ಕೆ.ಆರ್.ಪೇಟೆ-ಗಬ್ಬೆದ್ದು ನಾರುತ್ತಿರುವ ಕಿಕ್ಕೇರಿಯ ಎಳನೀರು ಮಾರುಕಟ್ಟೆ-ಮೂಲಭೂತ ಸೌಲಭ್ಯಗಳಿಲ್ಲದೇ ಪರದಾಡುತ್ತಿರುವ ವರ್ತಕರು ಹಾಗೂ ರೈತರು-ಎಪಿಎಂಸಿ ನಿರ್ಲಕ್ಷ್ಯಕ್ಕೆ ಹಿಡಿಶಾಪ

ಕೆ.ಆರ್.ಪೇಟೆ-ತಾಲೂಕಿನ ಕಿಕ್ಕೇರಿ ಹೋಬಳಿ ಕೇಂದ್ರದಲ್ಲಿರುವ ಎಳನೀರು ಮಾರುಕಟ್ಟೆಯು ಅವ್ಯವಸ್ಥೆಯ ಆಗರವಾಗಿದ್ದು ಕೊಳಚೆ ನೀರು ಹಾಗೂ ಅನೈರ್ಮಲ್ಯದಿಂದ ಗಬ್ಬೆದ್ದು ನಾರುತ್ತಿದೆ.

ಎಳನೀರು ಯಾರ್ಡ್ನಲ್ಲಿ ನಡೆಯುತ್ತಿರುವ ವ್ಯವಹಾರದಿಂದ ಸಂಸ್ಥೆಗೆ ದಿನವಹಿ ಸಾವಿರಾರು ರೂಪಾಯಿ ಆದಾಯ ಬರುತ್ತಿದ್ದರೂ ಕೃಷಿ ಮಾರುಕಟ್ಟೆಯ ಅಧಿಕಾರಿಗಳು ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ವರ್ತಕರು ಹಾಗೂ ರೈತರಿಗೆ ದೊರಕಿಸಿಕೊಡಲು ವಿಫಲರಾಗಿರುವ ಕಾರಣ ವರ್ತಕರು ಹಿಡಿ ಶಾಫ ಹಾಕುತ್ತಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನಲ್ಲಿ ದೊರೆಯುವ ಎಳನೀರು ಗುಣಮಟ್ಟ ಹಾಗೂ ಶ್ರೇಷ್ಠತೆಯಿಂದಾಗಿ ನಮ್ಮ ರಾಜ್ಯ ಮಾತ್ರವಲ್ಲದೇ ದೇಶಾಧ್ಯಂತ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಹೊಂದಿದೆ. ದೂರದ ಮುಂಬೈ, ಚೆನ್ನೈ, ಗುಜರಾತ್, ದೆಹಲಿ, ಅಹಮದಾಬಾದ್, ರಾಜಾಸ್ಥಾನ, ಮಂಗಳೂರು, ಬೆಂಗಳೂರು, ಬೀದರ್, ವಿಜಯಪುರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಮ್ಮ ತಾಲೂಕಿನ ಎಳನೀರಿಗೆ ಭಾರೀ ಬೇಡಿಕೆಯಿದೆ. ದಿನವಹಿ 5ಲಕ್ಷಕ್ಕೂ ಹೆಚ್ಚಿನ ಎಳನೀರು ಕೃಷ್ಣರಾಜಪೇಟೆ ತಾಲೂಕಿನಲ್ಲಿ ಮಾರಾಟವಾಗುತ್ತಿದ್ದರೂ ಕಿಕ್ಕೇರಿ ಮಾರುಕಟ್ಟೆಯಿಂದಲೇ 2ಲಕ್ಷಕ್ಕೂ ಹೆಚ್ಚಿನ ಎಳನೀರು ಕಿಕ್ಕೇರಿ ಮಾರುಕಟ್ಟೆಯಿಂದ ಸರಬರಾಜಾಗುತ್ತಿದೆ.

ಶುಚಿತ್ವ, ಸ್ವಚ್ಛತೆ ಎನ್ನುವುದು ಕಿಕ್ಕೇರಿ ಎಳನೀರು ಮಾರುಕಟ್ಟೆಯಲ್ಲಿ ಕನಸಿನ ಮಾತಾಗಿರು ವುದರಿಂದಾಗಿ ಗಬ್ಬೆದ್ದು ನಾರುತ್ತಿರುವ ಎಳನೀರು ಯಾರ್ಡ್ ರೋಗ-ರುಜಿನಗಳನ್ನು ಹರಡುವ ತಾಣವಾಗಿ ಬದಲಾಗಿದೆ. ಮಾರುಕಟ್ಟೆಯೊಳಗೆ ನಡೆದಿರುವ ಕಳಪೆ ಕಾಮಗಾರಿಯಿಂದಾಗಿ ರಸ್ತೆ, ಚರಂಡಿ, ಕಲ್ವರ್ಟ್ಗಳು ಕಿತ್ತು ಹಾಳಾಗಿದ್ದರೆ, ಶೌಚಾಲಯವು ನಿರ್ವಹಣೆಯಿಲ್ಲದೇ ಅಶುಚಿತ್ವದಿಂದ ಕೂಡಿದೆ.

ಶುದ್ಧ ಕುಡಿಯುವ ನೀರು, ಚಾಲಕರು, ವರ್ತಕರು ಹಾಗೂ ರೈತರಿಗೆ ವಿಶ್ರಾಂತಿ ಗೃಹ ಎನ್ನುವುದು ಕನಸಿನ ಗಂಟಾಗಿದೆ. ಕಗ್ಗತ್ತಲಿನಲ್ಲಿಯೇ ಮುಳುಗಿದ್ದ ಎಳನೀರು ಮಾರುಕಟ್ಟೆಯ ಯಾರ್ಡ್ಗೆ ತಾತ್ಕಾಲಿಕವಾಗಿ ಬೀದಿ ದೀಪಗಳನ್ನು ಅಳವಡಿಸಿ ಬೆಳಕಿನ ಸೌಲಭ್ಯವನ್ನು ಒದಗಿಸಿಕೊಟ್ಟಿರು ವುದನ್ನು ಹೊರತುಪಡಿಸಿದರೆ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಆದಾಯವನ್ನು ತಂದುಕೊಡುತ್ತಿರುವ ಮಾರುಕಟ್ಟೆಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಸಂಪೂರ್ಣ ವಿಫಲರಾಗಿದ್ದು ವರ್ತಕರು ಹಾಗೂ ರೈತರ ಗೋಳು ಅರಣ್ಯರೋಧನವಾಗಿದೆ.

ರಾಜ್ಯದ ಮಾಜಿಸಚಿವ ಹಾಗೂ ಮಾಜಿ ಶಾಸಕರಾದ ಡಾ.ನಾರಾಯಣಗೌಡ ಕಿಕ್ಕೇರಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಎಳನೀರು ಮಾರುಕಟ್ಟೆಯ ಅವ್ಯವಸ್ಥೆಯನ್ನು ವೀಕ್ಷಿಸಿ, ಎಳನೀರು ವ್ಯಾಪಾರಿಗಳು ಹಾಗೂ ರೈತರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರವೇ ಕೃಷಿ ಮಾರುಕಟ್ಟೆ ಹಾಗೂ ಸಹಕಾರ ಸಚಿವರನ್ನು ಭೇಟಿ ನೀಡಿ ಕಿಕ್ಕೇರಿ ಎಳನೀರು ಮಾರುಕಟ್ಟೆಗೆ ಕಾಯಕಲ್ಪ ದೊರಕಿಸಿಕೊಡುವ ಭರವಸೆ ನೀಡಿದರು.

ಕಿಕ್ಕೇರಿ ಎಳನೀರು ಮಾರುಕಟ್ಟೆಯನ್ನು ವರ್ತಕರು ಹಾಗೂ ರೈತರ ಉಪಯೋಗಕ್ಕೆ ದೊರಕಿಸಿಕೊಡದೇ ತಾರತಮ್ಯ ಮಾಡಲಾಗಿತ್ತು. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ಗಮನಕ್ಕೆ ತಂದು ಎಳನೀರು ಮಾರುಕಟ್ಟೆಯನ್ನು ಸಾರ್ವಜನಿಕರ ಅನುಕೂಲಕ್ಕೆ ಲೋಕಾರ್ಪಣೆ ಮಾಡಿಸಿಕೊಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ವಿಶೇಷ ಅನುದಾನ ಬಿಡುಗಡೆ ಮಾಡಿಸಿ ಮಾರುಕಟ್ಟೆಗೆ ಕಾಯಕಲ್ಪ ಮಾಡಿಸಿ ವರ್ತಕರಿಗೆ ಹಾಗೂ ರೈತರಿಗೆ ಅನುಕೂಲ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರೈತರ ಸಮಸ್ಯೆಗಳು ಪರಿಹಾರವಾಗಿ ಕನಿಷ್ಠ ಮೂಲಭೂತ ಸೌಲಭ್ಯಗಳು ಎಳನೀರು ಮಾರುಕಟ್ಟೆಯಲ್ಲಿ ದೊರೆಯದಿದ್ದರೆ ವರ್ತಕರು ಹಾಗೂ ರೈತರೊಂದಿಗೆ ಸೇರಿಕೊಂಡು ಉಗ್ರವಾದ ಹೋರಾಟ ನಡೆಸುವುದಾಗಿ ನಾರಾಯಣಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕೆ.ಆರ್.ಪೇಟೆ ಎಪಿಎಂಸಿ ಮಾರುಕಟ್ಟೆಯ ಅಭಿವೃದ್ಧಿ, ಅಕ್ಕಿಹೆಬ್ಬಾಳು, ಕಿಕ್ಕೇರಿ. ಸಂತೇಬಾಚಹಳ್ಳಿ ಹಾಗೂ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳೀಯ ಹೂವಿನ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಲು ತಾವು ಸಚಿವರಾಗಿದ್ದಾಗ ಕೋಟ್ಯಾಂತರ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿದ್ದರೂ ಯಾವುದೇ ಅಭಿವೃದ್ಧಿ ಕೆಲಸ-ಕಾರ್ಯಗಳು ಮಾರುಕಟ್ಟೆಗಳಲ್ಲಿ ನಡೆದಿಲ್ಲ. ರೈತರ ಕೃಷಿ ಉತ್ಪನ್ನಗಳನ್ನು ಸಂರಕ್ಷಣೆ ಮಾಡಲು ಬೃಹತ್ ಕೋಲ್ಡ್ ಸ್ಟೋರೇಜ್ ಘಟಕವನ್ನು ಸ್ಥಾಪಿಸಲು ಅನುಮತಿ ಕೊಡಿಸಿ 6ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದರೂ ಈವರೆಗೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎಂಬು ಬೇಸರ ವ್ಯಕ್ತಪಡಿಸಿದ ಮಾಜಿಸಚಿವ ನಾರಾಯಣಗೌಡ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ನೀಂತುಹೋಗಿವೆ.

ಸಂತೇಬಾಚಹಳ್ಳಿ ಹೋಬಳಿಯ ಕೆರೆ-ಕಟ್ಟೆಗಳನ್ನು ಹೇಮಾವತಿ ನದಿಯಿಂದ ತುಂಬಿಸುವ ಗೂಡೆಹೊಸಳ್ಳಿ ಏತ ನೀರಾವರಿ ಯೋಜನೆ ಹಳ್ಳ ಹಿಡಿದಿದೆ. ಕಳೆದ ವಿಧಾನಸಭಾ ಚುನಾವಣೆಯ ಸೋಲಿನಿಂದ ಹತಾಶನಾಗಿ ಸಾರ್ವಜನಿಕ ಕೆಲಸಗಳಿಂದ ದೂರ ಉಳಿದಿದ್ದ ನಾನು ಮತ್ತೆ ಸಕ್ರಿಯ ರಾಜಕಾರಣಕ್ಕೆ ಇಳಿದಿದ್ದೇನೆ. ರೈತರ ನೋವು ನಲಿವುಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಸ್ಥಗಿತಗೊಂಡಿರುವ ಅಭಿವೃದ್ಧಿ ಕೆಲಸಗಳನ್ನು ಮತ್ತೆ ಚಾಲನೆಗೊಳಿಸಲು ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ನಾರಾಯಣಗೌಡ ವರ್ತಕರು ಹಾಗೂ ರೈತಬಾಂಧವರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಳನೀರು ವ್ಯಾಪಾರಿಗಳಾದ ಭಾರತೀಪುರ ಪುಟ್ಟಣ್ಣ, ಸುಂದರ ಹೆಚ್.ಕೆ, ಮಂಜೇಗೌಡ, ರವಿಗಾಂಧಿ, ಪ್ರಕಾಶ್, ರಘುಗೌಡ, ರಂಗಸ್ವಾಮಿ, ನಿಥಿನ್, ರಮೇಶ್, ಅಶೋಕ್ , ಮಂಜೇಗೌಡ, ಮನ್‌ಮುಲ್ ಮಾಜಿ ನಿರ್ದೇಶಕ ಕೆ.ಜಿ.ತಮ್ಮಣ್ಣ, ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಕಿಕ್ಕೇರಿ ಪ್ರಭಾಕರ್, ಕಿಕ್ಕೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅರುಣಕುಮಾರ್, ಮಾದಾಪುರ ಶೇಖರ್, ಕರವೇ ಜಿಲ್ಲಾ ಉಪಾಧ್ಯಕ್ಷ ಸಾಸಲು ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಕಿಕ್ಕೇರಿ ಮಾರುಕಟ್ಟೆಯಲ್ಲಿರುವ ಇಲೆಕ್ಟ್ರಾನಿಕ್ ವೇಬ್ರಿಡ್ಜ್ ಕೆಟ್ಟು ನಿಂತಿರುವುದರಿಂದ ವರ್ತಕರು ತಾವು ಸರಬರಾಜು ಮಾಡುತ್ತಿರುವ ಎಳನೀರು ಲೋಡ್ ತುಂಬಿರುವ ಬೃಹತ್ ಲಾರಿಗಳನ್ನು ತೂಕ ಮಾಡಿಸಲು ಸಮಸ್ಯೆಯು ಎದುರಾಗಿದೆ.

——————ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?