ಮಂಡ್ಯ-ಭಾರತ ಕೃಷಿ ಪ್ರಧಾನ ಕಸುಬುವುಳ್ಳ ದೇಶ.ಹಾಗಾಗಿ ರೈತರು ಏಳಿಗೆ ಹೊಂದಿದರೆ ದೇಶವೇ ಅಭಿವೃದ್ಧಿ ಹೊಂದಿದಂತೆ ಎಂದು ಕಾಲೇಜಿನ ನಿವೃತ್ತ ಅಧ್ಯಾಪಕ ಸಿ.ಸಿದ್ದರಾಜು ಆಲಕೆರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಬೆಳಿಗ್ಗೆ ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ಕೆಂಪೇಗೌಡರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ‘ರೈತರ ಶಾಲೆ’ಯ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ ನೆರವರಿಸಿ ಅವರು ಮಾತನಾಡಿದರು.
ರೈತರು ದೇಶದ ಜನತೆಯ ಹಸಿವನ್ನು ನೀಗಿಸುವ ಜೀವದಾತರು. ಈಗ ಭಾರತ ಆಹಾರ ಸ್ವಾವಲಂಬನೆ ಸಾಧಿಸಿ ಮುನ್ನೆಡೆ ಹೊಂದುವಲ್ಲಿ ರೈತರ ಪಾತ್ರ ಪ್ರಮುಖವಾಗಿದೆ.ದೇಶದ ರೈತರು ಬೇಸಿಗೆ,ಮಳೆಗಾಲ,ಚಳಿಗಾಲ ಎನ್ನದೆ ಹೊಲದಲ್ಲಿ ಉಳುಮೆ ಮಾಡಿ ಬೆಳೆ ತೆಗೆಯಲು ಬೆವರು ಸುರಿಸಿ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಎಲ್ಲ ರೀತಿಯಲ್ಲೂ ಅವರಿಗೆ ಸಹಾಯವಾಗುವಂತ ಯೋಜನೆಗಳನ್ನು ರೂಪಿಸ ಬೇಕು ಎಂದು ಹೇಳಿದರು.
ಭಾರತ ಹಳ್ಳಿಗಳ ಬೀಡು, ಇಲ್ಲಿ ಕೃಷಿಗೆ ಸಂಬಂಧಿಸಿದ ಕಾಲೇಜುಗಳು ಇವೆ. ಆದರೆ ಪ್ರಾಥಮಿಕ ಶಾಲಾ ಹಂತದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕೃಷಿ ವಿಷಯ ಸಂಬಂಧ ಪಟ್ಟ ಪಠ್ಯ ವಿಷಯದ ಅಗತ್ಯವಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ದೇಶದಲ್ಲೆ ಮೊದಲ 'ರೈತ ಶಾಲೆ' ತೆರೆಯಲು ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವ 'ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ'ದ ಯೋಜನೆ ದೇಶಕ್ಕೆ ಮಾದರಿ ಎಂದು ಸ್ಲಾಘನೆ ಮಾಡಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ರೈತ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಹಾಯಕವಾಗುವಂತೆ ಮದ್ದೂರಿನ ಸಿಂಧು ದೀಪಕ್ ಅವರು ಹತ್ತು ಸಾವಿರ ರೂಪಾಯಿ ಚೆಕ್ ಅನ್ನು ಸಂಘದ ಅಧ್ಯಕ್ಷ ಚಂದ್ರಶೇಖರ್(ಕಾಫಿ ಪುಡಿ ಚಂದ್ರ) ಅವರಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಕಾರ್ಯದರ್ಶಿ ಹಾಗೂ ರೈತರ ಶಾಲೆಯ ಸಂಸ್ಥಾಪಕ ಸತ್ಯಮೂರ್ತಿ ಗಂಜಾಂ, ಆಲಕೆರೆ ಗ್ರಾಮದ ಪಂಚಾಯತಿ ಅಧ್ಯಕ್ಷ ಶಶಿಧರ್, ಮನ್ ಮುಲ್ ಉಪಾಧ್ಯಕ್ಷ ರಘುನಂದನ್, ಆಲಕೆರೆ ಘಟಕದ ಪದಾಧಿಕಾರಿಗಲಾದ ನವೀನ್ ಕುಮಾರ್, ಜಗದೀಶ್, ರಾಮಕೃಷ್ಣ, ಮಹೇಶ್, ರವಿಕುಮಾರ್, ಧರ್ಮರಾಜ್, ನಂದೀಶ್ ಹಾಗೂ ಜೈ ಕರ್ನಾಟಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.