ಮೂಡಿಗೆರೆ:ಮಹಿಳೆಯರಿಗೆ ಆತ್ಮವಿಶ್ವಾಸ ತುಂಬುವುದರಿಂದ ಅವರು ಉದ್ಯಮದಲ್ಲಿ ಆರ್ಥಿಕ ಪ್ರಗತಿ ಹೊಂದಲು ಸಾಧ್ಯ ಎಂದು ಮೂಡಿಗೆರೆ ತಾಲ್ಲೂಕು ಒಕ್ಕಲಿಗರ ಸಂಘದ ಮಹಿಳಾ ಅಧ್ಯಕ್ಷೆ ಕಲಾವತಿ ಕೆಂಬತ್ಮಕ್ಕಿ ಹೇಳಿದರು.
ಅವರು ಮೂಡಿಗೆರೆ ರೈತ ಭವನದಲ್ಲಿ ತಾಲ್ಲೂಕು ಒಕ್ಕಲಿಗರ ಶ್ರೀಸಾಯಿ ಗ್ರೂಪ್ ವತಿಯಿಂದ ಆಯೋಜಿಸಿದ್ದ ಮಲೆನಾಡು ಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.’
ಮಹಿಳೆಯರು ಸಬಲೀಕರಣಗೊಂಡು ಉದ್ಯಮ ನಡೆಸುವ ಹಂತಕ್ಕೆ ತಲುಪಿದ್ದಾರೆ.ಪುರುಷರಂತೆ ಮಹಿಳೆಯರನ್ನು ಕೂಡ ಸಮಾನವಾಗಿ ಕಂಡು ಅವರ ಉದ್ಯಮವನ್ನು ಪ್ರೋತ್ಸಾಹಿಸುವ ಕಾರ್ಯ ಇಂದಿನ ಪರಿಸ್ಥಿತಿಯಲ್ಲಿ ಅಗತ್ಯವಾಗಿದೆ’ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘದ ಉಪಾಧ್ಯಕ್ಷೆ ಮೀನಾಕ್ಷಿ ಲಕ್ಷ್ಮಣ್ ಗೌಡ, ‘ಎಲ್ಲಾ ಮಹಿಳಾ ಉದ್ಯಮಿಗಳನ್ನು ಒಂದೆಡೆ ಸೇರಿಸಿ ಅವರ ಉತ್ಪನ್ನಗಳನ್ನು ಮಲೆನಾಡು ಹಬ್ಬದಲ್ಲಿ ಮಾರಾಟ ಮಾಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಅಭಿವೃದ್ದಿಗೊಳಿಸಲು ಪ್ರಯತ್ನಿಸಲಾಗುತ್ತಿದೆ.ಬದುಕು ಕಟ್ಟಿಕೊಳ್ಳುವ ಮಹಿಳಾ ಉದ್ಯಮಿಗಳಿಗೆ ಮಲೆನಾಡು ಹಬ್ಬ ಸ್ಪೂರ್ತಿ ನೀಡಿದೆ’ಎಂದರು.
ಮಲೆನಾಡು ಹಬ್ಬದಲ್ಲಿ ಮಹಿಳೆಯರ ಸೀರೆ,ವಿವಿಧ ಮಾದರಿಯ ಉಡುಗೆ ತೊಡುಗೆ,ವಿವಿಧ ಆಹಾರ ಶೈಲಿ,ಕೇಕ್ ,ಸ್ಯಾಂಡ್ವಿಚ್, ಯಾಂತ್ರೀಕತೆಯ ಕೃಷಿ ಉಪಕರಣಗಳು,ಚನ್ನಪಟ್ಟಣದ ಗೊಂಬೆಗಳು,ಹೀಗೆ ಹತ್ತು ಹಲವು ಉತ್ಪನ್ನಗಳು ಮಳಿಗೆಗಳಲ್ಲಿ ಇದ್ದು ಉತ್ತಮ ಬೇಡಿಕೆ ಕಂಡು ಬಂತು.
ತಮಿಳುನಾಡು,ಕೋಲ್ಕತ್ತಾ, ಮೈಸೂರು, ಬೆಂಗಳೂರು,ಶಿವಮೊಗ್ಗ, ಮಂಗಳೂರು, ಶೃಂಗೇರಿ, ಮೂಡಿಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಮಹಿಳಾ ಉದ್ಯಮಿಗಳು ಮಲೆನಾಡು ಹಬ್ಬದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದರು.
ಸಮಾರಂಭದಲ್ಲಿ ಮಹಿಳಾ ಸಂಘದ ಪದಾಧಿಕಾರಿಗಳಾದ ಅನ್ನಪೂರ್ಣ ನರೇಶ್,ಶೀಲಾ ಸುಂದರೇಶ್,ಸೋಫಿಯಾ ಸುರೇಶ್, ವೀಣಾರತ್ನಾಕರ್, ಭಾರತೀಚಂದ್ರಶೇಖರ್ ಮತ್ತಿತರರು ಇದ್ದರು.
—————-ಆಶಾ ಸಂತೋಷ್