ಮೈಸೂರು-ದಸರಾ ಸಂಭ್ರಮದಲ್ಲಿ ಪತ್ರಕರ್ತರ ಮೇಲೆ ಪೊಲೀಸ್ ದೌರ್ಜನ್ಯ-ಜಿಲ್ಲಾಧಿಕಾರಿಗಳಿಂದ ಸೂಕ್ತ ಕ್ರಮದ ಭರವಸೆ

ಮೈಸೂರು-ದಸರಾ ಜಂಬೂಸವಾರಿ ವೇಳೆ ಪತ್ರಿಕಾ ಛಾಯಾಗ್ರಾಹಕರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ವಿರುದ್ಧ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಧ್ವನಿ ಎತ್ತಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು ತುರ್ತು ಸಭೆ ನಡೆಸಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರಲ್ಲದೆ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಅರಮನೆ ಸಭಾಂಗಣದಲ್ಲಿ ಕರೆದಿದ್ದ ಸಭೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ದೌರ್ಜನ್ಯಕ್ಕೆ ಒಳಗಾದ ಮಾಧ್ಯಮದ ಸದಸ್ಯರಿಂದ ಮಾಹಿತಿ ಪಡೆದರು.

ದಸರೆಯ ಯಶಸ್ಸಿನಲ್ಲಿ ಪತ್ರಕರ್ತರ ಪಾತ್ರ ದೊಡ್ಡದಿದೆ. ಸಾವಿರಾರು ಜನ ಸೇರಿದ ಸಂದರ್ಭದಲ್ಲಿ ಇಂತಹ ಅಹಿತಕರ ಘಟನೆಗಳು ನಡೆದು ಹೋಗುತ್ತದೆ. ಆದರೆ, ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುವುದು ನಮ್ಮ ಕರ್ತವ್ಯ. ಮುಂದಿನ ದಿನಗಳಲ್ಲಿ ಆಗಿರುವ ತಪ್ಪುಗಳು ಮರುಕಳಿಸದಂತೆ ಗಮನ ಹರಿಸುವುದಾಗಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ದಸರೆ ಸಂದರ್ಭದಲ್ಲಿ ಆನೆ, ಅಂಬಾರಿ, ಜಾನಪದ ಕಲಾ ತಂಡಗಳು ವಿಜೃಂಭಿಸಬೇಕಾದ ಜಾಗದಲ್ಲಿ ಪೊಲೀಸರ ದರ್ಪ, ದೌರ್ಜನ್ಯ, ಅವ್ಯವಸ್ಥೆ ವಿಜೃಂಭಿಸಬಾರದು. ಮೈಸೂರು ದಸರೆ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿರುವ ಮೈಸೂರಿನ ಪತ್ರಕರ್ತರು ಎಲ್ಲ ಬಗೆಯ ಅವ್ಯವಸ್ಥೆ, ದೌರ್ಜನ್ಯ ಸಹಿಸಿಕೊಂಡು ಕರ್ತವ್ಯ ನಿರ್ವಹಿಸಿದ್ದಾರೆ. ಇದನ್ನು ನಮ್ಮ ದೌರ್ಬಲ್ಯವೆಂದು ಪರಿಗಣಿಸಬಾರದು ಎಂದು ತಿಳಿಸಿದರು.

ನಂತರ ಛಾಯಾಗ್ರಾಹಕರ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಲಾಯಿತು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ನಗರ ಕಾರ್ಯದರ್ಶಿ ಕೃಷ್ಣೋಜಿ ರಾವ್, ಖಜಾಂಚಿ ಎನ್. ಸುರೇಶ್, ವಾರ್ತಾ ಇಲಾಖೆಯ ಅಧಿಕಾರಿ ಹರೀಶ್, ಹಿರಿಯ ಛಾಯಾಗ್ರಾಹಕರಾದ ಪ್ರಗತಿ ಗೋಪಾಲಕೃಷ್ಣ, ಶ್ರೀರಾಂ, ಸಂಘದ ನಿರ್ದೇಶಕರಾದ ಸೋಮಶೇಖರ್ ಚಿಕ್ಕಮರಳಿ, ರವಿಚಂದ್ರ ಹಂಚ್ಯಾ ಮತ್ತು ಛಾಯಾಗ್ರಾಹಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?