ಮುಧೋಳ-ವಕೀಲರ ಸಂಘದ ನೇತೃತ್ವದಲ್ಲಿ ಮುಧೋಳದ ನ್ಯಾಯವಾದಿ ಪ್ರಕಾಶ ವಸ್ತ್ರದ ಅವರ ಬರೆದ ‘ಅಡ್ವೋಕೇಟ್ ಡೈರಿ’ ಪುಸ್ತಕವನ್ನು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಸ್ತ್ರದ ಅವರನ್ನು ಸನ್ಮಾನಿಸಿ ಮಾತನಾಡಿದ ಸಂಘದ ಅಧ್ಯಕ್ಷ ವಿ.ಡಿ.ಕತ್ತಿ ನ್ಯಾಯವಾದಿ ವಸ್ತ್ರದ ಅವರ 40 ವರ್ಷಗಳ ನ್ಯಾಯಾಲಯದ ಪಯಣದ ಅನುಭವವನ್ನು ಹಂಚಿಕೊಂಡು ಈ ಪುಸ್ತಕ ಬರೆದಿದ್ದು ಇದಕ್ಕಾಗಿ ನಾವೆಲ್ಲ ಹೆಮ್ಮೆ ಪಡುತ್ತೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯಾಯವಾದಿ ಪ್ರಕಾಶ ವಸ್ತ್ರದರವರ “ಅಡ್ವೊಕೇಟ್ ಡೈರಿ” ಕರ್ನಾಟಕದ ಇತಿಹಾಸದಲ್ಲಿ ನ್ಯಾಯಾಲಯದ ಮೊಕದ್ದಮೆಗಳಲ್ಲಿ ನಡೆಯುವ ನೋವು ಮತ್ತು ನಲಿವುಗಳನ್ನು ಸರಳವಾಗಿ, ಅರ್ಥವಾಗುವಂತೆ ಸಾರ್ವಜನಿಕರಿಗೆ ತಿಳಿಸುವ ಮೊದಲ ಪುಸ್ತಕವಾಗಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ.ಎಂ.ವಸ್ತ್ರದ ಅವರು, “ಸಾಹಿತ್ಯ ಮತ್ತು ಸಂಸ್ಕೃತಿಯೊಂದಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡರೆ ಎಲ್ಲವನ್ನೂ ಸಾಧಿಸಲು ಸಾಧ್ಯವಾಗುತ್ತದೆ. ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ,ನಿಮ್ಮ ಉತ್ಸಾಹವನ್ನು ಬಳೆಸಿಕೊಳ್ಳಿ” ಎಂದು ವಕೀಲ ಮಿತ್ರರಿಗೆ ಹೇಳಿದರು.
ತಮ್ಮ ಕಾರ್ಯವನ್ನು ಗುರುತಿಸಿದ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಹಿರಿಯ ವಕೀಲರಾದ ಎ.ಎಸ್.ಯಾದವಾಡ, ಎಸ್.ಎಸ್.ಚಿನಿವಾಲ, ಬಿ.ಆರ್.ದೊಡ್ಡಟ್ಟಿ, ಬಿ.ಸಿ.ಹಿರೇಮಠ, ಆರ್.ಎಂ.ಪಾಟೀಲ, ಹಂಚನಾಳ ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.
ಎಂ.ಎಸ್.ಶಿರೂರ ಸ್ವಾಗತಿಸಿದರು.ಭಾರತಿ ಹೊಳೆಪ್ಪನವರ ಅವರ ನೇತೃತ್ವದಲ್ಲಿ ಕಿರಿಯ ವಕೀಲರ ತಂಡ ವಸ್ತ್ರದ ಅವರನ್ನು ಸನ್ಮಾನಿಸಿತು.