ಕೊರಟಗೆರೆ:-ನವರಾತ್ರಿ ಪೂಜೆಗಳು ಮಾನವನಿಗೆ ನವಚೈತನ್ಯವನ್ನು ನೀಡುವ ಭಕ್ತಿಶಕ್ತಿಯ ಸಂಗಮವಾಗಿವೆ-ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ

ಕೊರಟಗೆರೆ:- ನವರಾತ್ರಿ ಪೂಜೆಗಳು ಮಾನವನಿಗೆ ನವಚೈತನ್ಯವನ್ನು ನೀಡುವ ಭಕ್ತಿಶಕ್ತಿಯ ಸಂಗಮವಾಗಿವೆ.ನಮ್ಮಲ್ಲಿ ನೆಲಸಿರುವ ದುಷ್ಟಶಕ್ತಿಗಳ ಸಂಹಾರ ಮಾಡಿ ಶಿಷ್ಟಶಕ್ತಿಗಳ ರಕ್ಷಣೆ ಹಾಗೂ ಪ್ರಚೋದನೆ ಮಾಡಬೇಕಿದೆ.ನವರಾತ್ರಿಯ ದಿನಗಳಲ್ಲಿ ವ್ರತಾಚರಣೆ, ಆರಾಧನೆ ಅನುಷ್ಠಾನ ಕೈಗೊಳ್ಳುವ ಮಾನವನ ದೇಹ, ಮನ, ಭಾವ ಶುದ್ದಿಗೊಂಡು ದುರಾಚಾರ ಸ್ಥಳದಲ್ಲಿ ಸದಾಚಾರ, ದುರ್ವತನೆ ಸ್ಥಳದಲ್ಲಿ ಸದ್ವರ್ತನೆ, ದುರ್ಭಾವ ಸ್ಥಳದಲ್ಲಿ ಸದ್ಭಾವ, ಕುಮನ ಸ್ಥಳದಲ್ಲಿ ಸುಮನ ನೆಲೆಗೊಳ್ಳುತ್ತದೆ ಎಂದು ಹೊಸದುರ್ಗ ಶ್ರೀ ಕುಂಚಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ತಂಗನಹಳ್ಳಿ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾಸಂಸ್ಥಾನ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ನವರಾತ್ರಿ ಪ್ರಯುಕ್ತ ಚಂಡಿಕಾಹೋಮ ಹಾಗೂ ಮಹಾಯಜ್ಞದಲ್ಲಿ ಭಾಗವಹಿಸಿ ಅವರು ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು.

ವ್ರತಾಚರಣೆ ಆರಧಾನೆ ಅನುಷ್ಠಾನ ಕೈಕೊಳ್ಳುವ ಸ್ಥಳಗಳು ಸುಕ್ಷೇತ್ರವಾಗಿ ಧರ್ಮಕ್ಷೇತ್ರವಾಗಿ, ಅವಿಮುಕ್ತ ಕ್ಷೇತ್ರವಾಗಿ ಪರಿವರ್ತನೆಗೊಳ್ಳುತ್ತದೆ. ನಮ್ಮ ದೇಶದ ಸಂಸ್ಕೃತಿ ಉಳಿವಿಗಾಗಿ ಹಿರಿಯರು ಹಾಕಿಕೊಟ್ಟ ಸಂಪ್ರಾದಯಗಳಲ್ಲಿ ವೈಜ್ಞಾನಿಕತೆ ಅರ್ಥೈಸಿಕೊಳ್ಳುತ್ತ ಮುಂದಿನ ಪೀಳಿಗೆಗೆ ಧಾರೆಯೆರೆಯಬೇಕು ಅಂದು ಅವರು ತಿಳಿಸಿದರು.

ಸಮಾರಂಭದ ದಿವ್ಯಾಧ್ಯಕ್ಷತೆಯನ್ನು ತಂಗನಹಳ್ಳಿ ಶ್ರೀ ಕಾಶಿ ಅನ್ನಪೂರ್ಣೇಶ್ವರಿ ಮಹಾಸಂಸ್ಥಾನ ಮಠದ ಶ್ರೀ ಬಸವ ಮಹಾಲಿಂಗ ಸ್ವಾಮೀಜಿ ವಹಿಸಿದ್ದರು.ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಯಾದವ ಮಹಾಸಂಸ್ಥಾನದ ಜಗದ್ಗುರು ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ, ಶಿವಮೊಗ್ಗದ ನಾರಾಯಣ ಗುರು ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ರೇಣುಕಾನಂದ ಸ್ವಾಮೀಜಿ, ಮೇಟಿಕುರ್ಕಿಯ ಶ್ರೀ ಸಿದ್ಧಬಸವ ಸ್ವಾಮೀಜಿ, ಸಿರಗುಪ್ಪದ ಶ್ರೀ ಬಸವ ಭೂಷಣ ಸ್ವಾಮೀಜಿ, ಮಸ್ಕಿ ಇರಕಲ್ ಮಠದ ಶ್ರೀ ಬಸವ ಪ್ರಸಾದ ಸ್ವಾಮೀಜಿ ಬಸವಕಲ್ಯಾಣದ ಮಾತೋಶ್ರೀ ಸತ್ಯಕ್ಕ ದೇವಿ ಸಾನಿಧ್ಯವಹಿಸಿದ್ದರು.

ಮಾಜಿ ಶಾಸಕ ಸೊಗಡು ಶಿವಣ್ಣ, ಎ ಪಿ ಎಂ ಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ,ಕನ್ನಡ ಸೇನೆ ಧನಿಯಕುಮಾರ್,ಮೇಡಿಕಲ್ ಹನುಮಂತರಾಜು, ಇನ್ನಿತರರು ಉಪಸ್ಥಿತಿ ವಹಿಸಿದ್ದರು.

Leave a Reply

Your email address will not be published. Required fields are marked *

× How can I help you?