ಕಡೂರು-ಕರ್ನಾಟಕ ಒನ್ ಸೇವಾ ಕೇಂದ್ರ ಉದ್ಘಾಟನೆ-ಜನಸಾಮಾನ್ಯರಿಗೆ ಅನುಕೂಲ-ಶಾಸಕ ಕೆ.ಎಸ್.ಆನಂದ್

ಕಡೂರು-ವಿವಿಧ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಒಂದೇ ಸೂರಿನಡಿ ಲಭ್ಯವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಒನ್ ಸೇವಾ ಕೇಂದ್ರ ಸ್ಥಾಪಿಸಿ ಜನಸಾಮಾನ್ಯರಿಗೆ ಅನು ಕೂಲ ಕಲ್ಪಿಸಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ನೂತನವಾಗಿ ಕರ್ನಾಟಕ ಒನ್ ಸಮಗ್ರ ನಾಗರೀಕ ಸೇವಾ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಒನ್ ಪೋರ್ಟಲ್ ಒಂದು ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದ್ದು, ಒಂದೇ ಪೋರ್ಟಲ್ ಅಡಿಯಲ್ಲಿ ನಾಗರಿಕ-ಕೇಂದ್ರಿತ ಸೇವೆಗಳನ್ನು ಸುಲಭಗೊಳಿಸಲು ರಾಜ್ಯ ಸರ್ಕಾರದಿಂದ ಸ್ಥಾಪಿಸಲ್ಪಟ್ಟಿದ್ದು ಎಲ್ಲಾ ಸೇವೆಗಳನ್ನು ಪ್ರವೇಶಿಸಲು ಜನರು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದರು.

ಕರ್ನಾಟಕ ಒನ್ ರಾಜ್ಯ ಸರ್ಕಾರದ ಹಲವಾರು ಸೇವೆಗಳನ್ನು ತಲುಪಿಸಲು ಉದ್ದೇಶಿಸಿದ್ದು ಆನ್ ಲೈನ್ ಪೋರ್ಟಲ್‌ನಲ್ಲಿ ಆಧಾರ್ ಸೇವೆಗಳು, ಆರೋಗ್ಯ ಇಲಾಖೆ ಸೇವೆ, ಚುನಾವಣಾ ಆಯೋಗದ ಸೇವೆ ಗಳು, ನಾಡಕಚೇರಿ ಸೇವೆ, ಇ-ಸ್ಟಾಂಪಿoಗ್, ಪುರಸಭೆಯ ಸಹಕಾರ ಸೇವೆಗಳು, ಆಹಾರ ಮತ್ತು ನಾಗರಿಕ ಸರಬರಾಜು ಸೇವೆಗಳು ಲಭ್ಯವಿದೆ.

ಅನೇಕ ಸರ್ಕಾರಿ ಇಲಾಖೆಗಳು ಮತ್ತು ಖಾಸಗಿ ಕಂಪನಿಗಳ ಸೇವೆಗಳನ್ನು ಒಂದೇ ಪೋರ್ಟಲ್ ಅಡಿಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ತ್ವರಿತ ಸೇವೆಯಲ್ಲಿ ಎಲ್ಲಾ ವಿನಂತಿಸಿದ ಸೇವೆಗಳನ್ನು ನಿಗದಿತ ಸಮಯದ ಮಿತಿಯೊಳಗೆ ತಲುಪಿಸಲಾಗುತ್ತದೆ ಹಾಗೂ ಸರಕಾರ ನೀಡುವ ಬಹುತೇಕ ಸೇವೆಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲರುವುದಿಲ್ಲ ಎಂದು ತಿಳಿಸಿದರು.

ಪುರಸಭೆ ಸದಸ್ಯ ಜ್ಯೋತಿ ವೆಂಕಟೇಶ್ ಮಾತನಾಡಿ, ಸರ್ಕಾರಿ ಕಚೇರಿ ಹಾಗೂ ರಾಜ್ಯಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಸೌಲಭ್ಯಕ್ಕೂ ಕರ್ನಾಟಕ ಒನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಬಸ್ ಪಾಸ್‌ಗಳಿಗೆ ಅರ್ಜಿ ಹಾಕಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲೇಶ್, ಕರ್ನಾಟಕ ಒನ್ ಸೇವಾ ಕೇಂದ್ರದ ಮಾಲೀಕ ಡಿ.ವಿ.ಗೌತಮ್, ಜಿ.ಪಂ. ಮಾಜಿ ಸದಸ್ಯೆ ಲೋಲಾಕ್ಷಿಬಾಯಿ, ತಾ.ಪಂ. ಮಾಜಿ ಅಧ್ಯಕ್ಷ ಚಂದ್ರಪ್ಪ, ಪುರಸಭಾ ಸದಸ್ಯ ಮದುಗುಂದಿ ಮನು, ಮತಿಘಟ್ಟ ಗ್ರಾಮ ಪಂಚಾಯಿತಿ ಸದಸ್ಯ ಶ್ರೀಕಂಠ ಒಡೆಯರ್, ತಾ.ಪಂ. ಮಾಜಿ ಅಧ್ಯಕ್ಷೆ ಪ್ರೇಮಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಪ್ರದೀಪ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

× How can I help you?