ಮೂಡಿಗೆರೆ:ಕಾಂಗ್ರೆಸ್ ಪುರಸಭೆಯ ಆಡಳಿತದ ಚುಕ್ಕಾಣಿ ಹಿಡಿದಿರುವುದನ್ನು ಸಹಿಸದ ಬಿಜೆಪಿಗರು ಸುಖಾಸುಮ್ಮನೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆಂದು ಪ.ಪಂ. ಹಿರಿಯ ಸದಸ್ಯ ಕೆ.ವೆಂಕಟೇಶ್ ತಿಳಿಸಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ.ಪಂ.ಆಸ್ತಿಯನ್ನು ಹಿರಿಯ ಸದಸ್ಯರಿಬ್ಬರು ಅಕ್ರಮವಾಗಿ ಖಾತೆ ಮಾಡಿಸಿಕೊಟ್ಟಿದ್ದಾರೆಂದು ಇತ್ತೀಚೆಗೆ ಪ.ಪಂ. ಸದಸ್ಯ ಮನೋಜ್ ಕುಮಾರ್ ಸೇರಿದಂತೆ ಬಿಜೆಪಿ ಮುಖಂಡರು ಮಾದ್ಯಮಕ್ಕೆ ನೀಡಿರುವ ಮಾಹಿತಿಯಲ್ಲಿ ಯಾವುದೇ ಹುರುಳಿಲ್ಲ.ಅದು ಶುದ್ಧ ಸುಳ್ಳು ಎಂದು ಕೆ.ವೆಂಕಟೇಶ್ ಸ್ಪಷ್ಟನೆ ನೀಡಿದರು.
ಹೊಸ ಬಡಾವಣೆಗೆ ಅನುಮತಿ ಹಾಗೂ ಭೂ ಪರಿವರ್ತನೆ ಆದೇಶವನ್ನು ಜಿಲ್ಲಾಧಿಕಾರಿಗಳು ಮಾಡಿದ ನಂತರವೇ ಉಳಿದ ನಿಯಮಗಳನ್ನು ಪ.ಪಂ.ಪಾಲಿಸುತ್ತದೆ. ಪ.ಪಂ.ನಲ್ಲಿ ನಡೆಯುತ್ತಿರುವ ಅಭಿವೃದ್ದಿಯನ್ನು ಸಹಿಸದ ವಿಪಕ್ಷದ ಕೆಲವರು ಸುಳ್ಳು ಆರೋಪ ಮಾಡಿದ್ದಾರೆ. ಕಸಬಾ ಹೋಬಳಿ ಸರ್ವೆ ನಂ 54/2ರಲ್ಲಿ 1.10 ಎಕರೆ ಜಾಗವನ್ನು ಮುಸ್ತಾಕ್ ಅಹಮ್ಮದ್ ಹಾಗೂ ಸರ್ವೆ ನಂ 135/1ರಲ್ಲಿ 1.12 ಎಕರೆ ಜಾಗವನ್ನು ಜಾಹಿದ್ ಹುಸೇನ್ ಅವರು ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಮಾಡಿಕೊಂಡು, ಅದನ್ನು ಅಭಿವೃದ್ಧಿಪಡಿಸಿ ನಿರಾಕ್ಷೇಪಣಾ ಪತ್ರಕ್ಕೆ ಜಾಗದ ಮಾಲಿಕರು ಪ.ಪಂ.ಗೆ 2014ರಲ್ಲಿ ಅರ್ಜಿ ಸಲ್ಲಿಸಿದ್ದರು.
ಆಗಲೇ ಪ.ಪಂ.ನಿoದ ಎನ್.ಒ.ಸಿ ನೀಡಲಾಗಿದೆ. ನಿಯಮದ ಪ್ರಕಾರ ಶೇ.4ರಷ್ಟು ಸರ್ಕಾರಕ್ಕೆ ಕಟ್ಟಬೇಕಾದ ಹಣವನ್ನು ಸಂದಾಯ ಮಾಡಿದ್ದಾರೆ. ಆಗ ಪ.ಪಂ.ನಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಕಳೆದ ಜೂ.20ರಂದು ಆಡಳಿತಾಧಿಕಾರಿ ಸಭೆ ನಡೆಸಿ ಖಾತೆ ಮಾಡಿಕೊಡಲು ಅನುಮೋದನೆ ನೀಡಿದ್ದಾರೆ. ನಡಾವಳಿಯಲ್ಲಿ ಆಡಳಿತಾಧಿಕಾರಿಯ ಸಹಿ ಪಡೆಯದಿರುವುದು ಮುಖ್ಯಾಧಿಕಾರಿಗಳ ತಪ್ಪು. ಅದಕ್ಕೂ ಪ.ಪಂ.ಸದಸ್ಯರಿಗೂ ಯಾವುದೇ ಸಂಭ0ದವಿಲ್ಲ ಎಂದರು.
ಬಡಾವಣೆಗಳ ಅಭಿವೃದ್ದಿಗೆ ಈಗ ಶೇ.40ರಷ್ಟು ಮಾತ್ರ ಪ.ಪಂ.ಅನುಮೋದನೆ ನೀಡಿದೆ. ಬಡಾವಣೆ ಪೂರ್ತಿ ಅಭಿವೃದ್ದಿಯಾದ ಬಳಿಕ ಜಿಲ್ಲಾಧಿಕಾರಿಗಳ ಆದೇಶದಂತೆ ಪೂರ್ಣ ಪ್ರಮಾಣದ ಅನುಮೋದನೆ ನೀಡಲಾಗುವುದು. ಇದರಲ್ಲಿ ಯಾವುದೇ ಲೋಪವೂ ಆಗಿರುವುದಿಲ್ಲ. ಅಲ್ಲದೆ ಖಾತೆ ಮಾಡುವಾಗ ಪಂಚಾಯಿತಿ ಸದಸ್ಯರ ಹಾಗೂ ಸಾರ್ವಜನಿಕರ ತಕರಾರು ಇದ್ದರೆ ಮಾತ್ರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಆದರೆ ಯಾವುದೇ ತಕರಾರು ಇಲ್ಲದಿದ್ದರೆ ಆಡಳಿತಾಧಿಕಾರಿ ನೇರವಾಗಿ ಖಾತೆ ಮಾಡಿಕೊಡಬಹುದು. ಇಲ್ಲಿ ಯಾವ ಅಕ್ರಮವೂ ನಡೆದಿಲ್ಲ ಆದರೂ ಆಡಳಿತಾರೂಢ ಕಾಂಗ್ರೆಸ್ ಗೆ ಕೆಟ್ಟ ಹೆಸರು ತರಲು ಹುನ್ನಾರ ನಡೆಸಲಾಗಿದೆ ಎಂದು ಹೇಳಿದರು.
ಬಸ್ಸ್ಟಾಂಡ್ ಬಳಿ 2 ಹೂವಿನ ಅಂಗಡಿಯಿoದ ಹಿರಿಯ ಸದಸ್ಯರೊಬ್ಬರು ತಲಾ 50ಸಾವಿರ ಪಡೆದು ಕಬಳಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಹೂವಿನ ಅಂಗಡಿಯವರು ನೀಡಿದ ಹಣ ಪ.ಪಂ.ಗೆ ಜಮಾ ಆಗಿದೆ ಎಂದು ಸ್ಪಷ್ಟಪಡಿಸಿದರು.ಕಾಂಗ್ರೆಸ್ ವಾಮಮಾರ್ಗದಲ್ಲಿ ಅಧಿಕಾರ ಹಿಡಿದಿದ್ದಾರೆ ಎಂದು ಬಿಜೆಪಿಯವರು ಆರೋಪಸಿದ್ದಾರೆ. ಕಾಂಗ್ರೆಸ್ ಯಾವತ್ತೂ ವಾಮ ಮಾರ್ಗ ಹಿಡಿದಿಲ್ಲ. ಅದೇನಿದ್ದರೂ ಬಿಜೆಪಿಯವರಿಗೆ ಬಿಟ್ಟದ್ದು ಎಂದು ತಿರುಗೇಟು ನೀಡಿದರು.
ಸುಜಾತ ಎಂಬುವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆಂದು ಕೂಡ ಆರೋಪ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಪ.ಪಂ. ಅಧ್ಯಕ್ಷರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಒಂದು ಅಡಿ ಕೂಡ ಪ.ಪಂ. ಆಸ್ತಿ ಮಾರಾಟ ಮಾಡಲು ನಾವು ಬಿಟ್ಟಿಲ್ಲ ಎಂದ ಅವರು, ತತ್ಕೋಳ ರಸ್ತೆ ಅಭಿವೃದ್ಧಿ ಹಾಗೂ ಪುರಸಭೆ ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ಧಿ ಮಾಡಲು ಶಾಸಕಿ ನಯನಾ ಮೋಟಮ್ಮ ಶ್ರಮಿಸುತ್ತಿದ್ದಾರೆ. ಅಲ್ಲದೇ ಶೌಚಾಲಯ, ಕಸದ ಸಮಸ್ಯೆ, ಕುಡಿಯುವ ನೀರು ಸೇರಿದಂತೆ ಇತರೇ ಅಭಿವೃದ್ಧಿಗೆ 5 ಕೋಟಿ ಅನುದಾನ ಶಾಸಕರ ಶ್ರಮದಿಂದ ಬಿಡುಗಡೆಯಾಗಿದೆ. ಮುಂದಿನ ದಿನದಲ್ಲಿ ಪಟ್ಟಣದ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.
ಪಟ್ಟಣದ ಕೆ.ಎಂ.ರಸ್ತೆಯ ಎರಡೂ ಕಡೆ ತಲಾ 35 ಅಡಿ ರಸ್ತೆ ವಿಸ್ತರಣೆಯಾಗಲಿದೆ.ಅಲ್ಲಿರುವ ಕುಡಿಯುವ ನೀರಿನ ಪೈಪ್ ತೆರೆವುಗೊಳಿಸಲು ಹೆದ್ದಾರಿ ಪ್ರಾಧಿಕಾರದಿಂದ ಆದೇಶ ಬಂದಿದೆ. ಕಳೆದ ವರ್ಷ ಪ.ಪಂ.ನಿoದ ಎಂ.ಜಿ.ರಸ್ತೆ ಅಗಲೀಕರಣಗೊಳಿಸಲು ಮುಂದಾದಾಗ ಕೆಲ ವರ್ತಕರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು.
ತಡೆಯಾಜ್ಞೆ ಈಗ ತೆರವಾಗಿದೆ. ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಎಂ.ಜಿ.ರಸ್ತೆ ಅಗಲೀಕರಣಕ್ಕೆ ಸದ್ಯದಲ್ಲೇ ಶಾಸಕಿ ನಯನಾ ಮೋಟಮ್ಮ ಸಭೆ ಕರೆದು ತೀರ್ಮಾನಿಸಲಿದ್ದಾರೆ. ಅಮೃತ್ ಯೋಜನೆಯಲ್ಲಿ 19.5ಕೋಟಿ ರೂ ಅನುದಾನ ಬಿಡುಗಡೆಯಾಗಿದೆ.ಅದನ್ನು ಎಕ್ಸ್ಪ್ರಸ್ ವೇ ಕುಡಿಯುವ ನೀರಿಗೆ ಮತ್ತು ಪಟ್ಟಣದಲ್ಲಿ ಬ್ರಹತ್ ಪಾರ್ಕ್ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು
–ಗೀತಾ ರಂಜನ್ ಅಜಿತ್ ಕುಮಾರ್,
ಅಧ್ಯಕ್ಷರು, ಪ.ಪಂ.
ಪ.ಪo. ಉಪಾಧ್ಯಕ್ಷ ಹೆಚ್.ಪಿ.ರಮೇಶ್, ಸದಸ್ಯ ಜಿ.ಬಿ.ಧರ್ಮಪಾಲ ಉಪಸ್ಥಿತರಿದ್ದರು.