ಚಿಕ್ಕಮಗಳೂರು-ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಜಿಲ್ಲೆಯ ಹೆಚ್.ಎಂ.ನಾರಾಯಣ್ ಅವರಿಗೆ ಗುರುವಾರ ಕನ್ನಡಸೇನೆ ಕಾರ್ಯಕರ್ತರು ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಕನ್ನಡ ಸೇವೆಯಲ್ಲಿ ನಿರಂತರ ಶ್ರಮಿಸಿದ ಅನೇಕರಿಗೆ ರಾಜ್ಯ ಮಟ್ಟದಲ್ಲಿ ಉನ್ನತ ಸ್ಥಾನಮಾನಗಳು ದೊರೆಯುತ್ತಿರುವುದು ಹೆಮ್ಮೆಯ ಸಂಗತಿ ಆ ಸಾಲಿ ನಲ್ಲಿ ನಾರಾಯಣ್ ಅವರು ತಮ್ಮ ವ್ಯಾಪ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯ ಕೀರ್ತಿ ಎತ್ತಿ ಹಿಡಿಯುವಂತಾಗಲಿ ಎಂದರು.
ಸಮಾಜದಲ್ಲಿ ಸನ್ನಡತೆ ಹಾಗೂ ಸಹಬಾಳ್ವೆ ಹೊಂದುವ ವ್ಯಕ್ತಿತ್ವದ ಮನುಷ್ಯ ಉನ್ನತ ಶ್ರೇಣಿಯಲ್ಲಿ ಸಾಧನೆ ಮಾಡಲು ಸಾಧ್ಯ. ಹಾಗಾಗಿ ನಾರಾಯಣ್ ಅವರು ಬಡವರು, ನಿವೇಶನ ರಹಿತರು, ಹಿಂದುಳಿದ ಹಾಗೂ ಶೋಷಿತರ ಪರವಾಗಿ ಉತ್ತಮ ಕೆಲಸ ನಿರ್ವಹಿಸಲಿ ಎಂದು ಸಲಹೆ ಮಾಡಿದರು.
ಕನ್ನಡಸೇನೆ ಜಿಲ್ಲಾ ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ ಮಾತನಾಡಿ ರಾಜ್ಯದಲ್ಲಿ ಯಾವುದೇ ಮಂಡಳಿ, ಸರ್ಕಾರ ನೇಮಕಗೊಳಿಸುವ ಸ್ಥಾನಗಳಲ್ಲಿ ಅರ್ಹರಾದವರು ಸಮಸಮಾಜ ನಿರ್ಮಿಸುವ ದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಅಂಬೇಡ್ಕರ್, ಬಸವಣ್ಣ ಹಾಗೂ ಬುದ್ಧರ ಆಶಯಗಳನ್ನು ನೆಲೆಯೂರಿಸಲು ಸಾಧ್ಯ ಎಂದು ಹೇಳಿದರು.
ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ ಸೇನೆಯಲ್ಲಿ ಕನ್ನಡಪರ ಧ್ವನಿ ಅಥವಾ ಸಮಾಜಕ್ಕೆ ಒಳಿತನ್ನು ಬಯಸುವ ಗುಣ ಬೆಳೆಸಿಕೊಂಡವರು ಯಶಸ್ಸಿನ ಮೆಟ್ಟಿಲೇರಲು ನೇರ ಉದಾಹರಣೆಯೇ ನಾರಾಯಣ್. ಆ ನಿಟ್ಟಿನಲ್ಲಿ ಸಿಕ್ಕoಥಹ ಅವಕಾಶದಲ್ಲಿ ಮುಂದೆ ಕನ್ನಡಸೇನೆಗೆ ಜಿಲ್ಲೆಯಲ್ಲಿ ನಿವೇಶನ ಒದಗಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಹಾಮಂಡಳಿ ನಿರ್ದೇಶಕ ಹೆಚ್.ಎಂ.ನಾರಾಯಣ್ ರಾಜ್ಯ ಸಹಕಾರ ಮಂಡಳದಲ್ಲಿ ಸಾವಿರಾರು ವ್ಯವಹಾರ ನಡೆಯಲಿದೆ.ತಾವು ಹೊಸ ನಿರ್ದೇಶಕರಾದ ಕಾರಣ ಹಂತ ಹಂತವಾಗಿ ವಿಷಯಗಳನ್ನು ಅರಿತು ಜಿಲ್ಲೆಗೂ ಸಾಕಷ್ಟು ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ನಗರ ಉಪಾಧ್ಯಕ್ಷ ಅನ್ವರ್, ಸಂಘಟನಾ ಕಾರ್ಯದರ್ಶಿ ಸತೀಶ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಚೈತ್ರ, ಕಾರ್ಯಕರ್ತರಾದ ಹರಿಶಂಕರ್, ದೇವರಾಜ್, ವಿನಯ್, ಶಾಹೀದ್, ಸುಜಿತ್, ರೋಹನ್, ಬಾಬಣ್ಣ ಮತ್ತಿತರರು ಹಾಜರಿದ್ದರು.
————-ಸುರೇಶ್