ಚಿಕ್ಕಮಗಳೂರು-ಎಲ್ಲಾ ಜಾತಿಗಳ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಸಮೀಕ್ಷೆ ವರದಿ ಸಿದ್ಧಪಡಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಚಿಕ್ಕಮಗಳೂರು-ಎಲ್ಲಾ ಜಾತಿಗಳ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಗಳ ಬಗ್ಗೆ ಸಮಗ್ರವಾದ ಅಧ್ಯಯನ ನಡೆಸಿ ಸಮೀಕ್ಷೆ ವರದಿಯನ್ನು ಸಿದ್ಧಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ಮುಖಂಡರುಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ಸಂಬoಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಸೋಮವಾರ ಮನವಿ ನೀಡಿ ಶೀಘ್ರವೇ ಜಾತಿಗಣತಿಯ ವರದಿಯನ್ನು ಅನುಷ್ಟಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ಮಾತನಾಡಿದ ಒಕ್ಕೂಟದ ಜಿಲ್ಲಾ ಸಂಚಾಲಕ ಡಿ.ಸಿ.ಪುಟ್ಟೇಗೌಡ,ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾರ್ವಜನಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ರಾಜ್ಯಸರ್ಕಾರ ಕೂಡಲೇ ಜಾರಿಗೊಳಿಸಿದರೆ ರಾಜ್ಯದ ಏಳು ಕೋಟಿ ಜನತೆಯ ಆರ್ಥಿಕ, ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿ ತಿಳಿಯಲಿದೆ ಎಂದು ಹೇಳಿದರು.

ಜಾತಿವಾರು ಅಂಕಿ ಅoಶಗಳು ಭಾರತದಲ್ಲಿ 1932ರ ನಂತರ ದಾಖಲಾಗಿಲ್ಲ. ಹತ್ತು ವರ್ಷಗಳಿಗೊಮ್ಮೆ ನಡೆಯುವ ಜಾತಿಗಣತಿಯಲ್ಲಿ ಕೂಡ ಶೋಷಿತ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಅಂಕಿ ಅoಶಗಳು ಜಾತಿವಾರು ಸಿಗುತ್ತಿಲ್ಲ. ರಾಜ್ಯದಲ್ಲಿ 2015ರಲ್ಲಿ ನಡೆಸಲಾದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಗಣತಿಯ ಅಂಕಿ ಅoಶಗಳಿದ್ದು ಪ್ರಾತಿನಿಧ್ಯ ನ್ಯಾಯ ಕೊಡುವಲ್ಲಿ ಬಳಸಿಕೊಳ್ಳಬಹುದು ಎಂದರು.

ಅoಕಿಅoಶಗಳ ಆಧಾರವಿದ್ದಲ್ಲಿ ಯಾವುದೇ ಕಾರ್ಯಕ್ರಮ ಕಾನೂನುಬದ್ಧ, ಸಂವಿಧಾನ ಬದ್ಧವಾಗಿರುತ್ತದೆ. ಯಾರೇ ಪ್ರಶ್ನಿಸಿದರೂ ಸೂಕ್ತ ಪ್ರತ್ಯುತ್ತರ ಕೊಡಲು ಸಾಧ್ಯ. ಹೀಗಾಗಿ ಸೂಕ್ತ ಅಂಕಿ ಅಂಶಗಳಿದ್ದಲ್ಲಿ ನ್ಯಾಯಾಲಯವು ಕೂಡಾ ಅವುಗಳನ್ನು ಸರಿಯೆಂದು ಪರಿಗಣಿಸಿ ತೀರ್ಪು ಕೊಡಲು ಸಾಧ್ಯವಾಗಲಿದೆ.

ಖಾಸಗೀ ಕ್ಷೇತ್ರದಲ್ಲೂ ಮೀಸಲಾತಿ ನೀಡಬೇಕಾಗಿರುವುದು ಪ್ರಸ್ತುತ ತುಂಬಾ ಅವಶ್ಯ. ಖಾಸಗಿಯಲ್ಲಿ ಮೀಸಲಾತಿ ಇಲ್ಲವೆಂದು ಮೀಸಲಾತಿ ಉದ್ದೇಶವೇ ಈಡೇರದೆ, ಸಂವಿಧಾನದ ಉದ್ದೇಶ ಕೂಡಾ ಈಡೇರದಂತಾಗುತ್ತದೆ. ಈ ಬಗ್ಗೆ ನ್ಯಾಯವಾದಿ ಕಾಂತರಾಜು ವರದಿಯಲ್ಲಿ ಪ್ರತಿ ಜಾತಿ, ಸಮುದಾಯ ಸಾಮಾಜಿಕ, ಆರ್ಥಿಕ ವಿವರಗಳನ್ನು ನೀಡಲಾಗಿದೆ ಎಂದು ಹೇಳಿದರು.

ಆ ನಿಟ್ಟಿನಲ್ಲಿ ಅಹಿಂದ ವರ್ಗಗಳ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಭಲ ಜಾತಿಗಳ ಯಾವುದೇ ಒತ್ತಡಕ್ಕೆ ಮಣಿಯದೇ ಕೂಡಲೇ ವಿಶೇಷ ಅಧಿವೇಶನ ಕರೆದು ಕಾಂತರಾಜು ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡರುಗಳಾದ ಮರ್ಲೆ ಅಣ್ಣಯ್ಯ, ಮಹಮ್ಮದ್ ಅಕ್ಬರ್, ಭರತ್, ಮೂರ್ತಿ, ದಿವಾಕರ್, ವೇಣುಗೋಪಾಲ್ ಅರಸ್, ರಮೇಶ್, ದಿವಾಕರ್ ಮತ್ತಿತರರಿದ್ದರು.

——————ಸುರೇಶ್

Leave a Reply

Your email address will not be published. Required fields are marked *

× How can I help you?