ಕೆ.ಆರ್ ಪೇಟೆ-ಹಿಂದೂ ಧರ್ಮ ತೊರೆದು ಬೌದ್ಧ ಧರ್ಮಕ್ಕೆ ಮತಾಂತರವಾಗಲು ನಿರ್ಧರಿಸಿದ ದ,ಲಿತರು-ಬುದ್ಧ ಭವನ ನಿರ್ಮಾಣಕ್ಕೆ ಜಾಗ ನೀಡಿ ಎಂದ ಡಿ.ಪ್ರೇಮಕುಮಾರ್

ಕೆ.ಆರ್.ಪೇಟೆ-ನಾವೆಲ್ಲರೂ ಹಿಂದೂ ಧರ್ಮದ ಜಾತಿ ವ್ಯವಸ್ಥೆಯಿಂದ ಬೇಸತ್ತಿದ್ದು ಸಾಮೂಹಿಕವಾಗಿ ಬೌದ್ಧ ಧರ್ಮಕ್ಕೆ ಸೇರುತ್ತಿದ್ದೇವೆ.ಪಟ್ಟಣದ ಸರ್ವೆ193 ರಲ್ಲಿ ಉಳಿದಿರುವ 05 ಗುಂಟೆ ಜಾಗವನ್ನು ಬುದ್ದ ಭವನ ನಿರ್ಮಿಸಲು ನೀಡಬೇಕು ಎಂದು ತಾಲ್ಲೂಕು ದಲಿತ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಡಿ.ಪ್ರೇಮಕುಮಾರ್ ಶಾಸಕ ಹೆಚ್ ಟಿ ಮಂಜುರವರಲ್ಲಿ ಮನವಿ ಮಾಡಿದರು.

ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ಬಳಿ ಇರುವ ಸರ್ಕಾರಿ ರೇಷ್ಮೆ ತರಬೇತಿ ಕೇಂದ್ರದ ಮಾಜಿ ಸ್ಪೀಕರ್ ಕೃಷ್ಣ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ತಾಲೂಕು ಮಟ್ಟದ ಹಿತರಕ್ಷಣಾ ಸಮಿತಿಯ ಆಶ್ರಯದಲ್ಲಿ ನಡೆದ ದಲಿತರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶತ-ಶತಮಾನಗಳಿಂದಲೂ ಹಿಂದೂ ಧರ್ಮದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಬರುತ್ತಿವೆ.ಇಂದಿನ ಆಧುನಿಕ ಯುಗದಲ್ಲೂ ಅದು ನಿಂತಿಲ್ಲ.ನಾವುಗಳು ಬಾಬಾಸಾಹೇಬರ ಹಾದಿಯಲ್ಲಿ ಮುಂದುವರೆಯಲು ತೀರ್ಮಾನಿಸಿದ್ದು ಅವರಂತೆಯೇ ಬೌದ್ಧ ಧರ್ಮವನ್ನು ಸ್ವೀಕರಿಸಲು ನಿರ್ಧಾರ ಮಾಡಿರುವುದಾಗಿ ತಿಳಿಸಿದರು.

ತಾಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ನಿಮಿಸಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನಗಳು ನಿರ್ವಹಣಾ ಕೊರತೆಯಿಂದ ಹಾಳಾಗುತ್ತಿವೆ. ಈ ಭವನಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿ ಗ್ರಾಮ ಪಂಚಾಯತಿಗಳ ನಿರ್ವಹಣೆಗೆ ವಹಿಸಿಕೊಡಬೇಕು. ಪಟ್ಟಣದ ದಲಿತ ಶಿಕ್ಷಣ ಕೇಂದ್ರದ 12 ಎಕರೆ ಭೂಮಿ ಉಪ ವಿಭಾಗಾಧಿಕಾರಿಗಳ ಹೆಸರಿನಲ್ಲಿ ವಿವಿಧ ಗ್ರಾಮಗಳಲ್ಲಿ ಖಾತೆಯಾಗಿದೆ. ಇದನ್ನು ಬದಲಿಸಿ ದಲಿತ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಹೆಸರಿಗೆ ಖಾತೆ ಮಾಡಿಕೊಡುವಂತೆ ಡಿ.ಪ್ರೇಮಕುಮಾರ್ ಒತ್ತಾಯಿಸಿದರು.

ದಲಿತರಿಗೆ ಸಹಕಾರ ಸಂಘಗಳು ಹಾಗೂ ಸಂಘ ಸಂಸ್ಥೆಗಳಲ್ಲಿ ಉಚಿತವಾಗಿ ಶೇರುದಾರರನ್ನಾಗಿ ಹಾಗೂ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕೆಂಬ ಸರ್ಕಾರಿ ನಿಯಮವಿದೆ. ಆದರೆ ಈ ಮಾಹಿತಿಯನ್ನು ದಲಿತರಿಗೆ ತಿಳಿಸದೇ ಇರುವ ಕಾರಣ ಅರ್ಹರು ಸಹಕಾರ ಸಂಘಗಳಲ್ಲಿ ಶೇರುದಾರರಾಗಲು ಅವಕಾಶವಾಗಿಲ್ಲ. ಈ ಬಗ್ಗೆ ತಾಲ್ಲೂಕು ಆಡಳಿತ ಹಾಗೂ ಶಾಸಕರು ಸೂಕ್ತ ಕ್ರಮ ವಹಿಸಿ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಸಹಕಾರ ಸಂಸ್ಥೆಗಳಲ್ಲಿ ಉಚಿತವಾಗಿ ಸದಸ್ಯತ್ವ ಕೊಡಿಸಬೇಕು ಎಂದು ಮನವಿ ಮಾಡಿದರು.

ಪಟ್ಟಣದ ಟೌನ್ ಕ್ಲಬ್ ಸೇರಿದಂತೆ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ದಲಿತರಿಗೆ ಉಚಿತ ಸದಸ್ಯತ್ವ ನೀಡದೇ ದಲಿತರು ಸಹಕಾರ ಸಂಸ್ಥೆಗಳಲ್ಲಿ ದೊರೆಯುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಪಟ್ಟಣದ ಪ್ರತಿಷ್ಠಿತ ಟೌನ್ ಕ್ಲಬ್ ನಲ್ಲಿ ಸದಸ್ಯತ್ವ ನೀಡುವಂತೆ ಸದಸ್ಯತ್ವ ಶುಲ್ಕ ನೀಡಿ, ಹಲವು ಭಾರಿ ಮನವಿ ಮಾಡಿದ್ದರೂ ನನಗೆ ಸದಸ್ಯತ್ವ ನೀಡಿರುವುದಿಲ್ಲ ಎಂದು ಸಭೆಯ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ತಾಲ್ಲೂಕು ಸಹಕಾರ ಅಭಿವೃದ್ದಿ ಅಧಿಕಾರಿ ಭರತ್‌ಕುಮಾರ್ ಅವರು ಟೌನ್‌ಕ್ಲಬ್ ಸದಸ್ಯತ್ವ ಕೊಡಿಸುವ ಜವಾಬ್ದಾರಿ ನನಗಿಲ್ಲ. ಜಿಲ್ಲಾ ಸಹಕಾರ ಅಭಿವೃದ್ದಿ ಅಧಿಕಾರಿಗಳಿಗೆ ಪತ್ರ ಬರೆದು ಟೌನ್ ಕ್ಲಬ್ ಆಡಳಿತ ಮಂಡಳಿಗೆ ಸದಸ್ಯತ್ವ ನೀಡುವ ಬಗ್ಗೆ ಸೂಚನೆ ಕೊಡಿಸಲಾಗುವುದು ಎಂದರು.

ಅಲ್ಲದೆ ತಾಲ್ಲೂಕಿನಾದ್ಯಂತ ಇರುವ ಸಹಕಾರ ಸಂಘಗಳಲ್ಲಿ ಎಸ್.ಸಿ.ಎಸ್.ಟಿ ವರ್ಗದವರಿಗೆ ಉಚಿತವಾಗಿ ಶೇರುದಾರರಾಗಲು ಅವಕಾಶವಿದೆ ಸೂಕ್ತ ದಾಖಲೆ ನೀಡಿದವರ ಆಯಾಯ ಗ್ರಾಮಗಳಲ್ಲಿ ಸದಸ್ಯತ್ವ ಕೊಡಿಸಲು ತಾವು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ಕೊಟ್ಟರು.

ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗ ಪಟ್ಟಣದ ದಲಿತ ಬಂಧುಗಳ ಜನರೂ ಸೇರಿದಂತೆ ನೂರಾರು ರೈತರ ಕೃಷಿ ಭೂಮಿಯಿದೆ. ಪಾಲಿಟೆಕ್ನಿಕ್ ಸಂಸ್ಥೆಯವರು ರೈತರು ತಿರುಗಾಡುವ ರಸ್ತೆಯನ್ನು ಮುಚ್ಚಿ ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನ ಇಲ್ಲ. ಪಾಲಿಟೆಕ್ನಿಕ್ ಒಳಗಿನ ರಸ್ತೆಯನ್ನು ಮುಚ್ಚಿರುವುದರಿಂದ ದಲಿತ ಸಮುದಾಯದ ಜನ ಸೇರಿದಂತೆ ರೈತರು ಸತ್ತವರ ಶವ ತೆಗೆದುಕೊಂಡು ಹೋಗಲು ನಾಲ್ಕು ಕಿ.ಮೀ ಸುತ್ತಿ ಬರಬೇಕಾಗಿದೆ. ಮೂಲ ನಕಾಶೆಯಂತೆ ಪಾಲಿಟೆಕ್ನಿಕ್ ಒಳಗಿನ ರಸ್ತೆಯನ್ನು ತೆರವುಗೊಳಿಸಿ ರೈತರ ಕೃಷಿ ಚಟುವಟಿಕೆಗಳಿಗೆ ಇರುವ ಅಡಚಣೆಯನ್ನು ನಿವಾರಿಸಿ ಅಥವಾ ಪಾಲಿಟೆಕ್ನಿಕ್ ಆವರಣದೊಳಗೆ ಸೂಕ್ತ ಜಾಗ ಗುರುತಿಸಿ ಹೊಸ ರಸ್ತೆಯನ್ನು ನಿರ್ಮಿಸಿಕೊಡುವಂತೆ ಡಿ.ಪ್ರೇಮ್ ಕುಮಾರ್  ಆಗ್ರಹಿಸಿದರು.

ತಾಲೂಕಿನ ಯಾವುದೇ ಸರ್ಕಾರಿ ಇಲಾಖೆಗಳು ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನ ಬಳಸಿ ಪರಿಶಿಷ್ಠ ಜಾತಿ/ವರ್ಗದ ಕಾರ್ಯಕ್ರಮಗಳ ಅನುಷ್ಟಾನ ಮಾಹಿತಿ ನಿಡುತ್ತಿಲ್ಲ. ದಲಿತರ ಅಭಿವೃದ್ದಿಗೆ ಬಳಕೆಯಾಗಬೇಕಾದ ಹಣ ಬಳಕೆಯಾಗುತ್ತಿಲ್ಲ. ಇದರ ಬಗ್ಗೆ ಕ್ರಮ ವಹಿಸಬೇಕು. ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮರಳು ಮತ್ತಿತರ ಗಣಿಗಾರಿಕೆಯಲ್ಲಿ ಪರಿಶಿಷ್ಠ ಜಾತಿ/ವರ್ಗದ ನಿರುದ್ಯೋಗಿ ಯುವಕರಿಗೆ ಅವಕಾಶ ನೀಡಬೇಕು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿರುವ ಲೋಕೋಪಯೋಗಿ ಇಲಾಖೆಯ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ನಂದಿನಿ ಹಾಲಿನ ಕೇಂದ್ರ ತೆರೆಯಲು ಜಾಗ ನೀಡಿದ್ದೀರಿ. ಅದೇ ಮಾದರಿಯಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಜಾಗ ನೀಡಬೇಕು ಎಂದು ಆಗ್ರಹ ಮಾಡಿದರು.

ಚಿಲ್ಲದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಆರ್.ಶ್ರೀನಿವಾಸ್ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರನಪಾಳ್ಯ ಬಡಾವಣೆಯಲ್ಲಿ ಸುಮಾರು 25ಕ್ಕೂ ಹೆಚ್ಚು ದಲಿತ ಕುಟುಂಬಗಳು ಸರ್ಕಾರಿ ಜಾಗದಲ್ಲಿ ಕಳೆದ 35ವರ್ಷಕ್ಕೂ ಹೆಚ್ಚು ದಿನಗಳಿಂದ ವಾಸ ಮಾಡುತ್ತಿವೆ. ಇವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ವಿದ್ಯುತ್, ನೀರು, ಚರಂಡಿ ವ್ಯವಸ್ಥೆ, ರೇಷನ್‌ಕಾರ್ಡ್ ಸೇರಿದಂತೆ ಎಲ್ಲಾ ಮೂಲ ಸೌಲಭ್ಯ ಒದಗಿಸಿಕೊಡಲಾಗಿದೆ ಆದರೆ ಅವರಿಗೆ ಸರ್ಕಾರದಿಂದ ಹಕ್ಕುಪತ್ರ ವಿತರಣೆ ಮಾಡಿರುವುದಿಲ್ಲ. ಅಕ್ಕಪಕ್ಕದ ಜಮೀನಿನ ಮಾಲೀಕರು ಒಕ್ಕಲೆಬ್ಬಿಸುವ ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ ಈ ಕುಟುಂಬಗಳಿಗೆ ಕೂಡಲೇ ಹಕ್ಕುಪತ್ರ ವಿತರಣೆ ಕೊಡಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರು ಮತ್ತು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಪೌರಕಾರ್ಮಿಕರಿಗೆ ನಿವೇಶನ ನೀಡಿ :

ನಮಗೆ ಯಾವುದೇ ಭವನಗಳು ಮತ್ತು ಪ್ರತಿಮೆಗಳ ನಿರ್ಮಾಣ ಬೇಡ. ಬದಲಾಗಿ ಪಟ್ಟಣದ ಪೌರ ಕಾರ್ಮಿಕರು ಮತ್ತು ಆದಿದ್ರಾವಿಡ ಸಮುದಾಯದ ಜನ ನೆಮ್ಮದಿಯಿಂದ ಸ್ವಂತ ಸೂರು ಕಲ್ಪಿಸಿಕೊಳ್ಳಲು ನಿವೇಶನಗಳನ್ನು ನೀಡಿ. ನಮಗೆ ನಿವೇಶನ ನೀಡುವವರೆಗೂ ಪೌರಕಾರ್ಮಿಕರ ದಿನಾಚರಣೆಯನ್ನು ಮಾಡಬಾರದೆಂದು ನಿರ್ಧರಿಸಿ ನಾವು ಇದುವರೆಗೂ ಪೌರಕಾರ್ಮಿಕರ ದಿನಾಚರಣೆ ಮಾಡುತ್ತಿಲ್ಲ. ದಯಮಾಡಿ ಪೌರ ಕಾರ್ಮಿಕರಿಗೆ ನಿವೇಶನ ನೀಡಿ ಎಂದು ತಾಲೂಕು ಪೌರ ಕಾರ್ಮಿಕರ ಮುಖಂಡ ಕೆ.ಆರ್.ಬನ್ನಾರಿ ಒತ್ತಾಯಿಸಿದರು.

ತಾಲೂಕಿನಾದ್ಯಂತ ಪರಿಶಿಷ್ಠ ಜಾತಿ/ವರ್ಗದ ಮೇಲಿನ ದೌರ್ಜನ್ಯದ ಪ್ರಕರಣಗಳು, ಬೂ ವಿವಾದಗಳು ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರುಗಳು ಪ್ರಸ್ತಾಪಿಸಿ ನಿಯಮಾನುಸಾರ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶಿಷ್ಠ ಜಾತಿ/ವರ್ಗದ ತಾಲೂಕು ಮಟ್ಟದ ಹಿತರಕ್ಷಣಾ ಸಮಿತಿಯ ಸಭೆ ನಡೆಸುವಂತೆ ಆಗ್ರಹಿಸಲಾಯಿತು.

ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಪಾಲಿಟೆಕ್ನಿಕ್ ಒಳಗಿನ ರೈತರ ರಸ್ತೆಯನ್ನು ಬಿಡಿಸಿಕೊಡುವ ಬಗ್ಗೆ ನಾನು ಈಗಾಗಲೇ ತಾಂತ್ರಿಕ ಶಿಕ್ಷಣ ಇಲಾಖೆಯ ಕಮೀಷರ್ ಅವರನ್ನು ಸಂಪರ್ಕಿಸಿದ್ದೇನೆ. ಸಭೆಯಲ್ಲಿ ಪ್ರಸ್ತಾಪಿತವಾಗಿರುವ ಎಲ್ಲಾ ವಿಷಯಗಳ ಬಗ್ಗೆ ನಾನು ಸಹಮತದಲ್ಲಿದ್ದೇನೆ. ಚುನಾವಣೆಯ ಸಂದರ್ಭದಲ್ಲಿ ಮಾತ್ರ ನಾನು ರಾಜಕಾರಣ ಮಾಡುತ್ತೇನೆ ಉಳಿದ ಅವಧಿಯಲ್ಲಿ ಎಲ್ಲಾ ಜನರಿಗೂ ನಾನು ಶಾಸಕನಾಗಿ ಪ್ರಾಮಾಣಿಕ ಸೇವೆ ಮಾಡುತ್ತಿದ್ದೇನೆ. ತಾಲೂಕಿನ ಎಲ್ಲಾ ಸಮುದಾಯಗಳ ಹಿತರಕ್ಷಣೆ ನನ್ನ ಮೊದಲ ಆದ್ಯತೆ. ಜಾತಿ ಸಂಘರ್ಷ ಬೇಡ. ಸರ್ಕಾರಿ ಸವಲತ್ತುಗಳು ಸಕಾಲದಲ್ಲಿ ಎಲ್ಲಾ ಸಮುದಾಯಗಳಿಗೂ ತಲುಪುವಂತೆ ನಾನು ಕೆಲಸ ಮಾಡುತ್ತೇನೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಮಾತನಾಡಿ ನಾನು ದೇಶ ಸೇವೆ ಮಾಡಿ ಬಂದಿದ್ದೇನೆ. ನನ್ನ ಮೇಲೆ ನಂಬಿಕೆಯಿಡಿ. ನಾವೆಲ್ಲರೂ ಒಂದು ಕುಟುಂಬದoತೆ ಕೂಡಿ ಚರ್ಚಿಸಿ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸೋಣ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಡಾ.ದಿವಾಕರ್, ಸಬ್ ಇನ್ಸ್ಪೆಕ್ಟರ್ ನವೀನ್, ಗ್ರಾಮಾಂತರ ಪಿ.ಎಸ್.ಐ ಸುಬ್ಬಯ್ಯ, ಕಿಕ್ಕೇರಿ ಠಾಣೆಯ ಎ.ಎಸ್.ಐ ರಮೇಶ್, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ವರ್ಗದ ಮುಖಂಡರಾದ ಬಸ್ತಿ ರಂಗಪ್ಪ, ಕಿಕ್ಕೇರಿ ರಾಜಣ್ಣ, ರಾಜಯ್ಯ, ಮಾಂಬಳ್ಳಿ ಜಯರಾಂ, ರಂಗಸ್ವಾಮಿ, ಊಚನಹಳ್ಳಿ ನಟರಾಜ್, ಕತ್ತರಘಟ್ಟ ರಾಜೇಶ್, ಹೊಸಹೊಳಲು ಪುಟ್ಟರಾಜು, ಹರೀನಹಳ್ಳಿ ಯಾಲಕ್ಕಯ್ಯ, ಅಗ್ರಹಾರಬಾಚಹಳ್ಳಿ ಆರ್.ಜಗದೀಶ್, ಜಿ.ಪಿ.ರಾಜು, ನರೇಂದ್ರನಾಯಕ್, ಚಿಕ್ಕಗಾಡಿಗನಹಳ್ಳಿ ಸಂತೋಷ್, ಹರಿಹರಪುರ ನರಸಿಂಹ, ಗಂಗಾಧರ್, ಸ್ಟುಡಿಯೋ ಮಂಜು, ಸುರೇಶ್ ಹರಿಜನ, ಬಂಡಿಹೊಳೆ ರಮೇಶ್, ಗಣೇಶ್, ಬನ್ನಾರಿ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ತಾಲೂಕಿನ ವಿವಿಧ ಭಾಗಗಳ ಸಮುದಾಯ ಮುಖಂಡರು ಸಭೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದು ಮಾತನಾಡಿದರು.

———————ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?