ಚಾಮರಾಜನಗರ-ಮಠವೊಂದರ ಸ್ವಾಮೀಜಿಯ ಗುರುತರ ಜವಾಬ್ದಾರಿಯಿದ್ದರೂ ಅದರ ನಡುವಿನಲ್ಲಿಯೇ ಅಧ್ಯಯನ ನಡೆಸಿ ಪಿ.ಹೆಚ್.ಡಿ ಪದವಿ ಪಡೆಯುವಲ್ಲಿ ತಾಲೂಕಿನ ಪವಿತ್ರ ಕ್ಷೇತ್ರವಾದ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿಯವರು ಯಶ ಕಂಡಿದ್ದಾರೆ.
ಡಾ. ಶರತ್ಚಂದ್ರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಆಗಮಶಾಸ್ತ್ರದಲ್ಲಿ ಎಂಬ ವಿಷಯದಲ್ಲಿ “ಅಂಶುಮದಾಗಮಮ್ ಸಂಪಾದನಾತ್ಮಕ ಮಧ್ಯನಮ್” ಹಸ್ತಪ್ರತಿಯನ್ನು ಸಂಪಾದಿಸಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧವನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಅಂಗಿಕರಿಸಿದೆ.
ಈ ಮೂಲಕ ಓದಿನ ಮೂಲಕವೇ ಪಿ.ಹೆಚ್.ಡಿ ಪದವಿ ಪಡೆದುಕೊಂಡ ಬೆರಳೆಣಿಕೆ ಸ್ವಾಮೀಜಿಗಳ ಪಟ್ಟಿಗೆ ಶ್ರೀಗಳ ಹೆಸರು ಸೇರಿಕೊಂಡಿದೆ.
ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿಯವರ ಸಾಧನೆಯ ಹಾದಿ ಸುಲಭದ್ದಾಗಿರಲಿಲ್ಲ….
ಶ್ರೀಗಳು ಫಲಹಾರ ಪ್ರಭುದೇವಸ್ವಾಮಿ ಕಾನ್ವೆಂಟ್ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮಹದೇಶ್ವರ ಬೆಟ್ಟಕ್ಕೆ ಬಂದು ಸೇರಿ ಶ್ರೀ ಸಾಲೂರು ಮಠದ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು.
ನಂತರ ಸಿದ್ಧಗಂಗಾ ಮಠದಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ಪ್ರವೇಶ ಪಡೆದು ಪಿ.ಯು.ಸಿ ಯಲ್ಲಿ ಅನುತ್ತೀರ್ಣರಾಗಿದ್ದರು.ಆದರೆ ಈ ಕಾರಣಕ್ಕೆ ಎದೆಗುಂದದೆ ಸಾಧನೆ ಮಾಡಲೇಬೇಕು ಎಂದು ನಿರ್ಧರಿಸಿದ ಶ್ರೀಗಳು, ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ವೇದಾಂತದಲ್ಲಿ ಬಿ.ಎ. ಪದವಿಗೆ ಪ್ರವೇಶ ಪಡೆಯುತ್ತಾರೆ .
ಅಲ್ಲಿ ಕನಿಷ್ಠ ಅಂಕಗಳೊಂದಿಗೆ ಉತ್ತೀರ್ಣರಾಗುತ್ತಾರೆ.ಮುಂದಕ್ಕೆ ಮೈಸೂರು ವಿಶ್ವವಿದ್ಯಾಲಯಕ್ಕೆ ಎಂ.ಎ ಮತ್ತು ಎಂ.ಫಿಲ್ ಗೆ ಪ್ರವೇಶ ಪಡೆಯುತ್ತಾರೆ.ಎಂ ಎ ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆ, ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಗೊಂದು ಎರಡು ಸ್ವರ್ಣಪದಕಗಳನ್ನು ಗಳಿಸಿಕೊಳ್ಳುತ್ತಾರೆ.
ನಂತರ ಶ್ರೀಗಳು ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ ವೇದ-ಆಗಮ ಶಿಕ್ಷಣ ಪಡೆಯುತ್ತಾರೆ. 2017 ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಡಾ. ಶರತ್ಚಂದ್ರ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ನಂದಿಕೇಶ್ವರ ತಿಲಕಂ ಹಸ್ತಪ್ರತಿಯನ್ನು ಸಂಪಾದಿಸಿ ಎಂ.ಫಿಲ್ ಪದವಿ ಪಡೆದುಕೊಳ್ಳುತ್ತಾರೆ.
ನಾಡಿನ ಖ್ಯಾತ ವಿದ್ವಾಂಸ ಮಠಾಧಿಪತಿಗಳಾದ ಶ್ರೀ ಇಮ್ಮಡಿ ಶಿವ ಬಸವ ಸ್ವಾಮೀಜಿ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದಲ್ಲದೆ, ನೇಪಾಳ, ಮಲೇಷಿಯಾದ ಪ್ರಸಿದ್ದ ವಿಶ್ವವಿದ್ಯಾನಿಯಲಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.ಅಲ್ಲದೆ ಗುಜರಾತ್, ಹಿಮಾಚಲ ಪ್ರದೇಶ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು, ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಭಾಷೆ, ಧರ್ಮ, ಸಾಹಿತ್ಯ-ಸಂಸ್ಕೃತಿ ಮುಂತಾದ ವಿಷಯಗಳಲ್ಲಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ.
ಶ್ರೀಗಳ ಈ ಸಾಧನೆಗೆ ಮಠದ ಭಕ್ತರು ಅಭಿನಂದನೆಗಳನ್ನು ತಿಳಿಸಿದ್ದಾರೆ.
——————-—-ಮಧುಕುಮಾರ್