ಕೆ.ಆರ್.ಪೇಟೆ- ಕಳೆದ 11ವರ್ಷಗಳಿಂದ ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿಶ್ವನಾಯಕ ನಮ್ಮೆಲ್ಲರ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರ ಜನಪರವಾದ ದಕ್ಷ ಆಡಳಿತಕ್ಕೆ ಶಕ್ತಿ ತುಂಬಲು, ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸಲು ಅನುಕೂಲವಾಗುವಂತೆ ತಾಲ್ಲೂಕಿನ ಪ್ರತಿಯೊಬ್ಬರೂ ಬಿಜೆಪಿ ಸದಸ್ಯತ್ವ ಪಡೆಯಬೇಕು ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಮೊಬೈಲ್ ಮೂಲಕ ರೈತರೊಬ್ಬರಿಗೆ ಸದಸ್ಯತ್ವ ನೀಡುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸದಸ್ಯತ್ವ ಪಡೆಯುವ ಮೂಲಕ ಬಲಿಷ್ಠ ಭಾರತಕ್ಕಾಗಿ ಹಗಲು ರಾತ್ರಿ ದುಡಿಯುತ್ತಿರುವ ನರೇಂದ್ರಮೋದಿ ಅವರ ಕೈಬಲ ಪಡಿಸಬೇಕು ಎಂದು ಮನವಿ ಮಾಡಿದರು.
ಮೋದಿಯವರು ರೈತರಿಗೆ ಫಸಲ್ ಭೀಮಾ ಯೋಜನೆ, ಪಿ.ಎಂ.ಕಿಸಾನ್ ಯೋಜನೆ, ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ವಾರ್ಷಿಕ ಕೇವಲ 12ರೂಗಳನ್ನು ನೀಡಿ ಬ್ಯಾಂಕ್ ಉಳಿತಾಯ ಖಾತೆ ಮೂಲಕ ವಿಮೆ ಮಾಡಿಸಿದರೆ 2ಲಕ್ಷ ರೂ ಅಪಘಾತ ವಿಮೆ ಪರಿಹಾರ ಸಿಗುತ್ತದೆ. ಅದೇ ಉಳಿತಾಯ ಖಾತೆ ಮೂಲಕ ವಾರ್ಷಿಕ 350ರೂ ರೂ ವಿಮಾ ಕಂತು ಪಾವತಿಸಿದರೆ ಸ್ವಾಭಾವಿಕ ಮರಣಕ್ಕೂ ಎರಡು ಲಕ್ಷ ರೂ ನಾಮಿನಿದಾರರಿಗೆ ವ್ಯಕ್ತಿ ಮೃತಪಟ್ಟ ಒಂದು ವಾರದೊಳಗೆ ನೀಡಲಾಗುತ್ತದೆ. ಇಂತಹ ವಿಮಾ ಸೌಲಭ್ಯ ವಿಶ್ವದಲ್ಲಿ ಯಾವುದೇ ದೇಶವೂ ನೀಡುತ್ತಿಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇಂತಹ ಅತ್ಯುತ್ತಮ ಸೇವೆ ನೀಡುತ್ತಿರುವ ಮೋದಿ ಅವರು ದೇಶದ ಜನತೆಗೆ ಉತ್ತಮ ಆರೋಗ್ಯ ನೀಡುವ ಉದ್ದೇಶದಿಂದ ಜಲ ಜೀವನ್ ಮಿಷನ್ ಯೋಜನೆ ಅಡಿ ನದಿ ಮೂಲದಿಂದ ಶುದ್ದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯನ್ನು ದೇಶದ ಪ್ರತಿ ಗ್ರಾಮಕ್ಕೆ ಹಾಗೂ ಪ್ರತಿ ನಗರಕ್ಕೆ ಜಾರಿಗೊಳಿಸಿದ್ದಾರೆ.
ಹೆಣ್ಣು ಮಕ್ಕಳ ಗೌರವದ ಹಾಗೂ ಸ್ವಾಭಿಮಾನದ ಪ್ರಶ್ನೆಯಾಗಿದ್ದ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳುವ ಯೋಜನೆಯನ್ನು ಜಾರಿ ಮಾಡಿ ಕೋಟಿ ಕೋಟಿ ಹೆಣ್ಣು ಮಕ್ಕಳ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದ್ದಾರೆ. ದೇಶದ 80ಕೋಟಿ ಜನತೆಗೆ ಕೋವಿಡ್-19 ಅವಧಿಯಿಂದ ಉಚಿತ ಪಡಿತರ ವಿತರಣೆ ಮಾಡುತ್ತಿದ್ದಾರೆ. ಇದಲ್ಲದೆ ಜನೌಷಧ ಕೇಂದ್ರಗಳನ್ನು ತೆರೆದು ಬಡವರಿಗೆ ಕಡಿಮೆ ದರದಲ್ಲಿ ಮೆಡಿಷನ್ ಸಿಗುವಂತೆ ಮಾಡಿದ್ದಾರೆ ಎಂದರು.
ಹೀಗೆ ಬಡವರು,ರೈತರು,ಜನಸಾಮಾನ್ಯರ ಪರವಾಗಿ ಅತ್ಯುತ್ತಮ ಆಡಳಿತ ನೀಡುತ್ತಿರುವ ಮೋದೀಜಿ ಅವರ ನೇತೃತ್ವದಲ್ಲಿ ದೇಶವು ಪ್ರಗತಿಯ ದಿಕ್ಕಿನಲ್ಲಿ ಸಾಗುತ್ತಿದೆ. ಹಾಗಾಗಿ ದೇಶದ ಜನತೆ ಹಾಗೂ ತಾಲ್ಲೂಕಿನ ಜನತೆ ಬಿಜೆಪಿ ಸದಸ್ಯತ್ವ ಪಡೆದು ಶಕ್ತಿ ತುಂಬಬೇಕು ಎಂದು ನಾರಾಯಣಗೌಡ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್, ಗ್ರಾ.ಪಂ.ಸದಸ್ಯ ನಗರೂರು ನಂಜೇಗೌಡ, ಬಿಜೆಪಿ ಮುಖಂಡರಾದ ಆರ್.ಜಗದೀಶ್, ಕೆ.ವಿನೋದ್, ಅರೆಬೊಪ್ಪನಹಳ್ಳಿ ಸುನಿಲ್, ಬಿ.ಕುಮಾರ್, ಎ.ಎಸ್.ಶ್ರೀನಿವಾಸ್, ಎ.ಎಸ್.ಸುರೇಶ್, ಕೈಗೋನಹಳ್ಳಿ ಕುಮಾರ್, ಎ.ಎಸ್.ವಾಸು, ಕೆ.ಸುನಿಲ್, ಚನ್ನೇಗೌಡ, ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕರೋಠಿ ಅನಿಲ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
—————-ಶ್ರೀನಿವಾಸ್ ಕೆ.ಆರ್ ಪೇಟೆ