ಕೊಡಗು ವಿಶ್ವವಿದ್ಯಾಲಯದ ಪ್ರಥಮ ವರ್ಷದ ಸ್ನಾತಕ ಪದವಿ-ದ್ವಿತೀಯ ಸೆಮಿಸ್ಟರ್‌ನ ಜೂನ್- ಜುಲೈ 2024ರ ಫಲಿತಾಂಶ ಪ್ರಕಟ

ಕುಶಾಲನಗರ:ಕೊಡಗು ವಿಶ್ವವಿದ್ಯಾಲಯದ ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಿಎ, ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್ಸಿ ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳ ದ್ವಿತೀಯ ಸೆಮಿಸ್ಟರ್‌ನ ಜೂನ್ -ಜುಲೈ-2024ರ ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಗಿದಿದ್ದು ಫಲಿತಾಂಶವನ್ನು ದಿ:19.08.2024ರ ಸೋಮವಾರದಂದು ಪ್ರಕಟಿಸಲಾಗಿದೆ.

ಕೊಡಗು ವಿಶ್ವವಿದ್ಯಾಲಯದ ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳ ದ್ವಿತೀಯ ಸೆಮಿಸ್ಟರ್ ಪರೀಕ್ಷೆಗಳು ದಿ:03.07.2024 ರಿಂದ ಆರಂಭಗೊಂಡು ಬಿಎ ಪದವಿಯ ಕೊನೆಯ ಪರೀಕ್ಷೆಯು ದಿ:09.08.2024 ರಂದು ಪೂರ್ಣಗೊಂಡಿದೆ.ಘಟಕ ಮಹಾವಿದ್ಯಾಲಯವಾಗಿರುವ ಮಡಿಕೇರಿಯ ಎಫ್‌ಎಂಕೆಎಂಸಿ ಕಾಲೇಜಿನಲ್ಲಿ ವ್ಯವಸ್ಥಿತವಾಗಿ ಮೌಲ್ಯಮಾಪನ ಕೇಂದ್ರವನ್ನು ಸಿದ್ಧಪಡಿಸಿಕೊಂಡು, ಜಿಲ್ಲೆಯ ವಿವಿಧ ಸ್ನಾತಕ ಪದವಿ ಕಾಲೇಜುಗಳ ವಿಷಯವಾರು ಮೌಲ್ಯಮಾಪಕರು ಸಕ್ರಿಯವಾಗಿ ಭಾಗವಹಿಸಿ ಮೌಲ್ಯಮಾಪನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳ ದ್ವಿತೀಯ ಸೆಮಿಸ್ಟರ್ ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (UUCMS) ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಸ್ನಾತಕ ಪದವಿ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶವನ್ನು ಕೊಡಗು ವಿಶ್ವವಿದ್ಯಾಲಯದ ವೆಬ್‌ಸೈಟ್ kuk.karnataka.gov.in ಮುಖಾಂತರ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮೂಲಕ ನೋಡಲು ಲಭ್ಯವಿದೆ.

2023-2024ನೇ ಶೈಕ್ಷಣಿಕ ಸಾಲಿನ ಪ್ರಥಮ ಸೆಮಿಸ್ಟರ್‌ನ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದ ರಾಜ್ಯದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ನಮ್ಮ ಕೊಡಗು ವಿಶ್ವವಿದ್ಯಾಲಯವು ಭಾಜನವಾಗಿದ್ದು ದ್ವಿತೀಯ ಸೆಮಿಸ್ಟರ್ ಫಲಿತಾಂಶವನ್ನು ಕೂಡ ಶೀಘ್ರವಾಗಿ ಪ್ರಕಟಿಸಿದ ಹಿರಿಮೆಯನ್ನು ಪಡೆದುಕೊಂಡಿದೆ.

ಇದೇ ಸಂದರ್ಭದಲ್ಲಿ ಸ್ನಾತಕ ಪದವಿ ಪರೀಕ್ಷಾ ಫಲಿತಾಂಶಗಳನ್ನು ಕುರಿತು ಮಾತನಾಡಿದ ಕೊಡಗು ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ಅಶೋಕ ಸಂ ಆಲೂರ ಅವರು, ಕರ್ನಾಟಕ ಸರ್ಕಾರವು 2022-23ನೇ ಸಾಲಿನಲ್ಲಿ ಕೊಡಗಿನಲ್ಲಿ ನೂತನವಾಗಿ ಕೊಡಗು ವಿಶ್ವವಿದ್ಯಾಲಯವನ್ನು ಸ್ಥಾಪನೆಗೊಂಡು, ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (UGC) ತನ್ನ ಅಧಿನಿಯಮ 1956 ರ ಪ್ರಕರಣ 2 (ಎಫ್) ಅಡಿಯಲ್ಲಿ 2023 ರ ಜುಲೈ 25 ರಂದು ಮಾನ್ಯತೆಯನ್ನು ನೀಡಿ ಪ್ರಕಟಣೆ ಹೊರಡಿಸಿತ್ತು. ಯುಜಿಸಿ ಮಾನ್ಯತೆ ಸಿಕ್ಕಿರುವುದರಿಂದ ಯುಜಿಸಿ ಅಡಿಯಲ್ಲಿ ಬರುವಂತಹ ವಿವಿಧ ಪದವಿಗಳನ್ನು ನೀಡಲು ಕೊಡಗು ವಿಶ್ವವಿದ್ಯಾಲಯವು ಅಧಿಕೃತ ಮಾನ್ಯತೆ ಪಡೆದುಕೊಂಡಿದೆ.ಕೊಡಗು ವಿಶ್ವವಿದ್ಯಾಲಯವು ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಬಿಎ, ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್ಸಿ ಪ್ರವೇಶಾತಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿತ್ತು. ನಮ್ಮ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದಂತಹ ವಿದ್ಯಾರ್ಥಿಗಳನ್ನು ಉದ್ಯೋಗಾಧರಿತ ಕೌಶಲ್ಯಾಭಿವೃದ್ಧಿ ತರಬೇತಿಗಳ ಜೊತೆಗೆ ಭವಿಷ್ಯದಲ್ಲಿ ತಮ್ಮ ಉನ್ನತ ವ್ಯಾಸಂಗ ಮತ್ತು ಉದ್ಯೋಗಗಳಿಗೆ ಹೋಗುವುದಕ್ಕೆ ಪೂರಕವಾದ ವಾತಾವರಣ ನಿರ್ಮಿಸುವ ಸದುದ್ದೇಶವನ್ನು ಹೊಂದಿದ್ದು,‌ ಸ್ನಾತಕ ಪರೀಕ್ಷೆಗಳು ಮುಗಿದ ಕೆಲವೇ ದಿನಗಳ ಅಂತರದಲ್ಲಿ ಮೌಲ್ಯಮಾಪನ ಪ್ರಕ್ರಿಯೆಗೆ ತ್ವರಿತ ಚಾಲನೆ ನೀಡಿ, ಫಲಿತಾಂಶವನ್ನು ಕೂಡ ಅಷ್ಟೇ ಶೀಘ್ರವಾಗಿ ಪ್ರಕಟಿಸುತ್ತಿದ್ದೇವೆ ಎಂದು ತಿಳಿಸುತ್ತಾ, ಈ ನಿಟ್ಟಿನಲ್ಲಿ ಸಹಕಾರ ನೀಡಿದ ಮೌಲ್ಯಮಾಪಕರಾದಿಯಾಗಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಆದ ಪ್ರೊ. ಸೀನಪ್ಪ ಅವರು ಮಾತನಾಡಿ, ಪ್ರಥಮ ವರ್ಷದ ಪ್ರಥಮ ಸೆಮಿಸ್ಟರ್‌ನ ಸ್ನಾತಕ ಪದವಿ ಪರೀಕ್ಷೆಗಳು ಮುಗಿದ 20 ದಿನಗಳೊಳಗೆ ಫಲಿತಾಂಶವನ್ನು ಪ್ರಕಟಿಸಬೇಕು ಎಂಬ ಯುಜಿಸಿಯ ನಿರ್ದೇಶವಿದ್ದು ಅದರಂತೆಯೇ ನಮ್ಮ ಕೊಡಗು ವಿಶ್ವವಿದ್ಯಾಲಯವು ಪರೀಕ್ಷೆಗಳು ನಡೆದ ಕೇವಲ ಒಂದು ದಿನದೊಳಗೆ ಮೊದಲ ಹಂತದ ಫಲಿತಾಂಶವನ್ನು ಪ್ರಕಟಿಸುವ ಮೂಲಕ ಸಫಲತೆ ಸಾಧಿಸಿತು. ಈಗ ಅದೇ ರೀತಿ ದ್ವಿತೀಯ ಸೆಮಿಸ್ಟರ್ ಫಲಿತಾಂಶಗಳನ್ನು ಒಂದೇ ಹಂತದಲ್ಲಿ ಪ್ರಕಟಿಸಿ ದಾಖಲೆ ಬರೆಯಲಾಗಿದೆ. ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ಸ್ನಾತಕ ಪದವಿಯ ಪ್ರಥಮ ಸೆಮಿಸ್ಟರ್‌ನ ಮರುಮೌಲ್ಯಮಾಪನ ಫಲಿತಾಂಶವನ್ನು ಕೂಡ ಪ್ರಕಟಿಸಲಾಗಿದೆ. ಅಷ್ಟೇ ಅಲ್ಲದೆ ಕೊಡಗು ವಿಶ್ವವಿದ್ಯಾಲಯದ ಪ್ರಥಮ ಸ್ನಾತಕೋತ್ತರ ಪದವಿಯ ವಿವಿಧ ಕೋರ್ಸ್‌ಗಳ ಪ್ರಥಮ ಸೆಮಿಸ್ಟರ್‌ ಫಲಿತಾಂಶವನ್ನು ಕೂಡ ಈಗಾಗಲೇ ಪ್ರಕಟಿಸಲಾಗಿದೆ. ನಮ್ಮ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಹಾಗೂ ಸರ್ವತೋಮುಖ ಪ್ರಗತಿಗಾಗಿ ಇದು ಪೂರಕವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೊಡಗು ವಿಶ್ವವಿದ್ಯಾಲಯದ ಸ್ನಾತಕ ಪದವಿ ಪರೀಕ್ಷೆಗಳ ಸಂಯೋಜಕರಾದ ಪ್ರೊ. ರವಿಶಂಕರ್, ಪರೀಕ್ಷಾ ಉಪಮೇಲ್ವಿಚಾರಕರಾದ ಡಾ. ಶೈಲಶ್ರೀ, ಕೊಡಗು ವಿಶ್ವವಿದ್ಯಾಲಯದ UUCMS ಸಂಯೋಜಕರಾದ ಗಗನ್ ಹೆಚ್‌. ಎಸ್. ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?