ಮೂಡಿಗೆರೆ:ಪ.ಪಂ.ನಲ್ಲಿ ವಿಶೆಷ ಸಾಮಾನ್ಯ ಸಭೆ ನಡೆಸದೇ ನಡಾವಳಿಯನ್ನು ತಯಾರಿಸದೇ ಪ.ಪಂ.ಆಸ್ತಿಯನ್ನು ಇಬ್ಬರು ಹಿರಿಯ ಸದಸ್ಯರು ಅನಧಿಕೃತವಾಗಿ ಖಾತೆ ಮಾಡಿಕೊಟ್ಟಿದ್ದಾರೆಂದು ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಆರೋಪಿಸಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕಸಬಾ ಹೋಬಳಿ ಸರ್ವೆ ನಂ 54/2ರಲ್ಲಿ 1.10 ಎಕರೆ ಮುಸ್ತಾಕ್ ಅಹಮ್ಮದ್ ಎಂಬುವರಿಗೆ ಹಾಗೂ ಸರ್ವೆ ನಂ 135/1ರಲ್ಲಿ 1.12 ಎಕರೆ ಪ.ಪಂ. ಆಸ್ತಿಯನ್ನು ಜಾಹಿದ್ ಹುಸೇನ್ ಅವರಿಗೆ ನಿಯಮ ಬಾಹಿರವಾಗಿ ಖಾತೆ ಮಾಡಿ ಕೊಡ ಲಾಗಿದೆ. ಈ ಖಾತೆ 2024ರ ಜೂನ್20ರಂದು ಮಾಡಿದ್ದು,ಆಗ ಪ.ಪಂ. ಅಂದಿನ ಆಡಳಿತಾ ಧಿಕಾರಿ ತಹಸೀಲ್ದಾರ್ ಅವರ ಆಡಳಿತದಲ್ಲಿತ್ತು.ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿರಲಿಲ್ಲ. ಹೀಗಿರುವಾಗ ವಿಶೇಷ ಸಾಮಾನ್ಯ ಸಭೆ ನಡೆಸದೇ ತಹಸೀಲ್ದಾರ್ ಸಹಿ ಇಲ್ಲದೇ, ಇಲ್ಲಿರುವ 11 ಮಂದಿ ಸದಸ್ಯರ ಪೈಕಿ 9 ಮಂದಿ ಸದಸ್ಯರ ಗಮನಕ್ಕೆ ತರದೇ ನಕಲಿ ನಡಾವಳಿ ಸೃಷ್ಟಿಸಿ ಖಾತೆ ಮಾಡಿ ಅಕ್ರಮ ಎಸಗಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ದ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪ.ಪಂ. ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುದು ಪಕ್ಷದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ.ಪಂ. ಸದಸ್ಯ ಮನೋಜ್ ಕುಮಾರ್ ಮಾತನಾಡಿ,ಈ ಎರಡು ಅಕ್ರಮದ ಜೊತೆಗೆ ಸರ್ವೆ.ನಂ 135/2ರಲ್ಲಿ ಖರಾಬ್ ಸೇರಿದಂತೆ 2.13 ಎಕರೆ ಪ.ಪಂ.ಆಸ್ತಿಯನ್ನು ರುದ್ರೇಶ್ ಎಂಬುವರಿಗೆ ಖಾತೆ ಮಾಡಲು ಹಾಗೂ ಸರ್ವೆ ನಂ.43/13ರಲ್ಲಿ 0.20 ಗುಂಟೆ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಗೊಂಡಿದ್ದು,ಪ.ಪo. ಕಚೇರಿಗೆ ಖಾತೆ ಮಾಡಲು ಬಂದಿರುವ ಅರ್ಜಿಗಳನ್ನು ಚರ್ಚಿಸಿ ತೀರ್ಮಾನಿಸಿರುವ ವಿಚಾರವನ್ನು ನಡಾವಳಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಜಾಗವನ್ನು ಕೂಡ ಅಕ್ರಮವಾಗಿ ಖಾತೆ ಮಾಡಲು ಸಂಚು ರೂಪಿಸಿರುವ ಬಗ್ಗೆ ಸಂದೇಹವಿದೆ.ಅಲ್ಲದೆ 6ನೇ ವಾರ್ಡಿಗೆ ಸೇರಿದ ನಿವೇಶನವೊಂದನ್ನು ಸುನಿತಾ ಎಂಬುವರಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ.
ಇಬ್ಬರು ಹಿರಿಯ ಸದಸ್ಯರ ಒತ್ತಡದಿಂದ ಮುಖ್ಯಾಧಿಕಾರಿಗಳು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡು ಪ.ಪ0.ಗೆ ಸೇರಬೇಕಾದ ಆಸ್ತಿಯ ಕೋಟ್ಯಾಂತರ ರೂ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿದೆ. ಅಲ್ಲದೆ ಪ್ರವಾಸಿ ಮಂದಿರದ ಮುಂಭಾಗದಲ್ಲಿ ನಿರ್ಮಿಸಿರುವ ಒಂದೇ ಮಳಿಗೆಯಲ್ಲಿ ಹೂವಿನ ಅಂಗಡಿ ತೆರೆಯಲಾಗಿದೆ. ಪ್ರತಿ ಮಳಿಗೆಯ ಬಿಡ್ಡುದಾರರಿಂದ ತಲಾ 50 ಸಾವಿರ ರೂ ಮುಂಗಡ ಪಡೆಯಲಾಗಿದೆ.ಆ ಪೈಕಿ ಎರಡು ಮಳಿಗೆಗಳ ಹಣವನ್ನು ಹಿರಿಯ ಸದಸ್ಯರಿಬ್ಬರು ಪಡೆದು ಪ.ಪಂ.ಖಾತೆಗೆ ಜಮಾ ಮಾಡದೆ ಲಪಟಾಯಿಸಿದ್ದಾರೆ. ಇಂತಹ ಅನೇಕ ವಿಚಾರದಲ್ಲಿ ಅಕ್ರಮಗಳು ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿ ಕಾರಿಗಳಿಗೆ ದೂರು ನೀಡಲಾಗಿದ್ದು ಲೋಕಾಯುಕ್ತರಿಗೂ ದೂರು ನೀಡಲು ತೀರ್ಮಾನಿಸಲಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಅಕ್ರಮದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಡಿ.ಸಿ.ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಕಾರ್ಯದರ್ಶಿ ಪ್ರಶಾಂತ್, ಜಿಲ್ಲಾ ವಕ್ತಾರ ನಯನ ತಳವಾರ, ತಾಲೂಕು ವಕ್ತಾರ ವಿನಯ್,ಹಳೆಕೋಟೆ ಉಪಸ್ಥಿತರಿದ್ದರು.
…………ವರದಿ: ವಿಜಯಕುಮಾರ್, ಮೂಡಿಗೆರೆ