ಕೆ.ಆರ್.ಪೇಟೆ-ಗಬ್ಬೆದ್ದು ನಾರುತ್ತಿರುವ ಕಿಕ್ಕೇರಿಯ ಎಳನೀರು ಮಾರುಕಟ್ಟೆ-ಮೂಲಭೂತ ಸೌಲಭ್ಯಗಳಿಲ್ಲದೇ ಪರದಾಡುತ್ತಿರುವ ವರ್ತಕರು ಹಾಗೂ ರೈತರು-ಎಪಿಎಂಸಿ ನಿರ್ಲಕ್ಷ್ಯಕ್ಕೆ ಹಿಡಿಶಾಪ

ಕೆ.ಆರ್.ಪೇಟೆ-ತಾಲೂಕಿನ ಕಿಕ್ಕೇರಿ ಹೋಬಳಿ ಕೇಂದ್ರದಲ್ಲಿರುವ ಎಳನೀರು ಮಾರುಕಟ್ಟೆಯು ಅವ್ಯವಸ್ಥೆಯ ಆಗರವಾಗಿದ್ದು ಕೊಳಚೆ ನೀರು ಹಾಗೂ ಅನೈರ್ಮಲ್ಯದಿಂದ ಗಬ್ಬೆದ್ದು ನಾರುತ್ತಿದೆ.

ಎಳನೀರು ಯಾರ್ಡ್ನಲ್ಲಿ ನಡೆಯುತ್ತಿರುವ ವ್ಯವಹಾರದಿಂದ ಸಂಸ್ಥೆಗೆ ದಿನವಹಿ ಸಾವಿರಾರು ರೂಪಾಯಿ ಆದಾಯ ಬರುತ್ತಿದ್ದರೂ ಕೃಷಿ ಮಾರುಕಟ್ಟೆಯ ಅಧಿಕಾರಿಗಳು ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ವರ್ತಕರು ಹಾಗೂ ರೈತರಿಗೆ ದೊರಕಿಸಿಕೊಡಲು ವಿಫಲರಾಗಿರುವ ಕಾರಣ ವರ್ತಕರು ಹಿಡಿ ಶಾಫ ಹಾಕುತ್ತಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನಲ್ಲಿ ದೊರೆಯುವ ಎಳನೀರು ಗುಣಮಟ್ಟ ಹಾಗೂ ಶ್ರೇಷ್ಠತೆಯಿಂದಾಗಿ ನಮ್ಮ ರಾಜ್ಯ ಮಾತ್ರವಲ್ಲದೇ ದೇಶಾಧ್ಯಂತ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಹೊಂದಿದೆ. ದೂರದ ಮುಂಬೈ, ಚೆನ್ನೈ, ಗುಜರಾತ್, ದೆಹಲಿ, ಅಹಮದಾಬಾದ್, ರಾಜಾಸ್ಥಾನ, ಮಂಗಳೂರು, ಬೆಂಗಳೂರು, ಬೀದರ್, ವಿಜಯಪುರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಮ್ಮ ತಾಲೂಕಿನ ಎಳನೀರಿಗೆ ಭಾರೀ ಬೇಡಿಕೆಯಿದೆ. ದಿನವಹಿ 5ಲಕ್ಷಕ್ಕೂ ಹೆಚ್ಚಿನ ಎಳನೀರು ಕೃಷ್ಣರಾಜಪೇಟೆ ತಾಲೂಕಿನಲ್ಲಿ ಮಾರಾಟವಾಗುತ್ತಿದ್ದರೂ ಕಿಕ್ಕೇರಿ ಮಾರುಕಟ್ಟೆಯಿಂದಲೇ 2ಲಕ್ಷಕ್ಕೂ ಹೆಚ್ಚಿನ ಎಳನೀರು ಕಿಕ್ಕೇರಿ ಮಾರುಕಟ್ಟೆಯಿಂದ ಸರಬರಾಜಾಗುತ್ತಿದೆ.

ಶುಚಿತ್ವ, ಸ್ವಚ್ಛತೆ ಎನ್ನುವುದು ಕಿಕ್ಕೇರಿ ಎಳನೀರು ಮಾರುಕಟ್ಟೆಯಲ್ಲಿ ಕನಸಿನ ಮಾತಾಗಿರು ವುದರಿಂದಾಗಿ ಗಬ್ಬೆದ್ದು ನಾರುತ್ತಿರುವ ಎಳನೀರು ಯಾರ್ಡ್ ರೋಗ-ರುಜಿನಗಳನ್ನು ಹರಡುವ ತಾಣವಾಗಿ ಬದಲಾಗಿದೆ. ಮಾರುಕಟ್ಟೆಯೊಳಗೆ ನಡೆದಿರುವ ಕಳಪೆ ಕಾಮಗಾರಿಯಿಂದಾಗಿ ರಸ್ತೆ, ಚರಂಡಿ, ಕಲ್ವರ್ಟ್ಗಳು ಕಿತ್ತು ಹಾಳಾಗಿದ್ದರೆ, ಶೌಚಾಲಯವು ನಿರ್ವಹಣೆಯಿಲ್ಲದೇ ಅಶುಚಿತ್ವದಿಂದ ಕೂಡಿದೆ.

ಶುದ್ಧ ಕುಡಿಯುವ ನೀರು, ಚಾಲಕರು, ವರ್ತಕರು ಹಾಗೂ ರೈತರಿಗೆ ವಿಶ್ರಾಂತಿ ಗೃಹ ಎನ್ನುವುದು ಕನಸಿನ ಗಂಟಾಗಿದೆ. ಕಗ್ಗತ್ತಲಿನಲ್ಲಿಯೇ ಮುಳುಗಿದ್ದ ಎಳನೀರು ಮಾರುಕಟ್ಟೆಯ ಯಾರ್ಡ್ಗೆ ತಾತ್ಕಾಲಿಕವಾಗಿ ಬೀದಿ ದೀಪಗಳನ್ನು ಅಳವಡಿಸಿ ಬೆಳಕಿನ ಸೌಲಭ್ಯವನ್ನು ಒದಗಿಸಿಕೊಟ್ಟಿರು ವುದನ್ನು ಹೊರತುಪಡಿಸಿದರೆ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಆದಾಯವನ್ನು ತಂದುಕೊಡುತ್ತಿರುವ ಮಾರುಕಟ್ಟೆಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಸಂಪೂರ್ಣ ವಿಫಲರಾಗಿದ್ದು ವರ್ತಕರು ಹಾಗೂ ರೈತರ ಗೋಳು ಅರಣ್ಯರೋಧನವಾಗಿದೆ.

ಕಿಕ್ಕೇರಿ ಮಾರುಕಟ್ಟೆಯಲ್ಲಿರುವ ಇಲೆಕ್ಟ್ರಾನಿಕ್ ವೇಬ್ರಿಡ್ಜ್ ಕೆಟ್ಟು ನಿಂತಿರುವುದರಿಂದ ವರ್ತಕರು ತಾವು ಸರಬರಾಜು ಮಾಡುತ್ತಿರುವ ಎಳನೀರು ಲೋಡ್ ತುಂಬಿರುವ ಬೃಹತ್ ಲಾರಿಗಳನ್ನು ತೂಕ ಮಾಡಿಸಲು ಸಮಸ್ಯೆಯು ಎದುರಾಗಿದೆ.

——————ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?