ಮಂಡ್ಯ-ಜಿಲ್ಲೆಯಲ್ಲಿ ಬಾಬು ಜಗಜೀವನ ರಾಮ್ ಭವನವನ್ನು ನಿರ್ಮಾಣ ಮಾಡುವಂತೆ ಹಲವಾರು ದಿನಗಳಿಂದ ಬೇಡಿಕೆ ಇದ್ದು,3 ಕೋಟಿ, 80 ಲಕ್ಷ ರೂ ವೆಚ್ಚದಲ್ಲಿ ಬಾಬು ಜಗಜೀವನ ರಾಮ್ ಭವನವನ್ನು ನಿರ್ಮಿಸಲು ಮಂಡ್ಯ ವಿವೇಕಾನಂದ ನಗರದಲ್ಲಿ ಇಂದು ಶಂಕುಸ್ಥಾಪನೆಯನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ನೆರವೇರಿಸಿದರು.
ನಂತರ ಮಾತನಾಡಿದ ಸಚಿವರು,ಮಂಡ್ಯ ಶಾಸಕ ರವಿಕುಮಾರ್ ಜಿಲ್ಲೆಯ ಅಭಿವೃದ್ಧಿಗಾಗಿ ಹೆಚ್ಚಿನ ಶ್ರಮ ವಹಿಸುತ್ತಿದ್ದು, ಬಾಬು ಜಗಜೀವನ ರಾಮ್ ಭವನವನ್ನು ನಿರ್ಮಿಸುವಂತೆ ತಿಳಿಸಿದರು.ಇಂದು ಭವನದ ಶಂಕುಸ್ಥಾಪನೆ ಕಾರ್ಯಕ್ರಮವು ಜರುಗುತ್ತಿದ್ದೂ, ಬಹುಶಃ ಮುಂದಿನ 1 ವರ್ಷದಲ್ಲಿಯೇ ಭವನವನ್ನು ಪೂರ್ಣಗೊಳಿಸಿ ಉದ್ಘಾಟಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಬಾಡಿಗೆ ಕಟ್ಟಡದಲ್ಲಿರುವ ಜಿಲ್ಲೆಯಲ್ಲಿರುವ ಎಲ್ಲಾ ವಿದ್ಯಾರ್ಥಿ ನಿಲಯಗಳಿಗೆ ಸ್ಥಳವನ್ನು ನಿಗಧಿಪಡಿಸಿ ಹಂತ ಹಂತವಾಗಿ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು ಎಂದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್ ಅವರು ಮಾತನಾಡಿ, ಮಂಡ್ಯ ಜಿಲ್ಲೆ ನಿರ್ಮಾಣವಾಗಿ ಸುಮಾರು 70 ವರ್ಷಗಳು ಕಳೆದರು ಇಂದಿಗೂ ಜಿಲ್ಲೆಯಲ್ಲಿ ಡಾ ಬಾಬು ಜಗಜೀವನ ರಾಮ್ ಭವನವಿಲ್ಲ ಎಂದು ಮುಖಂಡರುಗಳ ಚಿಂತೆಯಾಗಿತ್ತು. ನಾನು ಶಾಸಕನಾದ ನಂತರ ಬಾಬು ಜಗಜೀವನ ರಾಮ್ ಭವನವಿಲ್ಲದಿರುವುದನ್ನು ಮನಗೊಂಡು ಭವನದ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆಗೊಳಿಸುವಂತೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೇಳಿದ ನಂತರ ಅವರು ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ಹಾಕಿ 3 ಕೋಟಿ 80 ಲಕ್ಷ ರೂ ವೆಚ್ಚದಲ್ಲಿ ಉತ್ತಮ ಹಾಗೂ ಗುಣಮಟ್ಟದ ಡಾ ಬಾಬು ಜಗಜೀವನ್ ರಾಮ್ ಭವನವನ್ನು ನಿರ್ಮಿಸಲು ಇಂದು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಮೈಸೂರು ಸಕ್ಕರೆ ಕಂಪನಿ ನಿಯಮಿತದ ಅಧ್ಯಕ್ಷ ಸಿಡಿ ಗಂಗಾಧರ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಮ್,ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್,ನಗರಸದಸ್ಯರಾದ ಶಿವಪ್ರಕಾಶ್,ಶ್ರೀಧರ್,ಮುಖಂಡರಾದ ಚಂದ್ರಶೇಖರ್,ಪಾಪಯ್ಯ,ಸೇರಿದಂತೆ ಮುಖಂಡರುಗಳು ಉಪಸ್ಥಿತರಿದ್ದರು.
——————–-ರವಿ ಬಿ ಹೆಚ್