ತುಮಕೂರು-ಕಳೆದ ಒಂದೆರಡು ವಾರಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ತುಮಕೂರು ಅಮಾನಿಕೆರೆ ಭರ್ತಿಯಾಗಿದ್ದು ಅಲ್ಲಿಂದ ಹೊರ ಬರುತ್ತಿರುವ ನೀರು ನೇರವಾಗಿ ದಿಬ್ಬೂರಿನ ಕೆಲ ಬಡಾವಣೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.
ನಿವಾಸಿ ಇಂದ್ರಕುಮಾರ್,ಮಾತನಾಡಿ,ಈ ಭಾಗದ ಜನರು ಮಳೆ ಬಂದರೆ ವಾಸ ಮಾಡಲು ಸಾಧ್ಯವಾಗುತ್ತಿಲ್ಲ ಏಕೆಂದರೆ ತುಮಕೂರಿನ ಅಮಾನಿಕೆರೆ ಭರ್ತಿಯಾಗಿ ಹೊರ ಬರುವ ನೀರು ಇದೇ ಮಾರ್ಗವಾಗಿ ಬರುತ್ತದೆ.
ಅಲ್ಲದೇ ಇಲ್ಲಿನ ಡ್ರೈನೇಜ್,ಮ್ಯಾನ್‌ಹೋಲ್, ಗಳು ಕಟ್ಟಿಕೊಂಡು ಜಾಸ್ತಿ ಮಳೆಬಂದಾಗ ಉಕ್ಕಿಹರಿಯುತ್ತವೆ.ಆ ನೀರು ಸಹ ಇಲ್ಲಿಗೆ ನುಗ್ಗುತ್ತದೆ.
ಅಧಿಕಾರಿಗಳ ಬೇಜವಾಬ್ದಾರಿತನ, ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದ ಇಲ್ಲಿನ ನಿವಾಸಿಗಳಾದ ನಾವುಗಳು ನಾನಾ ರೀತಿಯ ಕಷ್ಟಗಳನ್ನು ಪಡುವಂತಹ ಸ್ಥಿತಿ ಬಂದಿದೆ ಎಂದರು.
ಈ ಭಾಗದಲ್ಲಿ ಬಹುತೇಕ ದಲಿತ ಕುಟುಂಬಗಳೇ ವಾಸ ಮಾಡುತ್ತಿದ್ದು, ಕಡು ಬಡವರಾಗಿರುತ್ತಾರೆ, ಕೂಲಿ ಮಾಡಿ ಜೀವನ ನಡೆಸುತ್ತಿರುವ ಈ ಕುಟುಂಬಗಳಿಗೆ ಆಶ್ರಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇಲ್ಲಿ ಕಾಲುವೆ ಮಾಡಿ ಮಳೆ ನೀರು ಸರಾಗವಾಗಿ ಭೀಮಸಂದ್ರದ ಕೆರೆಗೆ ಹೋಗಲು ಅನುವು ಮಾಡಿ ಎಂದು ಹಲವಾರು ಭಾರಿ ಜಿಲ್ಲಾಡಳಿತಕ್ಕೆ,ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಸಹ ಯಾರೂ ಸ್ಪಂದನೆ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಸಹ ಕಳೆದ ಕೆಲವು ತಿಂಗಳ ಹಿಂದೆಯಷ್ಠೇ ನನ್ನ ಸ್ವಂತ ಖರ್ಚಿನಿಂದ ನೀರು ಹರಿಯದಂತೆ ತಡೆ ಗೋಡೆಯಾಗಿ ಕಲ್ಲುಗಳನ್ನು ಹಾಕಿಸಿದ್ದೆನು.ಆದರೆ ಕಳೆದ ವಾರದಿಂದ ಬರುತ್ತಿರುವ ನಿರಂತರ ಮಳೆಗೆ ಈ ತಡೆಗೋಡೆ ಸಹ ಕಿತ್ತು ಹೋಗಿದ್ದು ಈ ನೀರಿನ ಮುಖೇನವೇ ಮಕ್ಕಳು ಶಾಲೆಗಳಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ಥಳೀಯ ಮಂಜುನಾಥ್ ಮಾತನಾಡಿ,ಗುಬ್ಬಿ ಗೇಟ್ ರಿಂಗ್ ರಸ್ತೆಯಿಂದ ಶಿರಾ ಗೇಟ್‌ಗೆ ನೇರ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಈ ಭಾಗವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಿರುವ ಪರಿಣಾಮವೇ ನಾವುಗಳು ಮಳೆ ಮತ್ತು ಕೊಳಚೆ ನೀರಿನಲ್ಲಿ ಓಡಾಡುವ ಮತ್ತು ವಾಸ ಮಾಡುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಅಳಲನ್ನು ತೋಡಿಕೊಂಡರು.
ಶೀಘ್ರ ಈ ಸಮಸ್ಯೆ ಪರಿಹರಿಸದೆ ಹೋದಲ್ಲಿ ನಾವು ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಮಾಡಲು ಯೋಚಿಸಿದ್ದು ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಡಿ.ಕೆ.ಇಂದ್ರಕುಮಾರ್,ಮoಜುನಾಥ್, ಉಮೇಶ್, ಇಮ್ರಾನ್, ಮೂರ್ತಿ, ರಾಮ್, ಭೀಮ್,ಸಲ್ಮಾನ್, ಮೊಮಿನ್, ಮುಕ್ತಿಯಾರ್, ನಾಸೀರ್, ರಿಜು, ರಮೇಶ್,ಕುಮಾರ್ ಸೇರಿದಂತೆ ದಿಬ್ಬೂರು ಬಡಾವಣೆಯ ನಾಗರೀಕರು ಉಪಸ್ಥಿತರಿದ್ದರು.