ಮೈಸೂರು-‘ಸ್ವಾವಲಂಬಿ ಸ್ತ್ರೀ’-ಉಚಿತ ಆಟೋರಿಕ್ಷಾ ತರಬೇತಿ ಕಾರ್ಯಕ್ರಮದ ಯಶಸ್ವಿ ಮುಕ್ತಾಯ

ಮೈಸೂರು-ತಳಿರು ಫೌಂಡೇಶನ್,ರೋಟರಿ ಮೈಸೂರು ಮತ್ತು ರೋಟರಿ ಮೈಸೂರು ಈಸ್ಟ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉಚಿತ ಆಟೋರಿಕ್ಷಾ ತರಬೇತಿ ಕಾರ್ಯಕ್ರಮದ ಯಶಸ್ವಿ ಮುಕ್ತಾಯ ಸಂಭ್ರಮಾಚರಣೆ’ಸ್ವಾವಲಂಬಿ ಸ್ತ್ರೀ’ ಕಾರ್ಯಕ್ರಮ ನಡೆಯಿತು.

ಪಡುವಾರಹಳ್ಳಿ ವಿನಾಯಕನಗರದ ಎನ್‌.ಆರ್ ಸಮುದಾಯ ಅಭಿವೃದ್ಧಿ ಕೇಂದ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿಕ್ಷಣದ ಕೊರತೆ,ಚಿಕ್ಕ ವಯಸ್ಸಿನಲ್ಲಿಯೆ ವಿವಾಹ,ಜೀವನ ಕೌಶಲ್ಯ ಗಳ ಕೊರತೆಯಿಂದ ಕಷ್ಟ ಪಡುತ್ತಿದ್ದ ಆರ್ಥಿಕ ವಾಗಿ ಹಿಂದುಳಿತ 11 ಮಹಿಳೆಯರಿಗೆ ಆಟೋ ರಿಕ್ಷಾ ಚಾಲನೆ ತರಭೇತಿ ನೀಡಲಾಗಿದೆ.

ಈ ಯೋಜನೆಯಲ್ಲಿ ಆಟೋ ರಿಕ್ಷಾ ಚಾಲನೆ ತರಬೇತಿ ಜೊತೆಗೆ ಆರ್ಥಿಕ ಸಾಕ್ಷರತೆ, ಆತ್ಮರಕ್ಷಣೆ, ಸಂವಹನ ಕೌಶಲ ಮತ್ತು ಸಮಾಲೋಚನೆ ಸೇರಿದಂತೆ ಅಗತ್ಯ ಜೀವನ ಕೌಶಲ್ಯಗಳ ತರಬೇತಿ ಕೊಡಲಾಗಿದೆ. ಈ ಮಹಿಳೆಯರು ಆರ್‌.ಟಿ.ಒ ಪರವಾನಗಿ, ಬ್ಯಾಡ್ಜ್ ಮತ್ತು ಸಮವಸ್ತ್ರ ಹೊಂದಿದ್ದು, ಈಗಾಗಲೇ ಎರಡನೇ ಬ್ಯಾಚ್ ಕೂಡ ಸಿದ್ಧವಾಗಿದೆ. ಈ ಬ್ಯಾಚ್ ನಲ್ಲಿ 12 ಮಂದಿ ಮಹಿಳೆಯರು ತರಬೇತಿ ಪಡೆಯಲು ಸಜ್ಜಾಗಿದ್ದಾರೆ.

ತರಭೇತಿ ಪಡೆದ ಮಹಿಳೆಯರು ಮಾತನಾಡಿ ಗ್ರಾಹಕರ ಜೊತೆ ಹೇಗೆ ಮಾತನಾ ಡಬೇಕು.ಬಾಡಿಗೆಗೆ ತೆರಳುವ ಸ್ಥಳ ಸುರಕ್ಷಿತವೇ,ಗ್ರಾಹಕನ ಹಾವಭಾವ ಎಲ್ಲವನ್ನೂ ನೋಡಿ ನಂತರ ಬಾಡಿಗೆಗೆ ತೆರಳಬೇಕೋ ಇಲ್ಲವೋ ಎಂಬುದನ್ನ ನಿರ್ಧರಿಸುತ್ತೇವೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಎನ್‌.ಆರ್ ಫೌಂಡೇಶನ್‌ನ ಅಧ್ಯಕ್ಷ ಆರ್.ಗುರು ಅವರು ಮಹಿಳೆಯರ ಆಟೋ ಚಾಲನೆಗೆ ಹಸಿರು ನಿಶಾನೆ ತೋರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ,“ಮಹಿಳೆಯರನ್ನು ಸಬಲೀಕರಣಗೊಳಿಸುವುದು ಎಂದರೆ ಜೀವನ ಕೌಶಲ ಕಲಿಸುವುದಷ್ಟೇ ಅಲ್ಲ, ಅವರ ಸಾಮರ್ಥ್ಯವನ್ನು ಹೆಚ್ಚಿಸುವುದು, ಬದುಕನ್ನು ಬದಲಿಸುವುದು.

ಸ್ವಾವಲಂಬಿ ಸ್ತ್ರೀ ಯೋಜನೆ ಮೂಲಕ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಸ್ವತಂತ್ರವಾಗಿ ಬದುಕುವಂತೆ ಮಾಡಿರುವುದು ನಮಗೆ ಸಂತೋಷ ಕೊಟ್ಟಿದೆ” ಎಂದು ಹೇಳಿದರು.

ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ 11 ಮಹಿಳೆಯರಲ್ಲಿ ಒಬ್ಬರಾದ ರೇಖಾ ಅವರು, “ನನ್ನೂರು ಪಾಂಡವಪುರ. ಮೂರು ಹೆಣ್ಣು ಮಕ್ಕಳಿದ್ದಾರೆ. ಪತಿ ತೀರಿಕೊಂಡಿದ್ದಾರೆ. ನನ್ನ ವಯಸ್ಸಾದ ತಾಯಿ ನನ್ನ ಜೊತೆ ಇದ್ದಾರೆ. ನಾನು ಓದಿದ್ದು 5ನೇ ಕ್ಲಾಸು. ಹಣ ಸಂಪಾದನೆಗೆ ಬಹಳ ಕಷ್ಟ ಪಡುತ್ತಿದ್ದೆ. ಬಂಧು ಬಳಗ ದೂರ ಇಟ್ಟಿದ್ದಾರೆ. ಈ ಹೊತ್ತಲ್ಲಿ ಸ್ವಾವಲಂಬಿ ಸ್ತ್ರೀ ಕಾರ್ಯಕ್ರಮದ ಕುರಿತು ತಿಳಿದು ಭಾಗವಹಿಸಿದೆ. ಈಗ ನಾನು ತುಂಬು ವಿಶ್ವಾಸದಿಂದ ಆಟೋ ಓಡಿಸಬಲ್ಲೆ. ಇಲ್ಲಿ ದೊರೆತಿರುವ ಜೀವನ ಕೌಶಲಗಳಿಂದ ಭಯ ಹೋಗಿ, ಧೈರ್ಯ ಬಂದಿದೆ” ಎಂದು ಹೇಳಿದರು.

ಮತ್ತೊಬ್ಬ ಮಹಿಳೆ ಮಾನಸ ಅವರು, “ಅನಿವಾರ್ಯ ಕಾರಣಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಾಗಲಿಲ್ಲ. ಮೊದಲು ಪೆಟ್ರೋಲ್ ಬಂಕ್‌ ನಲ್ಲಿ ಕೆಲಸ ಮಾಡುತ್ತಿದ್ದೆ. ನಂತರ ಸ್ವಿಗ್ಗಿ ಡೆಲಿವರಿ ಆರಂಭಿಸಿದೆ. ನಾನು ಮದುವೆಯಾಗಿಲ್ಲ. ಏಕಾಂಗಿಯಾಗಿ ಉಳಿಯುವ ನಿರ್ಧಾರ ಮಾಡಿದ್ದೇನೆ. ನಾನು ಹಲವು ಆಟೋಗಳ ಮಾಲಕಿಯಾಗಿ, ನನ್ನಂತಹ ಅನೇಕ ಮಹಿಳೆಯರಿಗೆ ಚಾಲನೆ ಅವಕಾಶ ಒದಗಿಸುವ ಆಸೆ ಇಟ್ಟುಕೊಂಡಿದ್ದೇನೆ” ಎಂದು ಹೇಳಿದರು.

ತಳಿರು ಪ್ರತಿಷ್ಠಾನದ ಸಂಸ್ಥಾಪಕಿ ಮತ್ತು ನಿರ್ದೇಶಕಿ ಡಾ.ಚಿತ್ರಾ ಎ.ಆರ್. ಅವರು ಮಾತನಾಡಿ, “ಶಿಕ್ಷಣ ಒದಗಿಸುವ ಮೂಲಕ ಮತ್ತು ಕೌಶಲ್ಯ ಅಭಿವೃದ್ಧಿ ಮಾಡುವ ಮೂಲಕ ಮಹಿಳೆಯರಿಗೆ ಶಕ್ತಿ ತುಂಬುವ ನಮ್ಮ ಉದ್ದೇಶಕ್ಕೆ ಪೂರಕವಾಗಿ ಈ ಯೋಜನೆ ಆಯೋಜನೆಗೊಂಡಿದೆ. ಸ್ವಾವಲಂಬಿ ಸ್ತ್ರೀ ಯೋಜನೆಯು ಭರವಸೆ ತುಂಬುವ ಕಾರ್ಯಕ್ರಮವಾಗಿದ್ದು, ಸೂಕ್ತ ಬೆಂಬಲ ಮತ್ತು ತರಬೇತಿ ಸಿಕ್ಕಿದರೆ ಮಹಿಳೆಯರು ಎಲ್ಲಾ ಸವಾಲುಗಳನ್ನು ಸೋಲಿಸಿ ಅವರ ಭವಿಷ್ಯವನ್ನು ರೂಪಿಸಿಕೊಳ್ಳಬಲ್ಲರು ಎಂಬುದಕ್ಕೆ ಪುರಾವೆಯಾಗಿದೆ” ಎಂದು ಹೇಳಿದರು.

ರೋಟರಿ ಮೈಸೂರು ಅಧ್ಯಕ್ಷರಾದ ರೊಟೇರಿಯನ್ ಪ್ರವೀಣ್ ಎನ್ ಅವರು, “ಆರ್ಥಿಕವಾಗಿ ಹಿಂದುಳಿದ ಹಲವು ಮಹಿಳೆಯರು ಇಂದು ಹೊಸ ಪ್ರಯಾಣ ಆರಂಭಿಸುತ್ತಿದ್ದಾರೆ. ಸ್ವಾವಲಂಬಿ ಸ್ತ್ರೀ ಆಟೋ ರಿಕ್ಷಾ ಚಾಲನೆ ತರಬೇತಿ ಕಾರ್ಯಕ್ರಮವು ನಾವು ಜೊತೆ ಸೇರಿ ದುಡಿದಾಗ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮೈಸೂರು ಈಸ್ಟ್ನ ರೋಹಿತ್ ಸುಬ್ಬಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

———————--ಮಧುಕುಮಾರ್

Leave a Reply

Your email address will not be published. Required fields are marked *

× How can I help you?