ಕೆ.ಆರ್.ಪೇಟೆ:ತಾಲೂಕಿನ ವರಹನಾಥ ಕಲ್ಲಹಳ್ಳಿಯ ಬಳಿ ಪವಿತ್ರ ಹೇಮಾವತಿ,ಕಾವೇರಿ ನದಿ ಹಿನ್ನೀರಿನಲ್ಲಿ ನೆಲೆ ನಿಂತಿರುವ ಭೂದೇವಿ ಸಮೇತ ಶ್ರೀ ಭೂ ವರಹನಾಥ ಕ್ಷೇತ್ರದಲ್ಲಿ ಭೂಮಿ ಹುಣ್ಣಿಮೆ ಹಾಗೂ ರೇವತಿ ನಕ್ಷತ್ರದ ಅಂಗವಾಗಿ ಭೂವರಹನಾಥ ಸ್ವಾಮಿಗೆ ಅಭಿಷೇಕ, ಪುಷ್ಪಾಭಿಷೇಕ, ಪಟ್ಟಾಭಿಷೇಕ ಹಾಗೂ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆದವು.
ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾಧಿಗಳು ಅಭಿಷೇಕ ಹಾಗೂ ಪುಷ್ಪಾಭಿಷೇಕದ ಅಪರೂಪದ ದೃಶ್ಯ ಕಾವ್ಯವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.
ದೇಶದಲ್ಲಿಯೇ ಅಪರೂಪದ್ದಾಗಿರುವ 17ಅಡಿ ಎತ್ತರದ ಸಾಲಿಗ್ರಾಮ ಶ್ರೀಕೃಷ್ಣ ಶಿಲೆಯಲ್ಲಿ ನಿರ್ಮಿಸಿರುವ ಭೂ ವರಹನಾಥ ಸ್ವಾಮಿಯ ಶಿಲಾ ಮೂರ್ತಿಗೆ ಒಂದು ಸಾವಿರ ಲೀಟರ್ ಹಾಲು, 500ಲೀಟರ್ ಕಬ್ಬಿನ ಹಾಲು, 500ಲೀಟರ್ ಎಳನೀರು, ಜೇನು ತುಪ್ಪ, ಹಸುವಿನ ತುಪ್ಪ, ಮೊಸರು, ಶ್ರೀಗಂಧ, ಅರಿಶಿನ ಪವಿತ್ರ ದ್ರವ್ಯಗಳು ಸೇರಿದಂತೆ ಪವಿತ್ರ ಗಂಗಾ ಜಲದಿಂದ ಅಭಿಷೇಕ ಮಾಡಿ ಮಲ್ಲಿಗೆ, ಜಾಜಿ, ಸಂಪಿಗೆ, ಸೇವಂತಿಗೆ, ಗುಲಾಬಿ, ತುಳಸಿ, ಧವನ, ಪವಿತ್ರ ಪತ್ರೆಗಳು ಸೇರಿದಂತೆ 58ಬಗೆಯ ವಿವಿಧ ಹೂವುಗಳಿಂದ ಪುಷ್ಪಾಭಿಷೇಕ ಮಾಡಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ರಾಜ್ಯದ ಮಾಜಿ ಸಚಿವ ಡಾ.ಕೆ.ಸಿ. ನಾರಾಯಣಗೌಡ ದಂಪತಿಗಳು, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಐಎಎಸ್ ಅಧಿಕಾರಿ ಕ್ಯಾಪ್ಟನ್ ಡಾ.ರಾಜಾರಾಮ್, ಶ್ರೀಮತಿ ಆಶಾ ರಾಜಾರಾಮ್, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ್ , ಮಾಜಿ ಸಿಎಂ ಯಡಿಯೂರಪ್ಪ ಅವರ ಸೋದರಳಿಯ ಸಿಂಧುಘಟ್ಟ ಅರವಿಂದ್, ಶಿವಮೊಗ್ಗ ಜಿಲ್ಲಾ ನ್ಯಾಯಾಧೀಶರಾದ ಕೆ.ಆರ್.ಪೇಟೆ ಪಲ್ಲವಿ ಪ್ರಸನ್ನಕುಮಾರ್, ಮೂಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುದುಗೆರೆ ಪರಮೇಶ್, ಸೇರಿದಂತೆ 20 ಸಾವಿರಕ್ಕೂ ಹೆಚ್ಚಿನ ಭಕ್ತಾಧಿಗಳು ಇಂದಿನ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಮಾಡಿ ಕೃತಾರ್ಥರಾದರು.
ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ದೇವಾಲಯದ ವ್ಯವಸ್ಥಾಪನ ಸಮಿತಿಯ ಸಂಚಾಲಕ ಶ್ರೀನಿವಾಸರಾಘವನ್ ಪೂಜಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
————–ಶ್ರೀನಿವಾಸ್ ಕೆ ಆರ್ ಪೇಟೆ