ವಿಜಯಪುರ-ಹಿಂದುಳಿದ ಜಾತಿಯಲ್ಲಿ ಬರುವ ಅಂಬಿಗ, ಕಬ್ಬಲಿಗ, ಕೋಳಿ, ಗಂಗಾಮತ, ಡೋರ, ಟೋಕರೆಕೋಳಿ,ಗೊಂಡ ಹಾಗೂ ರಾಜಗೊಂಡ,ನಾಯ್ಕಡ್ ಜಾತಿಯವರು ಎಸ್.ಟಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದು, ನಿಜವಾದ ಪರಿಶಿಷ್ಟ ಪಂಗಡ ಫಲಾನುಭವಿಗಳಾಗಿರುವ ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿಯಲ್ಲಿ ಅನ್ಯಾಯ ಮಾಡಲಾಗುತ್ತಿದೆ.ಈಗಾಗಲೇ ನೀಡಿರುವ ಗಂಗಾ ಮತಸ್ಥರ ಎಸ್.ಟಿ ಪ್ರಮಾಣ ಪತ್ರಗಳನ್ನು ವಾಪಸ್ ಪಡೆಯಬೇಕು ಎಂದು ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ ಸರಕಾರವನ್ನು ಆಗ್ರಹಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಕೇಂದ್ರ ಸರಕಾರ ಕರ್ನಾಟಕ ರಾಜ್ಯಕ್ಕೆ ಸಂಬoಧಿಸಿದoತೆ ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಯ್ಕಡ್, ನಾಯಕ, ಬೇಡ, ಬೇಡರ, ಹಾಗೂ ವಾಲ್ಮೀಕಿ ಜಾತಿಗಳ ಪರ್ಯಾಯ ಪದವಾದ ಪರಿವಾರ ಮತ್ತು ತಳವಾರ ಪರಿಶಿಷ್ಟ ಪಂಗಡದ ಸೌಲಭ್ಯ ನೀಡಬಹುದಾಗಿದೆ ಎಂದು ಹೇಳಿದೆ.ಆದರೆ ಉತ್ತರ ಕರ್ನಾಟಕದಲ್ಲಿ ತಳವಾರ-ಪರಿವಾರ ಎಂದು ಗಂಗಾ ಮತಸ್ಥರಿಗೆ ಕರೆಯುತ್ತಾರೆ. ಅದನ್ನೇ ಬಳಸಿಕೊಂಡು ಗಂಗಾಮತಸ್ಥರು ವಾಲ್ಮೀಕಿ ಸಮುದಾಯಕ್ಕೆ ಸಿಗಬೇಕಾಗಿದ್ದ ಮೀಸಲಾತಿ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಅವರ ಮೇಲೆ ಒತ್ತಡ ಹಾಕಿ ಕಲಂ 88ನ್ನು ತೆಗೆದು ಹಾಕಿ ಗಂಗಾ ಮತಸ್ಥರಿಗೆ ಮೀಸಲಾತಿ ಸಿಗುವಂತೆ ಮಾಡಿಕೊಂಡಿದ್ದಾರೆ. ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾಲ್ಮೀಕಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ್ ಕುಮಾರ ನಾಯ್ಕೋಡಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಗೆಜೆಟ್ ಜಾರಿಗೆ ತರಲು ಸಾಧ್ಯವಿಲ್ಲ. ಅದು ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡಿಯೇ ಜಾರಿಗೆ ಬರುತ್ತದೆ. ವಾಲ್ಮೀಕಿ ಜನಾಂಗದವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಸುಳ್ಳು ಹೇಳುವುದು ಸರಿ ಅಲ್ಲ ಎಂದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಬಟಗಿ, ಜಿಲ್ಲಾಧ್ಯಕ್ಷ ಈರಪ್ಪ ಯಡಹಳ್ಳಿ, ಲಕ್ಷ್ಮಣ ಕೋಳೂರಗಿ, ನಾಗಪ್ಪ ನಾಯ್ಕೋಡಿ, ನಿಂಗಪ್ಪ ನಾಟೀಕಾರ, ಅರ್ಜುನ ನಾಯ್ಕೋಡಿ ಇದ್ದರು.