉಚಿತ ವಿತರಣೆಗೆ ಮೊದಲ ಆದ್ಯತೆ ನೀಡಬೇಕು.ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸುವ ಹಾಸಿಗೆಗಳು ಮತ್ತು ಅವುಗಳ ಮೇಲೆ ಹಾಕುವ ಬಟ್ಟೆಗಳ ಕಾಲ-ಕಾಲಕ್ಕೆ ಶುಚಿತ್ವ ಗೊಳಿಸಲು ಕ್ರಮ ಕೈಗೊಳ್ಳಲು ಗಮನ ಹರಿಸಬೇಕಾಗಿರುತ್ತದೆ.ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಬಂದು ಕರ್ತವ್ಯ ನಿರ್ವಹಿಸ ಬೇಕು. ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗಗಳು ಪ್ರಾರಂಭವಾಗುವ ಹಂತವನ್ನು ಸೂಕ್ಷ್ಮವಾಗಿ ಗಮನಿಸಬೇಕು.ತ್ವರಿತ ಚಿಕಿತ್ಸೆ ನೀಡಲು ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಆದಷ್ಟು ಬೇಗ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಆಸ್ಪತ್ರೆಯ ನೂತನ ಡಿಜಿಟಲ್ ಎಕ್ಸರೇ ಯಂತ್ರಕ್ಕೆ ಶಾಸಕರು ಚಾಲನೆ ನೀಡಿ ದರು.

ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಹುಲ್ಲೆಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್, ತಾಲೂಕು ವೈದ್ಯಾಧಿಕಾರಿ ಡಾ ಅಜಿತ್ ಕುಮಾರ್, ಬೂಕನಕೆರೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ: ಶ್ರೀನಿವಾಸ್ ಗೌಡ, ಹಿರಿಯ ವೈದ್ಯಾಧಿಕಾರಿ ಡಾ : ವೆಂಕಟೇಶ್, ದಂತ ವೈದ್ಯ ಡಾ : ಅರುಣ್ ಕುಮಾರ್,ಬೂಕನಕೆರೆ ಮಂಜುನಾಥ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮನು ಮಾಕವಳ್ಳಿ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?