ಜೈಲಿಗೆ ಹೋದರೂ ಸೀಟು ಬಿಡುವುದಿಲ್ಲ ಎಂಬ ಮನಸ್ಥಿತಿ ಸಿದ್ದರಾಮಯ್ಯರದ್ದು:ಸಿಮೆಂಟ್ ಮಂಜುನಾಥ್ ಟೀಕೆ

ಮೈಸೂರು:ಜೈಲಿಗೆ ಹೋದರೂ ಸೀಟು ಬಿಡುವುದಿಲ್ಲ ಎಂಬ ಮನಸ್ಥಿತಿಯನ್ನು ಹೊಂದಿದ ವ್ಯಕ್ತಿ ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ಪಕ್ಷವೂ ಅದೇ ಧೋರಣೆ ಉಳ್ಳದ್ದು ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸಿಮೆಂಟ್ ಮಂಜುನಾಥ್ ಅವರು ಟೀಕಿಸಿದರು.

ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ನೀವು ಅಧಿಕಾರ ಮಾಡಬಾರದೆಂದು ನಾವು ಹೇಳುತ್ತಿಲ್ಲ.ದೇವರಾಜ ಅರಸು ಅವರಿಗೆ ಹೋಲಿಕೆ ಮಾಡಿಕೊಳ್ಳುವ ಸಿದ್ದರಾಮಯ್ಯನವರು ಅಧಿಕಾರ ಎಂಬ ಸೀಟನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ನೇರವಾಗಿ ಆರೋಪ ಇರುವ ಕಾರಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅಲ್ಲದೆ,ತನಿಖೆಯನ್ನು ಎದುರಿಸಬೇಕು.ತಾವು ಯಾವುದೇ ತಪ್ಪು ಮಾಡಿಲ್ಲವೆಂದು ಸಾಬೀತಾದರೆ ಮತ್ತೆ ಸಿಎಂ ಆಗಬಹುದು ನಮಗೇನೂ ಬೇಜಾರಿಲ್ಲ ಎಂದು ಅವರು ತಿಳಿಸಿದರು.

ಅಧಿಕಾರದಲ್ಲಿರುವ ಕಾಂಗ್ರೆಸ್,ದಲಿತರ ದುಡ್ಡನ್ನು ಲೂಟಿ ಮಾಡುವುದನ್ನು ನಿಲ್ಲಿಸಬೇಕು.ಮೊಟ್ಟ ಮೊದಲನೆಯದಾಗಿ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು ಕೆಳಗಿಳಿಯಬೇಕು ಎಂದು ಅವರು ಒತ್ತಾಯಿಸಿದರು.

ಮಾನ್ಯ ರಾಜ್ಯಪಾಲರು ಒಬ್ಬ ದಲಿತ ವ್ಯಕ್ತಿ ಎಂಬ ಏಕೈಕ ಕಾರಣಕ್ಕಾಗಿ ಕಾಂಗ್ರೆಸ್ಸಿಗರು ಅವರ ಅವಹೇಳನ ಮಾಡುತ್ತಿರುವ ಸಂಶಯ ಬರುತ್ತಿದೆ.ಒಬ್ಬ ಪರಿಶಿಷ್ಟ ಪಂಗಡದ ಹೆಣ್ಮಗಳು ಗೌರವಾನ್ವಿತ ರಾಷ್ಟ್ರಪತಿಗಳ ಹುದ್ದೆಗೆ ಏರಿದಾಗ ಕಾಂಗ್ರೆಸ್‍ನವರು ಏಕವಚನದಲ್ಲಿ ಸಂಬೋಧಿಸಿದ್ದರು ಎಂದು ಆಕ್ರೋಶ ಹೊರಹಾಕಿದರು.

ರಾಜ್ಯದಲ್ಲಿ ಪೊಲೀಸ್ ಇಲಾಖೆ ಬದುಕಿದೆಯೇ ಸತ್ತಿದೆಯೇ ಎಂದು ಅವರು ಪ್ರಶ್ನಿಸಿದ ಅವರು ರಾಜ್ಯಪಾಲರ ಚಿತ್ರಕ್ಕೆ ಚಪ್ಪಲಿಯಲ್ಲಿ ಕಾಂಗ್ರೆಸ್ಸಿನವರು ಹೊಡೆದರಲ್ಲವೇ? ಇವರಿಗೆ ಕಿಂಚಿತ್ತು ಮಾನ ಮರ್ಯಾದೆ ಇದೆಯೇ ಎಂದು ಕೇಳಿದರು. ರಾಜ್ಯಪಾಲರನ್ನು ಏಕವಚನದಲ್ಲಿ ಮಾತನಾಡಿದ ಮುಖಂಡರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕಿತ್ತು. ಆದರೆ, ಆ ಕೆಲಸ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಎಲ್. ನಾಗೇಂದ್ರ, ಮಾಜಿ ಶಾಸಕ ಹರ್ಷವರ್ಧನ್,ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಎಸ್ ಸಿ.ಮತ್ತು ಎಸ್. ಟಿ ಮೋರ್ಚಾಗಳ ಅಧ್ಯಕ್ಷರು ಹಾಗೂ ಜಿಲ್ಲೆಯ ವಿವಿಧ ಮುಖಂಡರು ಇದ್ದರು.

——————-ಮಧುಕುಮಾರ್

Leave a Reply

Your email address will not be published. Required fields are marked *

× How can I help you?