ಚಿಕ್ಕಮಗಳೂರು-ವಿಶ್ವದಲ್ಲಿಯೇ ಎರಡನೇ ಅತ್ಯಂತ ಸುಂದರ ತಾಣ ಎಂಬ ಖ್ಯಾತಿ ಗೆ ಚಿಕ್ಕಮಗಳೂರು ಪಾತ್ರವಾಗಿದೆ.ಇಲ್ಲಿನ ಪರಿಸರವನ್ನು ಸಂರಕ್ಷಿಸುವ ಜೊತೆಗೆ ಪ್ರವಾಸೋದ್ಯಮ ವನ್ನು ವೃದ್ಧಿಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದು ವಿ ಸ್ಟಾರ್ ಸಂಸ್ಥೆ ಮುಖ್ಯಸ್ಥ ಅಪ್ಸರ್ ಅಹಮದ್ ಹಿಂದುಸ್ತಾನಿ ತಿಳಿಸಿದರು.
ವಿಜಯವಾಣಿ ಕನ್ನಡ ದಿನಪತ್ರಿಕೆ, ವಿ ಸ್ಟಾರ್ ಸಂಸ್ಥೆ, ಲುಕ್‌ಬುಕ್ ಸಹಯೋಗದಲ್ಲಿ ಚಿಕ್ಕಮಗಳೂ ರಿನಿಂದ ರಾಜ್ಯದ ಅತ್ಯಂತ ಎತ್ತರದ ಪರ್ವತ ಮುಳ್ಳಯ್ಯನಗಿರಿವರೆಗೆ ಸಂಚಾರಿ ನಿಯಮಗಳ ಜಾಗೃತಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ರಾಯಲ್ ಎನ್ ಫೀಲ್ಡ್ ಬೈಕ್ ರೈಡಿಂಗಿಗೆ ಚಾಲನೆ ನೀಡಿ ಮಾತನಾಡಿದರು.
ಚಿಕ್ಕಮಗಳೂರು ಜಿಲ್ಲೆ ಅತ್ಯಂತ ಸುಂದರ ಪ್ರವಾಸಿ ತಾಣಗಳನ್ನು ಹೊಂದಿದೆ.ಪ್ರವಾಸೋದ್ಯಮದ ಕಾರಣಕ್ಕೆ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಜಿಲ್ಲೆಯಲ್ಲಿ ನಾವಿದ್ದೇವೆ ಎನ್ನುವುದು ಹೆಮ್ಮೆಯ ಸಂಗತಿ. ಇಲ್ಲಿನ ರೋಮಾಂಚನಕಾರಿ ಸ್ಥಳಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಜಿಲ್ಲೆಯ ಪ್ರಗತಿಗೆ ಪೂರಕವಾದ ಕಾರ್ಯಗಳಿಗೆ ತಾವು ಕೈಜೋಡಿಸುವುದಾಗಿ ಭರವಸೆ ನೀಡಿದರು.
ಹನುಮಂತಪ್ಪ ವೃತ್ತದಲ್ಲಿ ಬೈಕ್ ರೈಡಿಂಗಿಗೆ ಚಾಲನೆ ನೀಡಿದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಲೋಹಿತ್ ಮಾತನಾಡಿ,ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಇನ್ನಷ್ಟು ಪ್ರಖ್ಯಾತಿಗೊಳಿಸುವ ನಿಟ್ಟಿನಲ್ಲಿ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ.ಸೈಕಲ್ , ಬೈಕ್ ರೈಡಿಂಗ್ ಹಾಗು ಮ್ಯಾರಥಾನ್ ನಡೆಸುತ್ತಿದ್ದೇವೆ.
ಈ ಮೂಲಕ ಪ್ರವಾಸಿ ತಾಣಗಳನ್ನು ಪ್ರಖ್ಯಾತ ಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರವಾಸಿಗರ ಸ್ವರ್ಗ ಚಿಕ್ಕಮಗಳೂರಿಗೆ ಆಗಮಿಸುವ ಜನರು ಇಲ್ಲಿನ ರಮಣೀಯ ತಾಣಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ನೀಡುವಂತಾಗಬೇಕು. ಜಿಲ್ಲೆಯಲ್ಲಿನ ಇನ್ನು ಎಷ್ಟೋ ಪ್ರವಾಸಿ ತಾಣಗಳು ಸಾಕಷ್ಟು ಜನರಿಗೆ ಗೊತ್ತೇ ಇಲ್ಲ. ಅವುಗಳನ್ನು ಜನರಿಗೆ ಹತ್ತಿರವಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮುಳಯ್ಯನಗಿರಿ ಮತ್ತು ದತ್ತ ಪೀಠ ಸೇರಿದಂತೆ ಚಂದ್ರದ್ರೋಣ ಪರ್ವತ ಶ್ರೇಣಿಯನ್ನು ಪ್ಲಾಸ್ಟಿಕ್ ಮುಕ್ತ ಗಿರಿ ಶ್ರೇಣಿ ಎಂದು ಘೋಷಣೆ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಪ್ರವಾಸಿತಾಣವನ್ನು ಸಂರಕ್ಷಿಸುವ ಜೊತೆಗೆ ಇಲ್ಲಿನ ಸೌಂದರ್ಯವನ್ನು ಸವಿಯುವಂತಾಗಬೇಕು. ಇದಕ್ಕೆ ಸ್ಥಳೀಯ ಜನರು ಹಾಗೂ ಪ್ರವಾಸಿಗರ ಸಹಕಾರ ಅತ್ಯಗತ್ಯ. ಏಕ ಬಳಕೆ ಪ್ಲಾಸ್ಟಿಕ್ ಕಡ್ಡಾಯವಾಗಿ ನಿಷೇಧಿಸಬೇಕು. ಅಲ್ಲದೆ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಯಾವುದೇ ಕಾರಣಕ್ಕೂ ಪ್ರವಾಸಿ ತಾಣಕ್ಕೆ ತರಬಾರದು. ಈ ಮೂಲಕ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಪ್ರವಾಸಿಗರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ನಡೆದ ರಾಯಲ್ ಎನ್ ಫೀಲ್ಡ್ ಬೈಕ್ ರ್ಯಾಲಿಯಲ್ಲಿ 25ಕ್ಕೂ ಹೆಚ್ಚು ಬೈಕ್ ಸವಾರರು ಭಾಗಿಯಾಗಿದ್ದರು. ಹನುಮಂತಪ್ಪ ವೃತ್ತದಿಂದ ಆರಂಭಗೊoಡ ಬೈಕ್ ರ್ಯಾಲಿ ಎಂ.ಜಿ.ರಸ್ತೆ, ಐ.ಜಿ.ರಸ್ತೆ, ಆರ್.ಜಿ.ರಸ್ತೆ, ಅಲ್ಲಂಪುರ, ಕೈಮರ ಚೆಕ್ ಪೋಸ್ಟ್ ಮಾರ್ಗವಾಗಿ ಸೀತಾಳಯ್ಯನಗಿರಿ ತಲುಪಿತು.
ಸೀತಾಳ ಯ್ಯನ ಗಿರಿಯಲ್ಲಿ ಬೈಕ್ ಸವಾರರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಉಪಹಾರದ ಬಳಿಕ ರ್ಯಾಲಿ ಯಲ್ಲಿ ಭಾಗಿಯಾದ ನಾಲ್ವರು ಸವಾರರಿಗೆ ಲಕ್ಕಿಡಿಪ್ ಮೂಲಕ ಬಹುಮಾನ ನೀಡಲಾಯಿತು.ಬಳಿಕ ಬೈಕ್ ರ್ಯಾಲಿ ಮುಳ್ಳಯ್ಯನಗಿರಿಯವರೆಗೆ ಸಾಗಿತು.
ವಿಜಯವಾಣಿ ಸ್ಥಾನಿಕ ಸಂಪಾದಕ ಶೃಂಗೇರಿ ಚಂದ್ರಶೇಖರ್,ಟ್ರಾಫಿಕ್ ಪಿಎಸೈ ಧನಂಜಯ್, ಲುಕ್ ಬುಕ್ ಸಂಸ್ಥೆಯ ವಿನೋದ್ ಕುಮಾರ್ ಮತ್ತಿತರರಿದ್ದರು.
—————–—ಸುರೇಶ್