ಚಿಕ್ಕಮಗಳೂರು-ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ತ್ವರಿತ ನ್ಯಾಯಕ್ಕಾಗಿ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಠಾಣೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿ ದಸಂಸ ಮುಖಂಡರುಗಳು ಜಿಲ್ಲಾಡಳಿತ ಮುಖಾಂತರ ಸಮಾಜ ಕಲ್ಯಾಣ ಸಚಿವರಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ಸಂಬoಧ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಮೂಲಕ ಮನವಿ ಸಲ್ಲಿಸಿದ ಮುಖಂಡರುಗಳು, ನಿರಂತರ ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ವಿಶೇಷ ಪೊಲೀಸ್ ಠಾಣೆ ತೆರೆಯಬೇಕು ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ,ಜಿಲ್ಲೆ ಅತಿಹೆಚ್ಚು ಮಲೆನಾಡು ಪ್ರದೇಶವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಕಾರ್ಮಿಕರು ವಾಸಿಸುತ್ತಿರುವ ಕಾರಣಕ್ಕೆ ದೌರ್ಜನ್ಯ ಪ್ರಕರಣಗಳು ದಲಿತರ ಮೇಲೆ ಹೆಚ್ಚಳಗೊಳ್ಳುತ್ತಿದೆ ಎಂದು ದೂರಿದರು.
ಈಗಾಗಲೇ ಸುಮಾರು ವರ್ಷಗಳಿಂದ ಹಲವಾರು ದಲಿತ ದೌರ್ಜನ್ಯ ಪ್ರಕರಣಗಳು ಇತ್ಯರ್ಥಗೊಂಡಿಲ್ಲ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಠಾಣೆ ತೆರೆಯಬೇಕು ಎಂದ ಅವರು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು.
ದಲಿತರ ಮೇಲಿನ ದೌರ್ಜನ್ಯ ನಿಯಂತ್ರಣ,ತ್ವರಿತ ತನಿಖೆ ಹಾಗೂ ನ್ಯಾಯಕ್ಕಾಗಿ ವಿಶೇಷ ಠಾಣೆ ಬಹಳ ಅವಶ್ಯಕತೆಯಿದೆ ಎಂದು ಹೇಳಿದರು.
ಆ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹಾದೇವಪ್ಪನವರು ಕೂಡಲೇ ದೌರ್ಜನ್ಯ ಪ್ರಕರಣ ಹೆಚ್ಚುತ್ತಿರುವ ಕಾರಣ ಸೂಕ್ತ ಆದೇಶ ಹೊರಡಿಸಿ ದಲಿತರಿಗೆ ಆಗುತ್ತಿರುವ ಸಂಕಷ್ಟವನ್ನು ತಡೆಗಟ್ಟಲು ಮು0ದಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್ಸಿ, ಎಸ್ಟಿ ದೌರ್ಜನ್ಯ ಸಮಿತಿ ಸದಸ್ಯ ಯು.ಸಿ.ರಮೇಶ್, ದಸಂಸ ಸಂಘಟನಾ ಸಂಚಾಲಕ ಮಂಜಯ್ಯ, ತರೀಕೆರೆ ತಾಲ್ಲೂಕು ಸಂಚಾಲಕ ರಾಮಚಂದ್ರ, ಮುಖಂಡರುಗಳಾದ ಹರಿಯಪ್ಪ, ಮೌಂಟೂ, ರುದ್ರಯ್ಯ, ಚಂದ್ರಪ್ಪ, ಸೋಮಶೇಖರ್ ಮತ್ತಿತರರು ಹಾಜರಿದ್ದರು.
—————–ಸುರೇಶ್