ಬೇಲೂರು-ತಾಲೂಕಿನ ಪ್ರತಿಷ್ಠಿತ ಗ್ರಾಮಪಂಚಾಯತಿ ಎಂದೇ ಬಿಂಬಿತವಾಗಿರುವ ಚಿಕ್ಕಮೇದೂರು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮರುರೂ ಗ್ರಾಮದ ಶಾಂತೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷ ಬಸವರಾಜ್ ಮತ್ತು ಉಪಾಧ್ಯಕ್ಷೆ ವನಜಾಕ್ಷಿ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಇಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಹಾಗು ಉಪಾಧ್ಯಕ್ಷರಿಬ್ಬರು ಅವಿರೋಧವಾಗಿ ನೇಮಕಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಹಾಜರಿದ್ದ ಹೆಚ್.ಡಿ.ಸಿ.ಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮತ್ತು ಹಾಲಿ ನಿರ್ದೇಶಕ ಎಂ.ಎ.ನಾಗರಾಜ್ ಮಾತನಾಡಿ,ತಾಲ್ಲೂಕಿನ ಮಲೆನಾಡು ಭಾಗದ ಚಿಕ್ಕಮೇದೂರು ಗ್ರಾಮ ಪಂಚಾಯತಿ ಗ್ರೇಡ್ 2 ರ ಸ್ಥಾನ ಪಡೆದಿದೆ.ಇಂತಹ ಗ್ರಾಮ ಪಂಚಾಯತಿಯಲ್ಲಿ ಅವಿರೋಧವಾಗಿ ಅಯ್ಕೆಯಾಗುವುದು ನಿಜಕ್ಕೂ ಕಷ್ಟದ ವಿಷಯ.ಮರುರೂ ಗ್ರಾಮದ ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕಾಲಘಟ್ಟದಲ್ಲಿ ಪಕ್ಷದ ಸೇವೆಯನ್ನು ನಿಷ್ಠೆಯಿಂದ ಮಾಡಿಕೊಂಡ ಬಂದ ಶಾಂತೇಗೌಡರ ಹಿರಿತನ ಮತ್ತು ಅವರ ಕಾರ್ಯಕ್ಷಮತೆಯಿಂದ ಎಲ್ಲ ಪಕ್ಷದವರು ಕೂಡ ಒಟ್ಟಾಗಿ ಅವರನ್ನು ಚಿಕ್ಕಮೇದೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಅಯ್ಕೆ ಮಾಡಿದ್ದು ಸಂತೋಷ ತಂದಿದೆ ಎಂದರು.
ನೂತನ ಅಧ್ಯಕ್ಷರು ಗ್ರಾಮೀಣ ಭಾಗದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಮುಂದಾ ಗಬೇಕಿದೆ.ಕುಡಿಯುವ ನೀರು,ಶೌಚಾಲಯ,ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿದೆ.ಸ್ವಚ್ಚತೆ ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಂ.ಜೆ.ನಿಶಾಂತ್ ಮಾತನಾಡಿ, ಚಿಕ್ಕಮೇದೂರು ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಯ್ಕೆ ಹಿಂದಿನಿಂದಲೂ ಜಿದ್ದಾಜಿದ್ದಿನಿಂದಲೇ ನಡೆಯುತ್ತಾ ಬಂದಿದೆ.ಆದರೆ ಹಿರಿಯ ರಾಜಕಾರಣಿ ಶಾಂತೇಗೌಡರ ಆಯ್ಕೆಯ ವಿಷಯದಲ್ಲಿ ಯಾರೊಬ್ಬರೂ ವಿರೋಧ ವ್ಯಕ್ತಪಡಿಸದಿದ್ದುದು ವಿಶೇಷವಾಗಿದೆ.ಪಂಚಾಯತಿಗೆ ಹೆಚ್ಚಿನ ಅನುದಾನ ತಂದು ಮಾದರಿ ಪಂಚಾಯತಿ ಮಾಡಲು ಅವರು ಶ್ರಮ ವಹಿಸಲಿ ಎಂದು ಆಶಿಸುವುದಾಗಿ ತಿಳಿಸಿದರು.
ಬೇಲೂರು ತಾಲ್ಲೂಕು ಪಂಚಾಯತ ಕಾರ್ಯನಿರ್ವಹಣಾ ಅಧಿಕಾರಿ ವಸಂತಕುಮಾರ್ ಚುನಾವಣಾ ಅಧಿಕಾರಿಯಾಗಿ ಭಾಗವಹಿಸಿ ಆಯ್ಕೆ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹೋಬಳಿ ಅಧ್ಯಕ್ಷ ನವೀನ್,ಮಾಜಿ ಗ್ರಾ ಪಂಚಾಯತಿ ಅಧ್ಯಕ್ಣ ಪ.ನಾಗೇಶ್,ಉದ್ಯಮಿಗಳಾದ ದಿವ್ಯ ಪ್ರಸಾದ್ ಮತ್ತು ಪ್ರಸಾದ್ ಸಹೋದರರು, ಸದಸ್ಯರು ಗಳಾದ ಬಸವರಾಜ್, ಗಾನ್ಹವಿ.ರಾಜು, ಲೋಕೇಶ್, ಪಾರ್ವತಮ್ಮ, ಹೂವಮ್ಮ.ಪಲ್ಲವಿ, ವನಜಾಕ್ಷಿ, ಪುಟ್ಟಮ್ಮ, ಕಲ್ಯಾಣಪ್ರಸಾದ್, ವೆಂಕಟೇಶ್ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಕಾರ್ಯದರ್ಶಿ ಹರ್ಷಿತ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.
.
ನಾನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕಾಲಘಟ್ಟದಿಂದ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ.ನಾನು ಎಂದು ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ.ಈ ಜವಾಬ್ದಾರಿಯು ದೇವರ ಕ್ರಪೆ ಎಂದೇ ಭಾವಿಸುತ್ತೇನೆ.
ನನ್ನದು ಸೈದ್ಧಾಂತಿಕ ರಾಜಕಾರಣ.ಹೆಚ್ ಡಿ ದೇವೇಗೌಡರ ಆರ್ಶಿವಾದದಿಂದ ನನ್ನ ಇಳಿ ವಯಸ್ಸಿನಲ್ಲಿ ಮಹತ್ತರವಾದ ಜವಾಬ್ದಾರಿಯೊಂದು ದೊರೆತಿದೆ.ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.
ಪಕ್ಷಾತೀತವಾಗಿ ಎಲ್ಲಾ ಪಕ್ಷದ ಪ್ರಮುಖರು ಇಂದು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ್ದಾರೆ ಅವರೆಲ್ಲರಿಗೂ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ.
——————ಶಾಂತೇಗೌಡ,ನೂತನ ಅಧ್ಯಕ್ಷರು