ಕೊರಟಗೆರೆ-ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈರೇನಹಳ್ಳಿಯಿಂದ ಕೊರಟಗೆರೆ ಸಂಪರ್ಕದ 10 ಕಿಲೋಮೀಟರ್ ಉದ್ದದ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಈ ಭಾಗದ ಪ್ರಮುಖ ಉದ್ಯಮವಾದ ಕುರಿಗಳ ವ್ಯಾಪಾರಕ್ಕೂ ಕತ್ತರಿ ಬಿದ್ದು ರೈತರು ಸಂಕಟಪಡುವ ಪರಿಸ್ಥಿತಿ ಉಂಟಾಗಿದೆ.
ರಸ್ತೆಯ ಉದ್ದಕ್ಕೂ ಮಂಡಿಯುದ್ಧದ ಗುಂಡಿಗಳು ಏರ್ಪಟ್ಟು ದಿನನಿತ್ಯವೂ ಅಪಘಾತಗಳು ನಡೆಯುತ್ತಿವೆ.ಈ ಕಾರಣಕ್ಕೆ ಭಯ ಬಿದ್ದಿರುವ ಕುರಿಗಳನ್ನು ಕೊಳ್ಳುವ ವ್ಯಾಪಾರಿಗಳು ಸುಪ್ರಸಿದ್ದ ಅಕ್ಕಿರಾಂಪುರ ಸಂತೆಗೆ ಬಾರದೆ ಹೋಗಿದ್ದು ರೈತರನ್ನು ಸಂಕಟಕ್ಕೆ ಈಡು ಮಾಡಿದೆ.
ಇಷ್ಟೇ ಅಲ್ಲದೆ ತಾಲೂಕಿನ ಬಹುತೇಕ ರಸ್ತೆಗಳು ಟಾರು ರಸ್ತೆಗಳಿಂದ ಜಲ್ಲಿಕಲ್ಲುಗಳ ರಸ್ತೆಗಳಾಗಿ ಬದಲಾಗಿವೆ.ಹೊಳವನಹಳ್ಳಿ, ಅಕ್ಕಿರಾಂಪುರ, ಬೈಚಾಪುರ, ಬಿ.ಡಿ.ಪುರ ಗ್ರಾಪಂ ಹಾಗೂ ಬೂದಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಕೆರೆ, ಬೈಚಾಪುರ ಕ್ರಾಸ್, ಅಕ್ಕಿರಾಂಪುರ ಸೇತುವೆ, ಬೈಚಾಪುರ ಗ್ರಾಮ, ಕಳ್ಳಿಪಾಳ್ಯ ಕ್ರಾಸ್, ಬಿ.ಡಿ.ಪುರ-ಬೈರೇನಹಳ್ಳಿ ಸಂಪರ್ಕ ರಸ್ತೆಯಲ್ಲಿ 200ಕ್ಕೂ ಅಧಿಕ ಗುಂಡಿಗಳಿದ್ದು ಮಳೆನೀರು ತುಂಬಿರುವ ಪರಿಣಾಮ ರಸ್ತೆಗಳೇ ಕಾಣದಾಗಿದೆ.
ಅಪಘಾತ ನಡೆದ್ರು ಡೋಂಟ್ ಕೇರ್ ..
ಕೊರಟಗೆರೆಯಿಂದ ಗೌರಿಬಿದನೂರು ಮತ್ತು ಬೈರೇನಹಳ್ಳಿಯಿಂದ ಬಿ.ಡಿ.ಪುರ ಮಾರ್ಗವಾಗಿ ಬೆಂಗಳೂರಿಗೆ ಪ್ರತಿನಿತ್ಯ ಸಾವಿರಾರು ವಾಹನ ಸಂಚರಿಸುತ್ತವೆ.ನಿತ್ಯವು ಅಪಘಾತ ನಡೆದ್ರು ಪಿಡ್ಲ್ಯೂಡಿ ಇಲಾಖೆ ಮಾತ್ರ ಡೋಂಟ್ ಕೇರ್ ಅನ್ನುತ್ತಿದೆ.ಅಪಘಾತಕ್ಕೂ ನಮಗೂ ಸಂಬಂಧವೇ ಇಲ್ಲವೆಂಬ ಅಧಿಕಾರಿಗಳ ವರ್ತನೆಗೆ ಸ್ಥಳೀಯರು ಮತ್ತು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಡ್ಲ್ಯೂಡಿ ಇಲಾಖೆಯ ನಿರ್ಲಕ್ಷದಿಂದ ರಸ್ತೆಗಳ ನಿರ್ವಹಣೆಯೇ ಇಲ್ಲದಂತಾಗಿದೆ. 6ತಿಂಗಳಿಂದ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿಮುಚ್ಚಲು ಆಗದಿರುವ ಪಿಡ್ಲ್ಯೂಡಿ ಇಲಾಖೆಯ ಅವಶ್ಯಕತೆ ಏನಿದೆ? ಅಧಿಕಾರಿಗಳು ಒಂದೋ ಬೇರೆಡೆಗೆ ವರ್ಗವಾಗಲಿ ಅಥವಾ ರಾಜೀನಾಮೆ ಕೊಟ್ಟು ಮನೆ ಸೇರಿಕೊಳ್ಳಲಿ.ನಮ್ಮ ತೆರಿಗೆ ಹಣವನ್ನು ತಿಂದುಂಡು ಕಾಲಿ ಮಾಡೋದು ಬೇಡ.
ರಾಜಣ್ಣ-ಸೋಂಪುರ.
ಕೊರಟಗೆರೆಯಿಂದ ಬೈರೇನಹಳ್ಳಿ ಸಂಪರ್ಕದ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಸ್ಥಳಕ್ಕೆ ಈಗಾಗಲೇ ನಮ್ಮ ಅಧಿಕಾರಿವರ್ಗ ಬೇಟಿ ನೀಡಿ ಪರಿಶೀಲನೆ ನಡೆಸಿದೆ.ನಮ್ಮ ಇಲಾಖೆ ವ್ಯಾಪ್ತಿಯಲ್ಲಿ ನಿರ್ವಹಣೆ ಇಲ್ಲದಿರುವ ರಸ್ತೆಗಳ ಮಾಹಿತಿ ಪಡೆದು ತ್ವರಿತವಾಗಿ ಕ್ರಮ ಕೈಗೊಳ್ಳುತ್ತೇವೆ.
ಹನುಮಂತರಾವ್ .ಇ ಇ. ಪಿಡ್ಲ್ಯೂಡಿ ಇಲಾಖೆ. ಮಧುಗಿರಿ.
ವರದಿ: ಶ್ರೀನಿವಾಸ್ ಕೊರಟಗೆರೆ