ಮೂಡಿಗೆರೆ-ರಾಮಾಯಣ ಬರೆದ ಆದಿಕವಿ ಮಹರ್ಷಿ ವಾಲ್ಮಿಕಿ ಅವರ ಹೆಸರಿನಲ್ಲಿ ಸರ್ಕಾರ ನಿಗಮ ಸ್ಥಾಪಿಸಿ, ಆ ಸಮುದಾಯದ ಅಭಿವೃದ್ಧಿಗೆ ಮುಂದಾಗಲು ಯೋಜನೆ ಪ್ರಾರಂಭಿಸಿದ್ದರೂ ಇಂದು ವಾಲ್ಮಿಕಿ ಹಗರಣದಿಂದ ಮಹಾನ್ ತಪಸ್ವಿ ವಾಲ್ಮಿಕಿ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ಸರ್ಕಾರ ನಡೆದುಕೊಂಡಿದೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಗುರುವಾರ ಪಟ್ಟಣದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಹರ್ಷಿ ವಾಲ್ಮಿಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲಾ ಮಹಾಪುರಷರ ಹಿಂದಿನ ಬದುಕು ಕಹಿಯಾಗಿದ್ದರೂ ನಂತರದ ದಿನಗಳಲ್ಲಿ ಸಮಾಜಕ್ಕೆ ಪೂರಕವಾಗಿ ಬದುಕಿ ಇಂದಿಗೂ ಜನ ಮಾನಸದಲ್ಲಿ ಉಳಿದಿದ್ದಾರೆ. ಅಂತಹ ಮಹಾನ್ ಪುರುಷರ ಬಗ್ಗೆ ಹಿರಿಯರು ಯುವ ಜನತೆಗೆ ಜಾಗೃತಿ ಮೂಡಿಸಬೇಕಾಗಿದೆ. ಯಾವುದೇ ಮಹಾ
ಪುರುಷರನ್ನು ಒಂದೇ ಸಮುದಾಯಕ್ಕೆ ಸೀಮಿತ ಮಾಡಬಾರದು. ಆ ಮಹಾ ಪುರುಷರು ಸಮಾಜದ ಎಲ್ಲಾ ಸಮುದಾಯದ ಏಳಿಗೆಗಾಗಿ ಶ್ರಮಿಸಿರುವುದನ್ನು ನಾವು ಮರೆಯಬಾರದು ಎಂದು ಹೇಳಿದರು.
ಪ.ಪಂ. ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಒಂದಲ್ಲಾ ಒಂದು ವಿಷಯದಲ್ಲಿ ತಪ್ಪು ಹೆಜ್ಜೆ ಇಡುವುದು ಸಹಜ. ಅದನ್ನು ಅರ್ಥೈಸಿಕೊಂಡು ತಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಂಡಾಗ ಜೀವನ ಸಾರ್ಥಕಗುತ್ತದೆ. ಅದನ್ನೇ ವಾಲ್ಮಿಕಿ ಅವರು ರಾಮಾಯಣದಲ್ಲಿ ಉಲ್ಲೇಖಿಸಿದ್ದಾರೆ. ಮಹಾ ಪುರುಷರ ಎಲ್ಲಾ ಜಯಂತಿಗಳು ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗದೇ ಸ್ವಲ್ಪಮಟ್ಟಿಗಾದರು ಎಲ್ಲರೂ ಅವರ ಆದರ್ಶವನ್ನು ಪಾಲಿಸುವುದೇ ನಾವು ಆ ಮಹಾನ್ ಪುರುಷರಿಗೆ ಕೊಡುವ ಗೌರವ ಎಂದು ಹೇಳಿದರು.
ತಹಶೀಲ್ದಾರ್ ರಾಜಶೇಖರ್ ಮೂರ್ತಿ, ಬಿಇಒ ಮೀನಾಕ್ಷಿ, ಸಮಾಜ ಕಲ್ಯಾಣಾಧಿಕಾರಿ ಸೋಮಶೇಖರ್, ಪಿಎಸ್ಐ ಶ್ರೀನಾಥ್ರೆಡ್ಡಿ, ಉಪನ್ಯಾಸಕ ಡಾ.ರವಿಕುಮಾರ್, ಲ್ಯಾಂಪ್ಸ್ಅಧ್ಯಕ್ಷ ವಿಜೇಂದ್ರ, ಹೂವಪ್ಪ, ಹರೀಶ ಸಬ್ಬೇನಹಳ್ಳಿ, ಸುಧೀರ್ ಚಕ್ರಮಣಿ, ಪಿ.ಕೆ.ಮಂಜುನಾಥ್, ಮಂಜುನಾಥ್ ಬೆಟ್ಟಗೆರೆ, ಬಿ.ಕೆ.ಲೋಕೇಶ್ ಮತ್ತಿತರರಿದ್ದರು.
————————ವಿಜಯಕುಮಾರ್,ಟಿ.ಮೂಡಿಗೆರೆ