ಎಚ್.ಡಿ.ಕೋಟೆ:ತಾಲೂಕನ್ನು ಅಭಿವೃದ್ಧಿಯ ಕಡೆ ಕೊಂಡೊಯ್ಯುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಶಾಸಕರು ಕಾರ್ಯೋನ್ಮುಖವಾಗುತ್ತಿಲ್ಲ. ತಾಲೂಕಿನಾದ್ಯಂತ ಇರುವ ದಲಿತರ ಭೂ ವ್ಯಾಜ್ಯಗಳನ್ನು ಬಗೆಹರಿಸುವಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಟ್ಟೆಮನುಗನಹಳ್ಳಿ ಸರ್ವೆ ನಂಬರ್ 78ರ ಜಮೀನಿಗೆ ರಸ್ತೆ ಬಿಡಿಸಲು ತಹಶೀಲ್ದಾರ್ ರವರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಿಲ್ಲ. ಇದರಿಂದ ರೈತ ಬೆಳೆದ ಬೆಳೆಗಳ ಸಾಗಾಣಿಕೆಗೆ ತೊಂದರೆಯಾಗಿ ರೈತನಿಗೆ ಆರ್ಥಿಕ ನಷ್ಟವಾಗಿ ಚಿಂತಿತನಾಗಿದ್ದಾನೆ.
ಹಂಪಾಪುರ ಹೋಬಳಿ ಕ್ಯಾತನಹಳ್ಳಿ ಗ್ರಾಮದ ಸರ್ವೆ ನಂಬರ್ 78/178 ರ ಜಮೀನಿನ ವ್ಯಾಜ್ಯ ನ್ಯಾಯಾಲಯದಲ್ಲಿದ್ದರೂ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಜಿಪಿಎ ಹೋಲ್ಡರ್ ಹಾಗೂ ಕಾಂಗ್ರೆಸ್ ಮುಖಂಡ ಬೈಪಾಸ್ ಮಂಜು ಪರವಾಗಿ ತಹಶೀಲ್ದಾರ್ ಕೆಲಸ ಮಾಡಿ ಮೂಲ ಮಾಲೀಕನಿಗೆ ಅನ್ಯಾಯ ಮಾಡಿದ್ದಾರೆ.
ಪಟ್ಟಣದ ವಾರಸುದಾರರಿಲ್ಲದ ಸರ್ವೆ ನಂಬರ್ 82ರ 40 ಎಕರೆ ಜಮೀನನ್ನು ಭೂ ಮಾಫಿಯಾದವರ ಒತ್ತಡಕ್ಕೆ ಮಣಿದು ನಕಲಿ ದಾಖಲೆ ಸೃಷ್ಟಿಸಿ ಪಟ್ಟಭದ್ರ ಹಿತಾಸಕ್ತಿಗಳು ಜಮೀನು ಕಬಳಿಸಲು ಪ್ರಮುಖ ಪಾತ್ರವಹಿಸಿದ್ದಾರೆ .ಇದಲ್ಲದೇ ತಾಲೂಕಿನಲ್ಲಿ ಇನ್ನಷ್ಟು ಹಗರಣ ನಡೆಯಲು ಕಾರಣರಾಗಿದ್ದಾರೆ.ಆದ್ದರಿಂದ ಇವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು.
ಪ್ರತಿಭಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಹುಣಸೂರು ಉಪವಿಭಾಗಾಧಿಕಾರಿ ಕಚೇರಿಯ ಅಧಿಕಾರಿಗಳು ಪ್ರತಿಭಟನಾ ನಿರತರ ಮನವಿ ಸ್ವೀಕರಿಸಿ ನಿಮ್ಮ ಅಹವಾಲನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಮೊಟಕುಗೊಳಿಸಿದರು.
—————-ಶಿವು ಕೋಟೆ